ಗುರುವಾರ, ನವೆಂಬರ್ 21, 2013

ವೃತ್ತಿ ಕೌಶಲ್ಯ - ಸಧ್ಯದ ಅಗತ್ಯತೆ

'ವೃತ್ತಿ ಕೌಶಲ್ಯ' (ಸಾಫ್ಟ್ ಸ್ಕಿಲ್) ಎಂಬುದು ಬಹುಚರ್ಚಿತ ವಿಷಯ. ಬಹುಶಃ ಅದರ ಅರ್ಥ ಮತ್ತು ಪ್ರಾಮುಖ್ಯತೆಯ ಬಗ್ಗೆ ಇರುವಷ್ಟು ಪ್ರಶ್ನೋತ್ತರಗಳು, ಬೇರೆ ಯಾವ ವಿಷಯದ ಬಗ್ಗೆಯೂ ಇರಲಿಕ್ಕಿಲ್ಲ. ಎಲ್ಲ ಚರ್ಚೆಗಳ ಅಂತಿಮ ನಿರ್ಧಾರವೆಂದರೆ, ಯಾವುದೇ ವೃತ್ತಿನಿರತ ವ್ಯಕ್ತಿಗೆ ವೃತ್ತಿ ಕೌಶಲ್ಯ ಅಗತ್ಯವಾಗಿ ಇರಲೇಬೇಕು ಎಂಬುದು. ಇಲ್ಲಿ ವೃತ್ತಿನಿರತ ವ್ಯಕ್ತಿ ಎಂದರೆ ಕೇವಲ ವೃತ್ತಿಪರ ಅಥವಾ ತಾಂತ್ರಿಕ ಪದವಿ ಹೊಂದಿ ವೃತ್ತಿ ನಡೆಸುತ್ತಿರುವವನಲ್ಲ; ಯಾವುದೇ ವೃತ್ತಿ ನೆಡೆಸುತ್ತಿರುವ ಯಾರೇ ವ್ಯಕ್ತಿ ಆಗಿರಬಹುದು. ಹಾಗಾಗಿ ಆತ/ಆಕೆ ವೈದ್ಯರಾಗಿರಬಹುದು, ಚಾರ್ಟರ್ಡ್ ಅಕೌಂಟೆಂಟ್ ಆಗಿರಬಹುದು, ಗ್ರಾಹಕ ಸೇವಾ ಅಧಿಕಾರಿಯಾಗಿರಬಹುದು, ವಿಮಾನ ಪರಿಚಾರಕಿಯಾಗಿರಬಹುದು ಅಥವಾ ಹೆಸರಿಸುವ ಇನ್ನಾವುದೇ ವೃತ್ತಿಯವರಾಗಿರಬಹುದು.

ನಮ್ಮ ಕ್ಷೇತ್ರದಲ್ಲಿನ ನಮ್ಮ ಅನುಭವ ಮತ್ತು ಪರಿಣಿತಿ, ನಮ್ಮ ವೃತ್ತಿ 'ಏನು' ಎಂಬುದನ್ನು ಮಾತ್ರ ತಿಳಿಸಿಕೊಡುತ್ತದೆ; ಆದರೆ ವೃತ್ತಿ ಕೌಶಲ್ಯವು ನಮ್ಮ ವೃತ್ತಿ 'ಹೇಗೆ' ಎಂಬುದನ್ನು ಕಲಿಸಿಕೊಡುತ್ತದೆ. ಅಂದರೆ, ಅದು ನಾವು ನಮ್ಮ ವೃತ್ತಿಯನ್ನು ಹೇಗೆ ಮಾಡುತ್ತೇವೆ? ಅದರಲ್ಲಿ ನಮ್ಮನ್ನು ನಾವು ಹೇಗೆ ತೊಡಗಿಸಿಕೊಂಡಿದ್ದೇವೆ? ಇತರರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ? ಸಮಯದ ನಿರ್ವಹಣೆ ಹೇಗೆ ಮಾಡುತ್ತಿದ್ದೇವೆ? ಇತರರ ಎದುರಿಗೆ ನಮ್ಮನ್ನು ನಾವು ಹೇಗೆ ಪ್ರದರ್ಶಿಸಿಕೊಳ್ಳುತ್ತಿದ್ದೇವೆ ಹಾಗೂ ನಮ್ಮ ವೃತ್ತಿಯನ್ನು ಹೇಗೆ ಇತರರ ಮುಂದಿಡುತ್ತಿದ್ದೇವೆ? ಇತ್ಯಾದಿ ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಆದ್ದರಿಂದ ತನ್ನ ವೃತ್ತಿಯ ಬಗ್ಗೆ 'ಏನು' ಎಂಬುದನ್ನು ಮಾತ್ರ ತಿಳಿದ ಸ್ಥಿತಿ ಅಪೂರ್ಣ; 'ಏನು' ಎಂಬುದರ ಜೊತೆಗೆ ಸರಿಯಾದ 'ಹೇಗೆ' ಎಂಬುದನ್ನು ಅರಿತಾಗ ಮಾತ್ರ ಅದು ಪರಿಪೂರ್ಣ ಮತ್ತು ಅದರಿಂದ ನಿಜವಾದ ವೃತ್ತಿ ಪರಿಣಿತಿ ಸಾಧ್ಯ.

ವೈದ್ಯನೊಬ್ಬ ತನ್ನ ರೋಗಿಯ ರೋಗವನ್ನು ಸ್ಪಷ್ಟವಾಗಿ ಕಂಡುಕೊಂಡು, ಅದಕ್ಕೆ ನಿಖರ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಪಡಿಸಿದಾಗ ಅತ್ಯುತ್ತಮ ವೈದ್ಯನೆನಿಸಿಕೊಳ್ಳುತ್ತಾನೆ. ಬದಲಿಗೆ ಚಿಕಿತ್ಸೆಯ ಜೊತೆಗೆ, ರೋಗದ ಬಗ್ಗೆ ಅಗತ್ಯ ಮಾಹಿತಿಯನ್ನು ಸೂಕ್ತ ರೀತಿಯಲ್ಲಿ ತನ್ನ ರೋಗಿಗೆ ನೀಡಿ, ಆತ ಮತ್ತೆ ಆ ರೋಗ ತನ್ನನ್ನು ಆಕ್ರಮಿಸದ ಹಾಗೆ ಎಚ್ಚರಿಕೆ ವಹಿಸುವಂತೆ ಮಾಡಿದರೆ ಅಂತಹ ವೈದ್ಯ ಮಾನವೀಯತೆಯುಳ್ಳ ಶ್ರೇಷ್ಠ ವೈದ್ಯನೆನಿಸಿಕೊಳ್ಳುತ್ತಾನೆ. ಒಬ್ಬ ಸಾಫ್ಟ್-ವೇರ್ ಇಂಜಿನಿಯರ್ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಪ್ರಗತಿಗೆ ಅತ್ಯಂತ ಸೂಕ್ತವಾದ ಪ್ರೋಗ್ರಾಂ ತಯಾರಿಸಿಕೊಟ್ಟಾಗ ಅವನೊಬ್ಬ ಅತ್ಯುತ್ತಮ ಇಂಜಿನಿಯರ್ ಎನಿಸಿಕೊಳ್ಳುತ್ತಾನೆ. ಬದಲಿಗೆ ಆತ ತಾನು ತಯಾರಿಸಿದ ಪ್ರೋಗ್ರಾಂ ಬಗ್ಗೆ ಅದನ್ನು ಬಳಸುವವರು ಸ್ಪಷ್ಟವಾಗಿ ಅರ್ಥೈಸಿಕೊಂಡು ಸುಲಭವಾಗಿ ಬಳಸುವಂತೆ ತಿಳಿಸಿಕೊಟ್ಟರೆ ಅವನೊಬ್ಬ ಶ್ರೇಷ್ಠ ಇಂಜಿನಿಯರ್ ಆಗುತ್ತಾನೆ. ಹೀಗೆ ವೃತ್ತಿ ಕೌಶಲ್ಯವು ನಮ್ಮ ವೃತ್ತಿ ಜೀವನದಲ್ಲಿ ವಹಿಸುವ ಪಾತ್ರದ ಪ್ರಾಮುಖ್ಯತೆ ಹಾಗೂ ಅದು ಮಾಡಬಲ್ಲ ಪವಾಡ ಸದೃಶ ಬದಲಾವಣೆಗಳನ್ನು ಹೆಚ್ಚಾಗಿ ವಿವರಿಸುವ ಅಗತ್ಯ ಖಂಡಿತ ಇಲ್ಲ.

ವೃತ್ತಿ ಕೌಶಲ್ಯವು ವೃತ್ತಿಜೀವನದಲ್ಲಿ ನಮ್ಮ ವ್ಯಕ್ತಿತ್ವವು ಪ್ರಜ್ವಲಿಸುವಂತೆ ರೂಪಿಸಲು ಅಗತ್ಯವಿರುವ ಎಲ್ಲ ಅಂಶಗಳನ್ನೊಳಗೊಂಡಿದ್ದು, ನಮ್ಮ ಕ್ಷೇತ್ರದಲ್ಲಿ ನಾವು ಇತರರಿಗಿಂತ ವಿಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ. ವೃತ್ತಿ ಕೌಶಲ್ಯಗಳೆಂದರೆ ಸಹೋದ್ಯೋಗಿಗಳೊಂದಿಗೆ ಸಾಮರಸ್ಯ ವರ್ಧನೆ, ಉತ್ಕೃಷ್ಟ ಸಂವಹನಾ ಸಾಮರ್ಥ್ಯ, ಸಭ್ಯತೆ ಮತ್ತು ಶಿಷ್ಟಾಚಾರದ ನಡೆ-ನುಡಿ ಹಾಗೂ ಯಥೋಚಿತ ಸಾಮಾಜಿಕ ಸಾಂಸ್ಕೃತಿಕ ಅರಿವು. ಅಲ್ಲದೆ ಅದು ಸಮಯ ಪರಿಪಾಲನೆ, ಒತ್ತಡ ಪರಿಸ್ಥಿತಿಗಳ ನಿರ್ವಹಣೆ, ಬಿನ್ನಾಭಿಪ್ರಾಯಗಳ ನಿಭಾಯಿಸುವಿಕೆ, ಇತರರನ್ನು ಕ್ರಿಯಾಶೀಲತೆಗೆ ಪ್ರೇರೇಪಿಸುವುದು, ನಾಯಕತ್ವ ವಹಿಸುವುದು ಇತ್ಯಾದಿ ಅನೇಕ ಅಂಶಗಳನ್ನೊಳಗೊಂಡಿದೆ. ಜೊತೆಗೆ ಕ್ಷಿಪ್ರವಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಚಾಕಚಕ್ಯತೆ, ವಿಶ್ಲೇಷಣಾ ಸಾಮರ್ಥ್ಯ, ಸಮಸ್ಯೆಗಳನ್ನು ಪರಿಹರಿಸುವ ಜಾಣ್ಮೆ, ಸೃಜನಶೀಲತೆ ಇತ್ಯಾದಿ ಕುಶಲತೆಗಳನ್ನೂ ತನ್ನಲ್ಲಿ ಅಡಗಿಸಿಕೊಂಡಿದೆ.

ಇವೆಲ್ಲವೂ ಯಾವುದೇ ವೃತ್ತಿಗೆ ಅತ್ಯಗತ್ಯ ಕೌಶಲ್ಯಗಳೆಂದು ಎಲ್ಲರೂ ಒಪ್ಪಿದರೂ, ನಮ್ಮ ದುರದೃಷ್ಟವೆಂದರೆ ಇವುಗಳನ್ನು ಯಾವುದೇ ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ಕಲಿಸುವ ಅಥವಾ ಅವುಗಳಿಗೆ ನಮ್ಮನ್ನು ಸಿದ್ಧಪಡಿಸುವ ಪ್ರಯತ್ನಗಳಾಗುತ್ತಿಲ್ಲ. ವಾಸ್ತವವಾಗಿ ನಮ್ಮ ಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಇತರರೊಂದಿಗಿನ ನಮ್ಮ ವರ್ತನೆಗಳು ಈ ವೃತ್ತಿ ಕೌಶಲ್ಯಗಳಿಗೆ ತರಬೇತಿ ನೀಡುತ್ತವೆ ಹಾಗೂ ನಮ್ಮನ್ನು ಯಶಸ್ವೀ ವೃತ್ತಿ ಜೀವನಕ್ಕೆ ಸಿದ್ಧಪಡಿಸುತ್ತವೆ. ಈ ತರಬೇತಿಯನ್ನು ನಾವು ಹೊಂದಲು ಬೇಕಾಗಿರುವುದು ನಮ್ಮ ಸುತ್ತಲಿನ ಜನರನ್ನೂ, ಅವರ ನಡೆ-ನುಡಿಗಳನ್ನೂ, ಅವರಲ್ಲಿ ನಡೆಯುವ ಸಂವಹನಾ ಕ್ರಿಯೆಗಳನ್ನೂ, ಪ್ರಚೋದನೆ-ಪ್ರತಿಕ್ರಿಯೆಗಳನ್ನೂ ಅರ್ಥಪೂರ್ಣವಾಗಿ ಗಮನಿಸುವುದು ಮತ್ತು ಗ್ರಹಿಸುವುದು ಹಾಗೂ ಅವುಗಳಲ್ಲಿ ಸಕಾರಾತ್ಮಕವಾದವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದು. ಒಂದರ್ಥದಲ್ಲಿ ಹೇಳುವುದಾದರೆ ಯಾವುದಾದರೊಂದು ಉತ್ಪನ್ನಕ್ಕೆ ಜಾಹೀರಾತು ಏನನ್ನು ಮಾಡುತ್ತದೆಯೋ ಅದನ್ನು ವೃತ್ತಿ ಕೌಶಲ್ಯವು ನಮ್ಮ ವ್ಯಕ್ತಿತ್ವಕ್ಕೆ ನೀಡುತ್ತದೆ. ಹಾಗಾಗಿ ವೃತ್ತಿ ಕೌಶಲ್ಯವು ಸಧ್ಯದ ಅಗತ್ಯತೆಯಾಗಿದೆ.

ಲೇಖಕರ ಕಿರುಪರಿಚಯ
ಶ್ರೀಮತಿ ರಮಾ ಸತೀಶ್

ಆಂಗ್ಲ ಸಾಹಿತ್ಯ ಐಚ್ಚಿಕ ವಿಷಯವಾಗಿ ಎಂ.ಫಿಲ್. ಪದವಿ ಹೊಂದಿರುವ ಇವರು ಪ್ರಸ್ತುತ ಬೆಂಗಳೂರಿನ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಂಶುಪಾಲರಾಗಿ ಕರ್ತ್ಯವ್ಯ ನಿರ್ವಹಿಸುತ್ತಿದ್ದಾರೆ.

ಐತಿಹಾಸಿಕ ಸ್ಥಳಗಳಿಗೆ ಪ್ರವಾಸ, ಕಾದಂಬರಿ ಓದುವುದು, ಪದಬಂಧ ಬಿಡಿಸುವುದು ಹಾಗೂ ಸಂಗೀತ ಆಲಿಸುವುದು ಇವರ ನೆಚ್ಚಿನ ಹವ್ಯಾಸಗಳು.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ