ಶನಿವಾರ, ನವೆಂಬರ್ 23, 2013

ಶತಮಾನದ ಗೋಕಥೆ

ಒಂದು ಶತಮಾನವೆಂದರೆ ಬಹಳ ದೀರ್ಘವಾದ ಕಾಲ. ಪಶ್ಚಿಮಘಟ್ಟಗಳ ನಟ್ಟನಡುವಿನ ಉತ್ತರಕನ್ನಡ ಜಿಲ್ಲೆಯ ಘೋರಾಕಾರ ಅಡವಿಯಿಂದ ಆವೃತ್ತವಾದ ಪಟ್ಟಣ ಶಿರಸಿ. ನೂರು ವರ್ಷಗಳ ಹಿಂದೆಯೇ ಇಲ್ಲಿ ಪಶುಪಾಲನೆಗೆ ಪೂರಕವಾಗಿ ಜಾನುವಾರು ಆಸ್ಪತ್ರೆ ಪ್ರಾರಂಭವಾಗಿದ್ದು ಅತ್ಯಂತ ಸೋಜಿಗದ ವಿಷಯ. ಪಶುಪಾಲನೆಯಲ್ಲಿ ಆಗ ವಾಣಿಜ್ಯಿಕ ಉದ್ದೇಶಗಳಿರಲಿಲ್ಲ. ಒಮ್ಮೆ ಊಹಿಸಿಕೊಳ್ಳಿ. ಕ್ರಿ. ಶ. 1901ನೇ ಇಸವಿಯ ಸಮಯ. ಅಂದಿನ ಬ್ರಿಟಿಷ್ ಆಡಳಿತದ 'ಕಾನಡಾ' ಜಿಲ್ಲೆಯ ಘಟ್ಟದ ಮೇಲಿನ ಪ್ರಮುಖ ವ್ಯಾಪಾರಿ ಕೇಂದ್ರ ಶಿರಸಿ. ತಾಲೂಕು ಕೇಂದ್ರವೂ ಹೌದು. ಅಡಿಕೆ, ಏಲಕ್ಕಿ, ಕಾಳುಮೆಣಸು ಇತ್ಯಾದಿ ಸಂಬಾರ ಬೆಳೆಗಳ ಖ್ಯಾತಿ. ಪಟ್ಟಣದ ಜನಸಂಖ್ಯೆ 4000. (ಈಗ ಇದು ಒಂದು ಲಕ್ಷ ಮೀರುತ್ತದೆ). ಆ ವರ್ಷ ಮೈಲಿ ಬೇನೆ ಮತ್ತು ಪ್ಲೇಗ್ ರೋಗದಿಂದಾಗಿ ಇಡೀ ಊರಿಗೆ ಊರೇ ಖಾಲಿ! ಮುಕ್ಕಾಲು ಪಾಲು ಜನ ರೋಗದಿಂದ ತಪ್ಪಿಸಿಕೊಳ್ಳಲು ಶಿರಸಿಯಿಂದ ಕಾಲ್ತೆಗೆದಿದ್ದರೆ ಉಳಿದವರು ರೋಗಕ್ಕೆ ಇಂಜೆಕ್ಷನ್ ಹಿಡಿದುಕೊಂಡು ಬರುತ್ತಿದ್ದ ದಾದಿಯರ ಸೂಜಿಗೆ ಹೆದರಿ ಊರು ಬಿಟ್ಟಿದ್ದರು. ನೂರಾರು ಜನ ಸತ್ತೂ ಹೋಗಿದ್ದರು.

ಮಾನವ ಆರೋಗ್ಯಕ್ಕೆ ಪ್ರಥಮ ಆದ್ಯತೆ ಕೊಡಬೇಕಾದ ಆ ಸಂದರ್ಭದಲ್ಲಿ ಕೂಡಾ ಅಂದಿನ ಬ್ರಿಟಿಷ್ ಸರಕಾರವು ಪಶುಗಳಿಗಾಗಿ ಒಂದು ಆಸ್ಪತ್ರೆಯ ಅಗತ್ಯತೆಯನ್ನು ಮನಗಂಡಿತು. ಅಂತೆಯೇ ಕ್ರಿ. ಶ. 1908 ರಲ್ಲಿ ಶಿರಸಿ ಮುನಿಸಿಪಾಲಿಟಿ ಶಾಲೆಯ ಎದುರಿನ ಧರ್ಮಶಾಲೆಯ ಒಂದು ಪುಟ್ಟ ಕೋಣೆಯಲ್ಲಿ ಪಶುವೈದ್ಯ ಆಸ್ಪತ್ರೆ ಉದಯಿಸಿತು. ಆಸ್ಪತ್ರೆ  ಪ್ರಾರಂಭವಾದರೂ ಅದಕ್ಕೆ ವೈದ್ಯರ ಆಗಮನವಾದದ್ದು ಕ್ರಿ. ಶ. 1911ರಲ್ಲಿ. ಬಾಂಬೆ ಪಶುವೈದ್ಯಕೀಯ ಕಾಲೇಜಿನ ಪದವೀಧರ ಡಾ. ಮೇಲುಕೋಟೆ  ಶ್ರೀನಿವಾಸ ಗರುಡಾಚಾರ್ ಆಸ್ಪತ್ರೆಯ ಪ್ರಪ್ರಥಮ ಪಶುವೈದ್ಯರು. ಶಿರಸಿಯಲ್ಲಿ ಇವರ ಅಮೋಘ ಸೇವೆ ಸತತವಾಗಿ 12 ವರ್ಷ ನಡೆಯಿತು. ಆ ಸಂದರ್ಭದಲ್ಲಿ ಸಮಾಜಸೇವಕರೂ ಶ್ರೀಮಂತರೂ ಆಗಿದ್ದ ಶ್ರೀ ಧರಣೇಂದ್ರಪ್ಪ ಪದ್ಮಪ್ಪ ಆಲೂರರು ಆಸ್ಪತ್ರೆಗೆ ಸುಮಾರು ಎರಡು ಎಕರೆಗಳಷ್ಟು ಸ್ಥಳವನ್ನು ಕ್ರಿ. ಶ. 1923ರಲ್ಲಿ ದಾನ ಮಾಡಿದುದಲ್ಲದೇ ಒಂದು ಕಟ್ಟಡವನ್ನೂ ಕಟ್ಟಿಸಿಕೊಟ್ಟ್ಟಿದ್ದನ್ನು ಮರೆಯಲಾಗದು. ಈಗಿನ ಮಾನದಲ್ಲಿ ಈ ಜಾಗದ ಬೆಲೆ ಐದು ಕೋಟಿ ರೂಪಾಯಿಗಳನ್ನು ಮೀರಬಹುದು. ಅವರು ಬ್ರಿಟಿಷರಿಂದ ರಾವ್ ಬಹದ್ದೂರ್ ಬಿರುದು ಪಡೆದ ಊರ ಪ್ರಮುಖರು. ದಾನವಾಗಿ ಬಂದ ಈ ಸ್ಥಳದಲ್ಲಿ  ಡಾ. ಗರುಡಾಚಾರರು ಒಂದು ವೃತ್ತಾಕಾರದ ಶಸ್ತ್ರಚಿಕಿತ್ಸಾ ಕೊಠಡಿ ನಿರ್ಮಿಸಿದರು. ಇದನ್ನು 1927ನೇ ಇಸವಿಯ ಜನವರಿ 26 ರಂದು ಬ್ರಿಟಿಷ್ ಆಡಳಿತದ ಮುಂಬೈ ಸರ್ಕಲ್ಲಿನ ಐ.ವಿ.ಎಸ್. ಶ್ರೇಣಿಯ ಇಂಗ್ಲೆಂಡಿನ ಪಶುವೈದ್ಯ ಸಿ. ಎಸ್. ಫೇರ್ ಬ್ರದರ್ ಉದ್ಘಾಟಿಸಿದರು (ಚಿತ್ರ ನೋಡಿ). ಈ ಕೊಠಡಿ ಈಗಲೂ ಸುಸ್ಥಿತಿಯಲ್ಲಿದೆ. ಅದೇ ಸ್ಥಳದ ಅದೇ ಕಟ್ಟಡದಲ್ಲಿ ಈಗಲೂ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ವಿಶೇಷವೆಂದರೆ ಈ ಪಶು ಆಸ್ಪತ್ರೆಯಲ್ಲಿ 1911ರಿಂದ ಇಂದಿನವರೆಗೂ ಕಾರ್ಯನಿರ್ವಹಿಸಿದ ಎಲ್ಲ ಪಶುವೈದ್ಯರ ಹೆಸರುಗಳು ಮತ್ತು ಅವರು ಸೇವೆ ಸಲ್ಲಿಸಿದ ಅವಧಿ ಒಂದು ದಿನವೂ ಬಿಡದಂತೆ ದಾಖಲಾಗಿದೆ! ಇದನ್ನೆಲ್ಲ 2012ರ ಫೆಬ್ರುವರಿಯಲ್ಲಿ ನಡೆದ ಶತಮಾನೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾದ ಸ್ಮರಣಸಂಚಿಕೆ ಪುಸ್ತಕದಲ್ಲಿ ಮುದ್ರಿಸಲಾಗಿದೆ.
 ಆಗಿನ ದಿನಗಳಲ್ಲಿ ಸಂವಹನದ ಕೊರತೆಯಿತ್ತು. ಸಾರಿಗೆ ಸೌಲಭ್ಯ ತೀರಾ ಕಡಿಮೆಯಿತ್ತು. ಒಬ್ಬರೇ ವೈದ್ಯರು ಇಡೀ ತಾಲೂಕನ್ನು ಸಂಭಾಳಿಸುವ ಪರಿಸ್ಥಿತಿಯಿತ್ತು. ಹೀಗಾಗಿ ರೈತರು ತಮ್ಮ ಜಾನುವಾರುಗಳ ಕಾಯಿಲೆ ಕಸಾಲೆಗಳಿಗೆ ದಿನಗಟ್ಟಲೆ ಅವರಿಗಾಗಿ ಕಾಯಬೇಕಾಗಿತ್ತು. ಆಗ ಇಲ್ಲಿಯ ತೋಟಿಗರೂ ತುಂಬಾ ಬಡವರೇ. ಐವತ್ತು ಅರುವತ್ತು ವರ್ಷಗಳ ಹಿಂದೆ ಒಂದು ಕ್ವಿಂಟಾಲು ಅಡಿಕೆಯ ದರ ಸುಮಾರು ಹದಿನೈದರಿಂದ ಇಪ್ಪತ್ತು ರೂಪಾಯಿ (ಈಗ ಅದರ ಸಾವಿರ ಪಟ್ಟು ಹೆಚ್ಚು ಬೆಲೆ ಇದೆ). ಎಕರೆಗೆ ನಾಲ್ಕೈದು ಕ್ವಿಂಟಾಲು ಇಳುವರಿ (ಈಗಿನ ಇಳುವರಿ 15-20 ಕ್ವಿಂಟಾಲುಗಳು). ಪಕ್ಕದ ಹಾವೇರಿ, ಅಕ್ಕಿ ಆಲೂರಿನಿಂದ 20 ರೂಪಾಯಿ ಕೊಟ್ಟು ನಾಟಿ ಹಸುಗಳನ್ನು ಕೊಂಡು ತರುತ್ತಿದ್ದರು. ಆಗಲೂ ದಿನಕ್ಕೆ ನಾಲ್ಕೈದು ಲೀಟರು ಹಾಲು ಹಿಂಡುತ್ತಿದ್ದ ಎಮ್ಮೆಗಳಿದ್ದವು. ಅಂಥವಕ್ಕೆ ಇನ್ನೊಂದು ಹತ್ತು ರೂಪಾಯಿ ಜಾಸ್ತಿ. ಜೋಡಿ ಎತ್ತುಗಳಿಗೆ 50 ರಿಂದ 100 ರೂಪಾಯಿ. ಹೀಗೆ ಕೊಂಡು ತಂದ ಜಾನುವಾರುಗಳನ್ನು ಮೇಯಲು ಕಾವಲಿಲ್ಲದೇ ಹೊರಗೆ ಬಿಡುವಂತಿರಲಿಲ್ಲ. ಅಡವಿಯಲ್ಲಿ ಮೇಯುವಾಗ ಹುಲಿ ಹಿಡಿದುಬಿಡುತ್ತಿತ್ತು. (ಈ ಸಮಸ್ಯೆ ಈಗ ಹಳ್ಳಿಯ ನಾಯಿಗಳದು. ಕತ್ತಿಗೆ ಕಟ್ಟಿದ ಕಬ್ಬಿಣದ ಸರಪಳಿಯೂ ಹರಿದುಹೋಗುವಂತೆ ಕಾಡಿನ ಕಿರುಬಗಳು ಊರಿಗೆ ಬಂದು ನಾಯಿಗಳನ್ನು ಎಳೆದೊಯ್ಯುತ್ತವೆ).

ಹಾಲು ಕೂಡ ಆಗ ಮಾರಾಟದ ವಸ್ತುವಾಗಿರಲಿಲ್ಲ. ಹತ್ತಾರು ಜನರಿರುವ ಅವಿಭಕ್ತ ಕುಟುಂಬಗಳಲ್ಲಿ ಇಪ್ಪತ್ತು ಮೂವತ್ತು, ಕೆಲವೊಮ್ಮೆ ಒಂದು ನೂರರವರೆಗೂ ಜಾನುವಾರುಗಳು ಇರುತ್ತಿದ್ದವು. ನಾಟಿ ಮಲೆನಾಡ ಗಿಡ್ಡಗಳೇ ಹೆಚ್ಚು. ಮನೆಗೆ ಉಪಯೋಗಿಸಿ ಹೆಚ್ಚಾದ ಹಾಲು ಮಜ್ಜಿಗೆಗಳನ್ನು ಪುನಃ ದನಗಳಿಗೆ ಕುಡಿಸಿಯೋ ಇಲ್ಲವೇ ಹಳ್ಳದಲ್ಲಿ ಸುರುವಿಯೋ ಖರ್ಚು ಮಾಡುತ್ತಿದ್ದರು. ಇದೇ ಕಾರಣಕ್ಕೆ ಇಲ್ಲಿಯ ಕೆಲವು ಹಳ್ಳಿಗಳಿಗೆ ಮಜ್ಜಿಗೆ ಹಳ್ಳ, ಹಾಲಳ್ಳ (ಹಾಲ ಹಳ್ಳ), ಮೊಸರಕುಣಿ, ತುಪ್ಪದ ಜಡ್ಡಿ ಇತ್ಯಾದಿ ಹೆಸರುಗಳು ರೂಢಿಗತವಾದಂತೆ ಕಾಣುತ್ತದೆ.

ಆಗ ಅಡವಿಕಳ್ಳರೂ ಇದ್ದರು. ದೂರದ ಹಳ್ಳಿಗಳಿಂದ ರೈತರು ತಾವು ಬೆಳೆದ ಅಡಿಕೆ ಮೆಣಸು, ಭತ್ತ ಇತ್ಯಾದಿ ಉತ್ಪನ್ನಗಳನ್ನು ನಲವತ್ತು ಐವತ್ತು ಕಿಲೋಮೀಟರು ದೂರದ ಶಿರಸಿ ಪಟ್ಟಣಕ್ಕೆ ಸಾಗಿಸಬೇಕಾಗುತ್ತಿತ್ತು. ದುರ್ಗಮ ದಾರಿಯ ದಟ್ಟಾರಣ್ಯದಲ್ಲಿ ಜೋಡು ಎತ್ತಿನ ಗಾಡಿಯ ಮೇಲೆ ಸಾಮಾನು ಹೇರಿಕೊಂಡು ಬುತ್ತಿಯನ್ನೂ ಕಟ್ಟಿಕೊಂಡು ಹೊರಡುತ್ತಿದ್ದರು. ನಾಲ್ಕಾರು ದಿನಗಳೇ ತಗಲುವ ದೀರ್ಘ ಪ್ರಯಾಣ. ಕಳ್ಳರಿಂದ ತಪ್ಪಿಸಿಕೊಳ್ಳಲು ಎಂಟು ಹತ್ತು ಬಂಡಿಗಳು ಸಾಲಾಗಿ ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದವು. ಒಮ್ಮೊಮ್ಮೆ ಕಾಡುಗಳ್ಳರು ತನ್ನ ಯಜಮಾನನನ್ನು ದೋಚಿ ಸಾಯಿಸಿದರೂ ಬಂಡಿಯಲ್ಲಿರುವ ಆತನ ಹೆಣದ ಸಮೇತ ಸೀದಾ ಮನೆ ಸೇರುವಷ್ಟು ಬುದ್ಧಿವಂತ ಎತ್ತುಗಳಿದ್ದವು! ಒಮ್ಮೊಮ್ಮೆ ಕಳ್ಳರಿಂದ ತಪ್ಪಿಸಿಕೊಂಡರೂ ಸಾಲಿನ ಹೊಂಚುಹಾಕಿ ಕೂರುತ್ತಿದ್ದ ಹುಲಿಯಿಂದ ತಪ್ಪಿಸಿಕೊಳ್ಳುವುದು ಕಷ್ಟವಿತ್ತು. ಕೊನೆಯಲ್ಲಿರುವ ಬಂಡಿಯ ಎತ್ತಿನ ಕತ್ತಿಗೇ ಬಾಯಿ ಹಾಕಿ ಮ್ಯಾಳೆ ಮುರಿಯುವ ವ್ಯಾಘ್ರಗಳಿದ್ದವು. ಹೀಗಾಗಿ ಹುಲಿಯನ್ನು ಪೂಜಿಸುವ ಪದ್ಧತಿ ಬಂತು. ಈಗಲೂ ರಸ್ತೆಯ ಬದಿಯಲ್ಲಿ, ಅರಣ್ಯದ ಮಧ್ಯೆ ಕಲ್ಲಿನ ಮೂರ್ತಿಯ ಹುಲಿಯಪ್ಪನ ಕಟ್ಟೆಗಳನ್ನು ಕಾಣಬಹುದು.

ಈ ಹಿಸ್ಟರಿ ಹೇಳುತ್ತಿರುವಾಗ ಬರಹಗಾರ ಮಿತ್ರ ಶಿವಾನಂದ ಕಳವೆ ಬರೆದ ಒಂದು ಘಟನೆ ನೆನಪಾಗುತ್ತಿದೆ. ಅದು 1760ನೇ ಇಸವಿ. ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಈಗಿನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಡಲ ತೀರದಲ್ಲಿ ಒಂದು ಕಾಳುಮೆಣಸಿನ ಗೋದಾಮು ತೆರೆದಿದ್ದರು. ಅಲ್ಲಿಂದ ಮೆಣಸು ಖರೀದಿಸಿ ಒಯ್ಯಲು ಜಾನ್ ಬೆಸ್ಟ್ ಎಂಬುವವನ ನೇತೃತ್ವದಲ್ಲಿ 17 ಜನರ ಬ್ರಿಟಿಷ್ ವ್ಯಾಪಾರಿಗಳ ತಂಡವೊಂದು ಹಡಗಿನಲ್ಲಿ ಬಂದಿಳಿಯಿತು. ಅವರ ಜೊತೆ ಬೃಹದ್ಗಾತ್ರದ ಬುಲ್ ಡಾಗ್ ನಾಯಿಯೊಂದಿತ್ತಂತೆ. ಅವರೆಲ್ಲ ಗೋದಾಮಿನತ್ತ ನಡೆದು ಹೋಗುತ್ತಿರುವಾಗ ಆ ನಾಯಿ ಅಲ್ಲೇ ಮೇಯುತ್ತಿದ್ದ ಹಸುವೊಂದನ್ನು ಕಚ್ಚಿ ಸಾಯಿಸಿಬಿಟ್ಟಿತು! ಈ ಸುದ್ದಿ ಕ್ಷಣಾರ್ಧದಲ್ಲಿ ಊರಲ್ಲಿ ಹಬ್ಬಿತು. ಆ ಹಸುವಾದರೋ ಸಾಮಾನ್ಯದ್ದಲ್ಲ. ಊರ ದೇವಸ್ಥಾನಕ್ಕೆ ಬಿಟ್ಟ ಹಸು! ರೊಚ್ಚಿಗೆದ್ದ ಊರವರೆಲ್ಲ ಸೇರಿ ಆ ಗೋಹಂತಕ ನಾಯಿಯ ಜೊತೆಗೆ ಆ ಎಲ್ಲ 17 ವರ್ತಕರನ್ನು ಹೊಡೆದು ಕೊಂದರಂತೆ!

ಈ ಹಿಸ್ಟರಿಯೇ ಒಂದು ಮಿಸ್ಟರಿ!!

ಲೇಖಕರ ಕಿರುಪರಿಚಯ
ಡಾ. ಗಣೇಶ ಎಂ. ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಇವರ ಹುಟ್ಟೂರು. ವೃತ್ತಿಯಲ್ಲಿ ಪಶುವೈದ್ಯರಾದ ಇವರು ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಸಾಲ್ಕಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪಶುವೈದ್ಯ ಸಾಹಿತ್ಯ ಲೋಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ಇವರ ನಾಲ್ಕು ಕನ್ನಡ ಪುಸ್ತಕಗಳು ಹಾಗೂ ಅನೇಕ ಲೇಖನಗಳು ಪ್ರಕಟಣೆ ಕಂಡಿವೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ