ಸೋಮವಾರ, ನವೆಂಬರ್ 11, 2013

ಅಶ್ರುತರ್ಪಣ

ಅದೊಂದು ದಿನ ಶನಿವಾರ, ಮುಂಜಾನೆ 8 ರ ಸಮಯ. ನಾನು ಚಿಕಿತ್ಸಾಲಯಕ್ಕೆ ತೆರಳುವ ಸಡಗರದಲ್ಲಿದ್ದೆನು. ನನ್ನ ದೂರವಾಣಿ ಕರೆಯಿತು. ಕೈಗೆತ್ತಿಕೊಂಡು "ಹಲೋ" ಎಂದೆನು.
"ನಮಸ್ತೆ, ನನ್ನ ಹೆಸರು ಶಾಂತಮ್ಮ. ನಾನು ಮಾತನಾಡುತ್ತಿರುವುದು ವೆಟರಿನರಿ ಡಾಕ್ಟರ್‍ ಗಾ?" ಎಂದು ಇಳಿ ವಯಸ್ಸಿನ ಹೆಣ್ಣು ದನಿಯೊಂದು ಹೇಳಿತು.
"ನಮಸ್ತೆ, ಹೌದು ಹೇಳಿಮ್ಮಾ ಏನಾಗಬೇಕು?" ಎಂದೆನು.
"ಡಾಕ್ಟರ್, ನಿಮ್ಮ ನಂಬರ್ ನನ್ನ ಸ್ನೇಹಿತರು ಕೊಟ್ಟರು. ನಮ್ಮ ಸೀಜರ್‍ಗೆ ಅರೋಗ್ಯ ಸರಿಯಿಲ್ಲ. ದಯವಿಟ್ಟು ಬಂದು ಸ್ವಲ್ಪ ನೋಡಬಹುದಾ?" ಎಂದರು.
"ನಿಮ್ಮ ಮನೆ ಎಲ್ಲಿದೆ? ನಿಮ್ಮ ಸೀಜರ್‍ ಗೆ ಏನಾಗಿದೆ?" ಎಂದೆನು.
ಮನೆಯ ವಿಳಾಸವನ್ನು ತಿಳಿಸಿದ ಹೆಂಗಸು ತನ್ನ ಸಾಕು ನಾಯಿಯಲ್ಲಿ ಕಂಡಿದ್ದ ಅನಾರೋಗ್ಯದ ಚಿಹ್ನೆಗಳನ್ನು ತಿಳಿಸಿದರು. ನಾನು ಆ ದಿನ ಸಂಜೆ 6.00 ಘಂಟೆಯ ವೇಳೆಗೆ ಭೇಟಿ ನೀಡುವುದಾಗಿ ತಿಳಿಸಿದ ನಂತರ ದೂರವಾಣಿ ಸಂಭಾಷಣೆ ಅಂತ್ಯಗೊಂಡಿತ್ತು. ತಿಳಿಸಿದ್ದಂತೆ ಸಂಜೆ 6.15 ರ ವೇಳೆಗೆ ಶ್ರೀಮತಿ ಶಾಂತಮ್ಮನವರ ಮನೆಗೆ ಹೋದೆನು. ಸುಮಾರು 70 ರ ವಯಸ್ಸಿನ ಹೆಂಗಸು ನನಗಾಗಿ ಕಾಯುತ್ತಿದ್ದರು.
"ಇದು ಶಾಂತಮ್ಮನವರ ಮನೆಯಾ?" ಎಂದು ಪ್ರಶ್ನಿಸಿದೆನು.
"ಹೌದು ಡಾಕ್ಟರ್, ಬನ್ನಿ.." ಆಮಂತ್ರಿಸಿದರು.
ಮನೆಯೊಳಗೆ ಹೋದೆನು. ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಮನೆಯದು. ಹುಡುಕಿದರೂ ಒಂದಿಷ್ಟು ಅವ್ಯವಸ್ಥೆ ಕಾಣದ ರೀತಿಯಲ್ಲಿ ಸಜ್ಜುಗೊಳಿಸಲಾಗಿತ್ತು. ಅಲ್ಲಿದ್ದ ಕೆಲವು ಭಾವ ಚಿತ್ರಗಳು, ಸ್ಮಾರಕಗಳು, ಪದಕಗಳು ಮನೆಯ ಒಬ್ಬರು ಸೇನೆಯಲ್ಲಿದ್ದರು ಎಂಬುದಕ್ಕೆ ಪುರಾವೆಯಾಗಿದ್ದವು. ಅಲ್ಲಿದ್ದ ಸೋಫಾ ಮೇಲೆ ಕುಳಿತುಕೊಂಡೆನು.
"ಡಾಕ್ಟರ್, ಕುಡಿಯಲು ಏನು ತೆಗೆದುಕೊಳ್ಳುವಿರಿ?" ಎಂದರು ಶಾಂತಮ್ಮ.
"ಏನೂ ಬೇಡಮ್ಮ. ಎಲ್ಲಿದೆ ಸೀಜರ್, ಕರೆತನ್ನಿ" ಎಂದೆನು.
ಒಳ ಹೋದ ಶಾಂತಮ್ಮ ಇಳಿ ಪ್ರಾಯದ ಡ್ಯಾಶ್‍ ಹೌಂಡ್ ತಳಿಯ ಗಂಡು ನಾಯಿಯೊಂದನ್ನು ಕೈನಲ್ಲಿ ಎತ್ತಿಕೊಂಡು ಬಂದರು. ಅದನ್ನು ನನ್ನ ಪಕ್ಕದಲ್ಲಿ ಸೋಫಾದ ಮೇಲೆ ಮಲಗಿಸಿದರು.
"ಇವನೇ ನಮ್ಮ ಸೀಜರ್. 18 ವರ್ಷ ಪ್ರಾಯ ಇವನಿಗೆ. ಕಳೆದ 4 ತಿಂಗಳುಗಳಿಂದ ಇವನಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಕಣ್ಣು ಕಾಣುತ್ತಿಲ್ಲ. ಊಟ ಕಡಿಮೆ ಮಾಡಿದ್ದಾನೆ. ರಾತ್ರಿಯ ವೇಳೆ ಅಳುತ್ತಾನೆ" ಎಂದು ಎಡಬಿಡದೇ ಹೇಳಿದರು.
ಸುಮಾರು 10 ನಿಮಿಷಗಳ ಕಾಲ, ನಾಯಿಯನ್ನು ನಿಧಾನವಾಗಿ ಪರಿಶೀಲಿಸಿದ ನಂತರ ನಾನು ಕೈತೊಳೆಯಲು ನೀರು ಕೇಳಿದೆನು. ಅಲ್ಲಿದ್ದ ವಾಶ್ ಬೇಸಿನ್ ತೋರಿಸಿದ ಶಾಂತಮ್ಮ ಕೋಣೆಯೊಳಗೆ ಹೋದರು. ಕೈತೊಳೆದು ಬರುವ ವೇಳೆಗೆ ಕರವಸ್ತ್ರವೊಂದನ್ನು ತಂದರು. ಅದನ್ನು ಕೈಗೆತ್ತಿಕೊಂಡು ಸೋಫಾದ ಮೇಲೆ ಕುಳಿತೆನು.
"ಡಾಕ್ಟರ್, ಏನಾಗಿದೆ ಸೀಜರ್‍ ಗೆ? ಏನಾದರೂ ಮಾಡಿ. ಅವನು ನಮಗೆ ಬೇಕು" ಎಂದರು.
"ಅಮ್ಮಾ, ನಿಮ್ಮ ಸೀಜರ್ ಅವನ ಪೂರ್ಣ ಆಯಸ್ಸು ಜೀವಿಸಿದ್ದಾನೆ. ಅವನಿಗೆ ಮುಪ್ಪಿನ ತೊಂದರೆಗಳಾಗಿವೆ. ಅವನು ದೃಷ್ಟಿ ಕಳೆದುಕೊಂಡಿದ್ದಾನೆ. ಅವನ ದೇಹದ ಹಿಂಭಾಗಕ್ಕೆ ಪಾಶ್ರ್ವವಾಯು ಉಂಟಾಗಿದೆ. ಇದು ಗುಣಪದಿಸುವುದಕ್ಕೆ ಸಾಧ್ಯವಾಗದು" ಎಂದು ಹೇಳಿದೆನು.
ದುಃಖ ತುಂಬಿದ ದನಿಯಲ್ಲಿ ಶಾಂತಮ್ಮ "ಹೌದಾ ಡಾಕ್ಟರ್. ಸರಿಯಾಗಿ ನೋಡಿ. ಸೀಜರ್‍ಗೆ ಅಂತಹದ್ದೇನು ಆಗಿಲ್ಲ" ಎಂದರು.
ನನ್ನ ತೀರ್ಮಾನವನ್ನು ಮತ್ತೊಮ್ಮೆ ದೃಢವಾಗಿ ತಿಳಿಸಿದೆನು. ಶಾಂತಮ್ಮ ಅಲ್ಲಿದ್ದ ಕುರ್ಚಿಯ ಮೇಲೆ ಕುಸಿದರು. ಅಷ್ಟರಲ್ಲಿ ಎದುರು ಬದಿಯಲ್ಲಿದ್ದ ಕೋಣೆಯಿಂದ ಸುಮಾರು 80 ರ ಆಸುಪಾಸಿನ ಹಿರಿಯ ನಾಗರೀಕರೊಬ್ಬರು ಹೊರಬಂದರು.
"ಹಲೋ ಡಾಕ್ಟರ್, ನಾನು ಮೇಜರ್ ನಾಗರಾಜ ರಾವ್. ಏನಾಗಿದೆ ನನ್ನ ಸೀಜರ್‍ಗೆ. ಶಾಂತ, ಡಾಕ್ಟರ್ ಸೀಜರ್‍ ನ ನೋಡಿದ್ರಾ. ಏನಾಗಿದೆಯಂತೆ?" ಕಾತರದಿಂದ ಕೇಳಿದರು. ಅವರ ನಡೆ ನುಡಿ ನೋಟಗಳು ಅವರಲ್ಲಿದ್ದ ಶಿಸ್ತನ್ನು ಪ್ರತಿಬಿಂಬಿಸುತ್ತಿತ್ತು.
"ರೀ ಸೀಜರ್‍ಗೆ ವಯಸ್ಸಾಗಿದೆಯಂತೆ. ಅವನನ್ನು ಗುಣ ಪಡಿಸಲಾಗದಂತೆ" ಎಂದರು ಶಾಂತಮ್ಮ .
"ಹೌದಾ ಡಾಕ್ಟರ್" ಎನ್ನುತ್ತಾ ಮೇಜರ್ ನಾಗರಾಜ ರಾವ್ ಸೀಜರ್ ಹತ್ತಿರ ಬಂದು ಆತನ ತಲೆಯನ್ನು ಮುಟ್ಟಿದರು.
"ಸರಿ ಡಾಕ್ಟರ್, ನಿಮ್ಮ ಫೀಸ್" ಎಂದರು.
"ಇರಲಿ ಬಿಡಿ ಸರ್. ಏನು ಬೇಡ" ಎಂದು ಹೇಳಿ ನಾನು ಅಲ್ಲಿಂದ ಹೊರಟೆನು.
ವೈರಾಗ್ಯದೆಡೆಗೆ ಸೆಳೆಯುವ ಮುಪ್ಪಿನಲ್ಲಿ ಇದೆಂತಹ ಪ್ರಾಣಿ ವ್ಯಾಮೋಹ ಎಂದು ನೆನೆಯುತ್ತಾ ಮನೆ ಸೇರಿದೆನು.
ರಾತ್ರಿ ಸುಮಾರು 9.30 ರ ಸಮಯ ನನ್ನ ದೂರವಾಣಿ ದೀರ್ಘ ಕರೆ ಮಾಡಿತು. ಇದೊಂದು ಎಸ್. ಟಿ. ಡಿ. ಕರೆ ಇರಬಹುದೆಂದು ನೆನೆದು ಕೈಗೆತ್ತಿಕೊಂಡವನು "ಹಲೋ" ಎಂದೆನು.
"ಹಲೋ, ನನ್ನ ಹೆಸರು ಆರತಿ. ನಾನು ಮೇಜರ್ ನಾಗರಾಜ ರಾವ್ ರವರ ಮಗಳು. ಅಮೆರಿಕದಿಂದ ಕರೆಮಾಡುತ್ತಿದ್ದೇನೆ. ಡಾಕ್ಟರ್, ನೀವು ಈ ದಿನ ನಮ್ಮ ಸೀಜರ್ ನ ನೋಡಿದ್ದರಂತೆ. ಏನಾಗಿದೆ ಡಾಕ್ಟರ್?" ಎಂದು ಕೇಳಿದರು ಆಕೆ.
ನಾನು ಸೀಜರ್‍ನ ಬಗ್ಗೆ ಪೂರ್ಣ ವಿವರ ನೀಡಿದೆನು.
"ಸಾರಿ ಡಾಕ್ಟರ್, ನಿಮಗೆ ತೊಂದರೆ ಕೊಟ್ಟೆ" ಎಂದು ಸಂಭಾಷಣೆ ಮುಗಿಸಿದರು. ನಾನು ವಾರಾಂತ್ಯದ ಸುಖ ನಿದ್ರೆಗೆ ತೆರಳಿದೆನು.
ಮರುದಿನ ಮುಂಜಾನೆ 5.30 ರ ಸಮಯ, ಮತ್ತೆ ದೊರವಾಣಿ  ಕರೆ ಬಂತು. ನಿದ್ದೆಯ ಗುಂಗಿನಲ್ಲಿ ಕೈಗೆತ್ತಿಕೊಂಡು "ಹಲೋ" ಎಂದೆನು.
"ಸಾರಿ ಡಾಕ್ಟರ್, ನಾನು ಅಮೆರಿಕದಿಂದ ಆರತಿ. ಮತ್ತೆ ನಿಮಗೆ ತೊಂದರೆ ಕೊಡುತ್ತಿದ್ದೇನೆ. ನಾನು ನಿನ್ನೆಯಿಂದ ನಮ್ಮ ತಂದೆ ತಾಯಿಯರೊಂದಿಗೆ 3-4 ಬಾರಿ ಮಾತನಾಡಿ ಒಂದು ನಿರ್ಧಾರಕ್ಕೆ ಬಂದಿರುವೆನು. ನೀವು ದಯಮಾಡಿ ನಮ್ಮ ಮನೆಗೆ ಈ ದಿನ ಬೆಳಿಗ್ಗೆ ಹೋಗಿ ನಮ್ಮ ಸೀಜರ್‍ಗೆ ದಯಾಮರಣ ಕಲ್ಪಿಸಿ. ನಿಮಗೆ ತೊಂದರೆ ನೀಡಿದ್ದಕ್ಕೆ ನನಗೆ ಕ್ಷಮೆ ಇರಲಿ" ಎಂದು ಉಸಿರು ಸಿಕ್ಕಿದಂತಹ ದನಿಯಲ್ಲಿ ಒಂದೆ ಬಾರಿಗೆ ಹೇಳಿ ಫೋನ್ ಇಟ್ಟರು. ನನ್ನ ನಿದ್ದೆ ಹೋಗಿತ್ತು. ಏನಾಗುತ್ತಿದೆ ಎಂದು ಚಿಂತಿಸತೊಡಗಿದೆ.
ನನ್ನ ಕೆಲಸಗಳನ್ನು ಪೂರ್ಣಗೊಳಿಸಿ, ದಿನ ಪತ್ರಿಕೆ ಕೈಗೆತ್ತಿಕೊಂಡು ಓದಲು ತೊಡಗಿದೆನು. ಸುಮಾರು 8.10 ರ ಸಮಯ. ಮತ್ತೆ ದೂರವಾಣಿ ಕರೆಗಂಟೆ ಬಾರಿಸಿತು. ಕೈಗೆತ್ತಿಕೊಂಡು "ಹಲೋ" ಎಂದೆನು.
"ಡಾಕ್ಟರ್, ನಾನು ಶಾಂತಮ್ಮ ಮಾತನಾಡುವುದು. ನನ್ನ ಮಗಳು ಆರತಿ ನಿಮ್ಮಲ್ಲಿ ಮಾತನಾಡಿದ್ದಳಂತೆ. ನೀವು 9.00 ಘಂಟೆಗೆ ಬಂದು ಬಿಡಿ" ಎಂದರು. ಅವರ ಮಾತಿನಲ್ಲಿ ದುಃಖ ತುಂಬಿ ಬರುತ್ತಿತ್ತು.
8.45 ಕ್ಕೆ ನಾನು ಹೊರಟವನು ಶಾಂತಮ್ಮನವರ ಮನೆ ತಲುಪಲು 10 ನಿಮಿಷಗಳಾಯಿತು. ಮನೆಯಲ್ಲಿ ನಿರೀಕ್ಷಿತ ಆಮಂತ್ರಣ ಇರಲಿಲ್ಲ. ಒಂದು ರೀತಿಯ ಮೌನ ಆವರಿಸಿತ್ತು. ನಾನು ನನ್ನ ಕಿಟ್ ತೆಗೆದು ಔಷಧ ಸಿದ್ಧಪದಿಸಿಕೊಳ್ಳತೊಡಗಿದೆನು. ಕೋಣೆಯೊಳಗೆ ಹೋದ ಶಾಂತಮ್ಮ ತಮ್ಮ ಏರಡೂ ಕೈಗಳಲ್ಲಿ ಸೀಜರ್ ನನ್ನು ಎತ್ತಿಕೊಂಡು ನಿಧಾನ ನಡಿಗೆಯಲ್ಲಿ ಬಂದವರು ಸೋಫಾ ಮೇಲೆ ಕುಳಿತುಕೊಂಡವರು ತಮ್ಮ ತೊಡೆಯ ಮೇಲೆ ಒಂದು ಒಳ್ಳೆಯ ಬಟ್ಟೆ ಹಾಸಿಕೊಂಡು ಸೀಜರ್‍ನನ್ನು ಮಲಗಿಸಿಕೊಂಡರು. ಅವರ ಹಿಂದೆ ಶುಭ್ರವಾದ ಪಂಚೆ ಜುಬ್ಬಾ ಹಾಕಿಕೊಂಡಿದ್ದ ಮೇಜರ್ ನಾಗರಾಜ ರಾವ್ ರವರು ನಿಧಾನವಾಗಿ ನಡೆದು ಬಂದರು. ಮೇಜರ್ ನಾಗರಾಜ ರಾವ್‍ ರವರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಪಡೆದ ನಂತರ ನಾನು ಸೀಜರ್‍ಗೆ ಔಷಧವನ್ನು ನೀಡಲು ಸಿದ್ಧನಾದೆನು. ದೂರವಾಣಿ ಕರೆಗಂಟೆ ಬಾರಿಸಿತು.
ಮೇಜರ್ ನಾಗರಾಜ ರಾವ್ ರವರು ಫೋನ್ ತೆಗೆದುಕೊಂಡರು, "ಹಲೋ ಆರತಿ, ಡಾಕ್ಟರ್ ಬಂದಿದ್ದಾರೆ. ಇನ್ನೇನು ಎಲ್ಲ ಆಯಿತು" ಎಂದವರು ಫೋನ್ ರಿಸೀವರ್ ಸೀಜರ್ ನ ಬಳಿ ಹಿಡಿದರು.
ಆ ಬದಿಯಿಂದ "ಬೈ ಸೀಜರ್, ಮೇ ಗಾಡ್ ಬ್ಲೆಸ್ ಯು" ಎಂಬ ಮೆಲುದನಿ ಕೇಳಿಬಂತು.
ದೂರವಾಣಿಯನ್ನು ಅದರ ಸ್ಥಾನದಲ್ಲಿಟ್ಟವರು "ಡಾಕ್ಟರ್, ಒಂದು ನಿಮಿಷ ಬಂದೆ" ಎಂದು ಹೇಳಿ ಕೋಣೆಯೊಳಗೆ ನಡೆದರು. ಕೆಲ ನಿಮಿಷ ಕಳೆದಿರಬಹುದು, ಮೇಜರ್ ನಾಗರಾಜ ರಾವ್ ರವರು ತಮ್ಮ ವೃತ್ತಿ ಜೀವನದ ಪೂರ್ಣ ಸಮವಸ್ತ್ರದೊಂದಿಗೆ ಹೊರ ಬಂದರು. ಕಾಲು ಜೋಡಿಸಿ ನಿಂತವರು "ಸರಿ ಡಾಕ್ಟರ್, ನಿಮ್ಮ ಕೆಲಸ ಮಾಡಿ" ಎಂದರು.
ಶಾಂತಮ್ಮನವರ ತೊಡೆಯ ಮೇಲೆ ಮಲಗಿದ್ದ ಸೀಜರ್‍ ಗೆ ಔಷಧ ಅಳವಡಿಸಲು ನಾನು ಪ್ರಾರಂಭಿಸಿದೆನು. ಒಂದೆರಡು ಕ್ಷಣಗಳಲ್ಲಿ ಸೀಜರ್ ದೀರ್ಘ ಉಸಿರೊಮ್ಮೆ ಬಿಟ್ಟು ಅಂಗಾಂಗಳನ್ನು ಸಡಿಲಿಸಿದನು, ಆತನ ನಾಲಿಗೆ ಹೊರ ಬಂದಿತ್ತು. ಶಾಂತಮ್ಮ ನವರ ದುಃಖದ ಚಿಲುಮೆ ಒಡೆದಿತ್ತು. ಸೀಜರ್‍ನನ್ನು ಬಿಗಿದಪ್ಪಿ ಅಳಲು ಆರಂಭಿಸಿದರು.
ಮೇಜರ್ ನಾಗರಾಜ ರಾವ್ ರವರು ಮಿಲಿಟರಿ ಸಲ್ಯೂಟ್ ಮಾಡಿ, ತಮ್ಮ ತಲೆಯ ಮೇಲೆ ಇದ್ದ ಟೋಪಿಯನ್ನು ತೆಗೆದು ಕೈಯಲ್ಲಿ ಹಿಡಿದು ತಲೆ ಬಗ್ಗಿಸಿ ನಿಂತರು. ಅವರ ಎರಡೂ ಕಣ್ಣುಗಳಿಂದ ನುಣುಪಾದ ಕೆನ್ನೆಗಳ ಮೇಲೆ ಅಶ್ರುಧಾರೆ ಹರಿದುಬಂದಿತ್ತು.

ಲೇಖಕರ ಕಿರುಪರಿಚಯ
ಡಾ. ಶಿವಕುಮಾರ್

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ಮೂಲತಃ ಮೈಸೂರಿನವರು. ವೃತ್ತಿಪರ ಲೇಖನಗಳು ಮತ್ತು ತಾಂತ್ರಿಕ ಪುಸ್ತಕಗಳ ಬೃಹತ್ ಸಂಗ್ರಹ ಹೊಂದಿರುವ ಇವರಿಗೆ ಓದು ಬರಹಗಳೆಡೆಗೆ ಹೆಚ್ಚಿನ ಆಸಕ್ತಿ.

ದಿನಪತ್ರಿಕೆಗಳಲ್ಲಿ ಜನಪ್ರಿಯ ಲೇಖನಗಳ ಮೂಲಕ ಸಾಮಾನ್ಯ ಜನರಲ್ಲಿ ಪಶು ಪ್ರಾಣಿಗಳೆಡೆ ಒಲವು ಮೂಡಿಸುವುದು ಇವರ ಅತಿಪ್ರಿಯವಾದ ಹವ್ಯಾಸ.

Blog  |  Facebook  |  Twitter

3 ಕಾಮೆಂಟ್‌ಗಳು:

  1. ಡಾ. ಶಿವಕುಮಾರ್ ರವರ ಲೇಖನದಲ್ಲಿ ಪ್ರಾಣಿ ಒಡೆಯರುಗಳಲ್ಲಿ ತಮ್ಮ ಮತ್ತು ಸಾಕಿದ ಪ್ರಾಣಿ ಯೊಂದಿಗೆ ವಾಸ್ತಲ್ಯ ಪ್ರೇಮ ಸಂಬದದ ಬೆಸುಗೆ ಎಷ್ಟು ಗಾಡವಾ ಗಿರುತ್ತದೆ ಮತ್ತು ಅದನ್ನು ಶಾಸ್ವತವಾಗಿ ಅಗಲಬೇಕಾದ ಸಂದರ್ಭಗಳಲ್ಲಿ ಅವರಿಗೆ ಆಗಬಹುದಾದ ಮಾನಸಿಕ ಸಂಕಟ ವನ್ನು ಇದು ಪ್ರತಿಬಿಂಬಿಸುತ್ತದೆ . ಇದು ಪಶುವೈದ್ಯ ರ ವೃತ್ತಿ ಜೀವನದಲ್ಲಿ ಸರ್ವೇ ಸಾಮಾನ್ಯದ ಸಂಗತಿಯಾಗಿದೆ

    ಪ್ರತ್ಯುತ್ತರಅಳಿಸಿ
  2. ಹೃದಯಸ್ಪರ್ಶಿ ಬರಹ. ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ