ಶುಕ್ರವಾರ, ನವೆಂಬರ್ 8, 2013

ಆಸೆ

ಆಸೆ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಒಂದು ರೀತಿಯಲ್ಲಿ ನೋಡಿದರೆ ಆಸೆಯೇ ಎಲ್ಲ ರೀತಿಯ ಅಭಿವೃದ್ಧಿಗಳಿಗೆ ಕಾರಣ. ಆಸೆಯೇ ನಮ್ಮನ್ನು ಜಡತ್ವದಿಂದ ಚಲನಶೀಲತೆಯ ಕಡೆಗೆ ಕೊಂಡೊಯ್ಯುವ ಒಂದು ದಿವ್ಯ ಶಕ್ತಿ.

ಇಷ್ಟಕ್ಕೂ ಆಸೆ ಎಂದರೇನು? ಹಲವು ಮಹಾಪುರುಷರು ಆಸೆ ಕೆಟ್ಟದ್ದೆಂದು ಏಕೆ ಹೇಳುತ್ತಾರೆ? ಹಾಗೂ ಆಸೆಯೇ ಇಲ್ಲದ ಮನಸ್ಥಿತಿಯನ್ನು ತಲುಪಲು ಏಕೆ ಹಪಹಪಿಸುತ್ತಾರೆ?  ನಾನೇಕೆ ಆಸೆಯನ್ನು ಧನಾತ್ಮಕವಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದೇನೆ? ನಿಜವಾಗಿಯೂ ಆಸೆ ಕೆಟ್ಟದ್ದೇ? ಸ್ವಾರ್ಥದಿಂದ ಆಸೆಯೇ ಅಥವಾ ಆಸೆಯಿಂದ ಸ್ವಾರ್ಥವೇ? ಆಸೆ ಮನುಕುಲದ ಪಾಲಿಗೆ ಒಂದು ವರವೇ ಅಥವಾ ಒಂದು ಭಯಂಕರ ಶಾಪವೇ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುವ ಒಂದು ಪ್ರಯತ್ನವನ್ನೂ ನಾನೇ ಮಾಡಿದೆ. ಆ ಪ್ರಯತ್ನದಲ್ಲಿ ನನ್ನ ಮನಸ್ಸಿಗೆ ಅನಿಸಿದ ಕೆಲ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ 'ಆಸೆ' ನನಗೆ.

ಮೇಲೆ ನಾನು ಹೇಳಿದಂತೆ ಅನೇಕ ಮಹಾಪುರುಷರೂ, ಸಿದ್ಧರೂ, ಸಾಧು ಸಂತರೂ, ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ್ದಾರೆ. ಆಸೆಯನ್ನು ತ್ಯಜಿಸಿದವನು ಮಹಾತ್ಮನಾಗುತ್ತಾನೆ. ಅಂತಹವನೇ ಮನುಕುಲದ ಒಳಿತಿಗೆ ಕಾರಣನಾಗುತ್ತಾನೆ ಎಂಬಿತ್ಯಾದಿ ಅಭಿಪ್ರಾಯಗಳನ್ನು ತಮ್ಮ ಭೋಧನೆಗಳ ಮೂಲಕ ಜಗತ್ತಿಗೆ ಸಾರುತ್ತಾ ಬಂದರು, ಈಗಲೂ ಹಾಗೆಯೇ ಬೋಧಿಸುತ್ತಿದ್ದಾರೆ. ಅಂದರೆ, ಇವರೆಲ್ಲರಿಗೂ ಆಸೆಯೇ ಇಲ್ಲವೆಂದು ಅರ್ಥವೇ? ಇವರೆಲ್ಲರೂ ಆಸೆಯನ್ನು ಸಂಪೂರ್ಣವಾಗಿ ತೊರೆದು ಬಿಟ್ಟಿದ್ದಾರೆಯೇ? ಹಾಗಿದ್ದರೆ, ಇಡೀ ಮನುಷ್ಯ ಕುಲದ ಉದ್ಧಾರವನ್ನು ಬಯಸುವ ಇವರುಗಳ ಮನಃಸ್ಥಿತಿಯೂ ಒಂದು ರೀತಿಯ ಆಸೆಯಲ್ಲವೇ? ಬದುಕಬೇಕೆಂಬ ಬಯಕೆಯೂ ಆಸೆಯಲ್ಲವೇ? ಆಸೆಯನ್ನು ತೊರೆದು ಮನುಷ್ಯ ಬದುಕಲಾದೀತೆ? ಬದುಕಿದರೆ ಅದೆಂತಹಾ ಬದುಕು? ಅದು ಪ್ರಾಣಿ ಜೀವನಕ್ಕಿಂತಲೂ ಕಡೆಯಾಗುವುದಿಲ್ಲವೇ?

ಒಂದು ಸಣ್ಣ ಇರುವೆಗೂ ಆಸೆ ಇರುತ್ತದೆ. ಅದು ಬದುಕುವ ಆಸೆ, ಮುಂದಿನ ದಿನದ ಸೂರ್ಯೋದಯವನ್ನು ಕಾಣುವ ಆಸೆ. ತನ್ನ ಸಹಜೀವಿಗಳೊಟ್ಟಿಗೆ ಬದುಕುವ ಆಸೆ ಅದು. ಪ್ರತಿಯೊಂದು ಜೀವಿಗೂ ಬದುಕುವ, ಅಂತೆಯೇ ತನ್ನ ಕುಲದ ಪ್ರಗತಿಯನ್ನು ಕಾಣುವ ಆಸೆ ಇದ್ದೇ ಇರುತ್ತದೆ. ತನಗೂ, ತನ್ನವರಿಗೂ ಅಗತ್ಯ ವಸ್ತುಗಳಾದ ವಾಸಸ್ಥಳದ ಹಾಗೂ ಆಹಾರಗಳ ಕೊರತೆ ಎಂದಿಗೂ ಆಗದಿರಲಿ ಎನ್ನುವ ಆಸೆ ಅಥವಾ ದೂರದೃಷ್ಟಿ ಇದ್ದೇ ಇರುತ್ತದೆ. ಈ ಬಗೆಯ ಆಸೆಯೇ ಜೀವನಾಧಾರ. ಇನ್ನೂ ಜೀವಕುಲ ಬೆಳೆದು ಪ್ರಗತಿ ಹೊಂದುತ್ತಿರುವುದಕ್ಕೆ ಇದೇ ಆಸೆಯೇ ಕಾರಣ. ಒಂದು ರೀತಿಯಲ್ಲಿ ಈ ಆಸೆಯೇ ಆಮ್ಲಜನಕವಿದ್ದಂತೆ! ಎಲ್ಲಾ ಜೀವಿಗಳ ಸಂತಾನೋತ್ಪತ್ತಿಗೂ ಈ ಆಸೆಯೇ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ? ಎಲ್ಲಾ ರೀತಿಯ ಪ್ರಗತಿಗೂ, ವೈಜ್ಞಾನಿಕ ಆವಿಷ್ಕಾರಗಳಿಗೂ, ಆಸೆಯೆ ಮೂಲ. ಜೇನು ಹುಳುಗಳು ತಮಗಾಗಿ ಹಾಗು ತಮ್ಮ ಮುಂದಿನ ಪೀಳಿಗೆಗಾಗಿ ಮಳೆಗಾಲದಲ್ಲಿ ಉಪಯೋಗವಾಗಲೆಂದು ಜೇನು ತುಪ್ಪವನ್ನು ಕಷ್ಟಪಟ್ಟು ಹೂಗಳಿಂದ ಮಕರಂದವನ್ನು ಸಂಗ್ರಹಿಸಿ ತಂದು ತಯಾರಿಸಿ ಶೇಖರಿಸಿಟ್ಟುಕೊಂಡಿರುತ್ತವೆ. ಜೇನು ಹುಳುಗಳನ್ನು ಮನುಷ್ಯರು ಹಿಂಸಿಸಿ ಅಥವಾ ಓಡಿಸಿ ಆ ಜೇನು ತುಪ್ಪವನ್ನು ಪಡೆಯುತ್ತಾರೆ. ನಂತರ ಜೇನು ಹುಳುಗಳ ಜೇನು ತುಪ್ಪದ ಉತ್ಪಾದನೆಯನ್ನು ನಿಸ್ವಾರ್ಥ ಸೇವೆ ಎಂದು ಬಣ್ಣಿಸಿ ತಮ್ಮ ಆಸೆಯಿಂದ ತಮ್ಮ ಸ್ವಾರ್ಥಕ್ಕಾಗಿ ಮಾಡಿದ ಹಿಂಸಾಪೂರ್ವಕ ದರೋಡೆಯನ್ನು ಮುಚ್ಚಿ ಹಾಕುತ್ತಾರೆ ಅಲ್ಲದೇ ಅದನ್ನು ದೇವರು ತಮಗಾಗಿ ಮಾಡಿದ ಸೃಷ್ಟಿ ಎಂದು ತಾವು ಮಾಡಿದ ಪಾಪಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಪ್ರಕೃತಿಯಲ್ಲಿ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳೂ ತಮ್ಮ ಬಳಕೆಗೆ ಎಂದು ಮನುಷ್ಯರು ತಿಳಿದುಕೊಂಡು ಅತಿಯಾದ  ಆಸೆಯ ಹಿಂದೆ ಬಿದ್ದು ವಿನಾಶದಂಚಿಗೆ ಸಾಗುತ್ತಿರುವುದು ದುರಂತ.

ಆಸೆಯಿಂದಲೇ ಸೃಷ್ಟಿ, ಆಸೆಯಿಂದಲೇ ಸ್ಥಿತಿ ಹಾಗು ಆಸೆಯಿಂದಲೇ ಲಯ ಅಥವ ವಿನಾಶ. ಹೀಗೆ ಆಸೆಯು ತ್ರಿಮೂರ್ತಿ ಸ್ವರೂಪ. ಆಸೆಯಿಂದಲೇ ಎಲ್ಲವೂ, ಆಸೆಯಿಂದಲೇ ಯಾವುದೂ ಇಲ್ಲ. ಆಸೆಯೇ ಶೂನ್ಯ, ಆಸೆಯೇ ಸಂಪೂರ್ಣ. ಆಸೆಯನ್ನು ತಾನು ಆಳಿದರೆ ಮಾನವ, ಆಸೆ ತನ್ನನ್ನು ಆಳಗೊಟ್ಟರೆ ಅವನೇ ದಾನವ! ನಮ್ಮಲ್ಲಿ ಅನೇಕರು ಆಸೆಯಿಂದ ಆಳಿಸಿಕೊಂಡು ಎಂತಹ ಸ್ಥಿತಿಗೆ ತಲುಪಿದ್ದಾರೆ ಹಾಗೂ ತಲುಪುತ್ತಿದ್ದಾರೆ ಎಂದು ನಾವೆಲ್ಲರು ದಿನ ನಿತ್ಯ ಕಾಣುತ್ತಲೇ ಇದ್ದೇವೆ ಅಲ್ಲವೆ?

ಮನುಷ್ಯರದು ಲಯದತ್ತ ಅಥವ ವಿನಾಶದತ್ತ ಕೊಂಡೊಯ್ಯುವ ಶಕ್ತಿ ಹೊಂದಿದ (ಅತಿ?) ಆಸೆಯಾದರೆ, ಮಾನವೇತರ ಜೀವಿಗಳದ್ದು ಹಾಗಲ್ಲ. ತಾನು ಬದುಕಿ ಇತರರನ್ನೂ ಬದುಕಗೊಡುವ ಹೃದಯ ಶ್ರೀಮಂತಿಕೆಯಿಂದ ಕೂಡಿದ ಆಸೆ ಅದು. ಆ ಬಗೆಯ ಆಸೆಯನ್ನೆ ಬಹುಶಃ ಮಹಾಪುರುಷರುಗಳು ಮನುಷ್ಯಮಾತ್ರರಾದ ನಮ್ಮಿಂದ ಅಪೇಕ್ಷಿಸಿರಬಹುದು. ಅವರ ದೃಷ್ಟಿಯಲ್ಲಿ ಆಸೆಯೆಂದರೆ ಸಾಮಾನ್ಯ ಮನುಷ್ಯರಿಗಿರುವ ಹೆಬ್ಬಯಕೆ. ಬಹುಶಃ ಆ "ದುರಾಸೆ"ಯನ್ನು ನಾವು ಅಂದರೆ ಮನುಷ್ಯಮಾತ್ರರು ತ್ಯಜಿಸಿ ಹೃದಯ ವೈಶಾಲ್ಯತೆಯಿಂದ ಕೂಡಿದ (ಪ್ರಾಣಿಗಳಲ್ಲಿರುವಂತೆ ಎಂದು ಹೇಳಬೇಕಾಗಿಲ್ಲವಷ್ಟೆ?) ಆಸೆಯನ್ನು ಹೊಂದಲು ಶಕ್ಯವಾದರೆ ನಾವು ಪ್ರತಿ ಸೃಷ್ಟಿಗೆ, ಹಾಗು ಪ್ರಕೃತಿಯ ಸಮತೋಲನಸ್ಥಿತಿಗೆ, ಕಾಲದ ಯಾತ್ರೆಯಲ್ಲಿ ಸಹಜವಾದ ಅಳಿವಿಗೆ, ಮತ್ತೆ ಮರುಹುಟ್ಟಿಗೆ ಸಹಜವಾಗಿ ಸಹಕರಿಸಿ ನಾವೆಲ್ಲರೂ ತ್ರಿಮೂರ್ತಿಗಳಾಗಬಹುದು ಅಲ್ಲವೆ?

ಲೇಖಕರ ಕಿರುಪರಿಚಯ
ಶ್ರೀ ಶ್ರೀಧರ್ ಟಿ. ಎಸ್.

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಅಬಸಿ ಗ್ರಾಮದವ ಇವರು ಹುಟ್ಟಿನಿಂದಲೇ ಅಂಧರು. ಭಾರತದಲ್ಲಿರುವ ಬೆರಳೆಣಿಕೆಯಷ್ಟು ಅಂಧ ಸಾಫ್ಟ್-ವೇರ್ ಇಂಜಿನಿಯರ್ ಗಳಲ್ಲಿ ಇವರೂ ಒಬ್ಬರು.

ಕಂಪ್ಯೂಟರ್‍ನ ಪರದೆಯ ಮೇಲೆ ಬರೆದಿರುವ ಪಠ್ಯವನ್ನು ಧ್ವನಿ ರೂಪಕ್ಕೆ ಪರಿವರ್ತಿಸಿ ಓದಿ ಹೇಳುವ ತಂತ್ರಾಂಶವೊಂದನ್ನು ಕನ್ನಡ ಭಾಷೆಗೂ ತರುವಲ್ಲಿ ಕೆಲಸ ಮಾಡಿರುವ ಇವರು ಪ್ರಸ್ತುತ ಬೆಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಬರೆಯುವುದು, ಹರಟುವುದು, ಕ್ರೀಡೆಗಳನ್ನು (ಕ್ರಿಕೆಟ್, ಕೆಲವೊಮ್ಮೆ ಟೆನ್ನಿಸ್) ನೋಡುವುದು ಹವ್ಯಾಸ.

Blog  |  Facebook  |  Twitter

3 ಕಾಮೆಂಟ್‌ಗಳು:

  1. ಧನ್ಯವಾದಗಳು ಶ್ರೀಧರ್. ಆಸೆ ಪಾಸೆ ಮಾಡಿಬಿಟ್ರಲ್ಲ!!

    ;-)

    ಒಮ್ಮೆ ಧರ್ಮ-ಅರ್ಥ-ಕಾಮ-ಮೋಕ್ಷ ಇವು ನಾಲ್ಕರಲ್ಲಿ ಯಾವುದು ಶ್ರೇಷ್ಠ ಎಂದು ಚರ್ಚೆ ನಡೆಯಿತಂತೆ. ಆಗ ಧರ್ಮರಾಜನಾದ ಯುಧಿಷ್ಠಿರ, ಸಹಜವಾಗಿ ಧರ್ಮವೇ ದೊಡ್ಡದು ಎಂದನಂತೆ. ಧರ್ಮವೇ ಸಮಾಜವನ್ನು ಕಾಪಾಡುವ ಶಕ್ತಿ, ಧರ್ಮದಿಂದಲೇ ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯುವುವು ಎಂದು ಅವನ ಅನಿಸಿಕೆ. ಆ ಕಾಲದ ಅರ್ಥಶಾಸ್ತ್ರದ ಮಹಾಪಂಡಿತನಾದ ಅರ್ಜುನ ಅರ್ಥ ದೊಡ್ಡದು ಎಂದನಂತೆ. ಎಲ್ಲದಕ್ಕೂ ದುಡ್ಡು ಬೇಕು. ದುಡ್ಡಿದ್ದರೆ ಕಾರ್ಯ ಎಂದು. ಆಗ ಭೀಮ ಹೇಳಿದನಂತೆ ಯೆಲ್ಲಕ್ಕಿತಂತಲೂ ಕಾಮವೆ ದೊಡ್ಡದು ಎಂದು. ಮೂವರೂ ತಮ್ಮ ತಮ್ಮ ವಿಚಾರಗಳೊಡನೆ ಶ್ರೀಕೃಷ್ಣನ ಬಳಿ ಹೋದರಂತೆ. ಆಗ ಕೃಷ್ಣ ಹೇಳಿದನಂತೆ, ಭೀಮನ ಮಾತಿನಂತೆ ಕಾಮವೇ ದೊಡ್ಡದು ಎಂದು.
    ಕಾಮವೆಂದರೆ ಈಗಿನ ಜನಕ್ಕೆ ಅಪಾರ್ಥ ಆಗುವುದೇ ಹೆಚ್ಚು. ಕಾಮ ಎಂದರೆ ಆಸೆ ಎಂದಷ್ಟೇ ಅರ್ಥ. ಕೃಷ್ಣನು ಹೇಳುತ್ತಾನೆ ಆಸೆ ಬೇಡ ಎನ್ನುವುದೇ ಒಂದು ಆಸೆ ಅಲ್ಲವೇ. ಆಸೆ ಇಲ್ಲದೆ ಜಗತ್ತಿಲ್ಲ. ಅತಿ ಆಸೆ ಆದರೂ ಈ ಜಗತ್ತು ಇಲ್ಲವಾಗುತ್ತದೆ. ಆಸೆ ಇಲ್ಲದಿರುವುದು ಸೋಮಾರಿತನದ ಪರಮಾವಧಿ. ಏನು ಮಾಡಬೇಕೆಂದರೂ ಮೊದಲು ಆಸೆ ಇರಬೇಕು.
    ಆಸೆ ಒಳ್ಳೆಯದು ಅತಿಯಾಸೆ ಕೆಟ್ಟದ್ದು ಎಂದು ಮನವರಿಸಿದ ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಪ್ರಿಯ ಶ್ರೀಧರ ಅವರೇ, ಇಂದು ಕಣ್ಣಿದ್ದವರಲ್ಲಿ ಈದುವ ಬರೆಯುವ ಆಸೆ ಬತ್ತಿ ಹೋಗುತ್ತದೆ. ಅದನ್ನು ಮೀರಿ ಬಳೆಯುವ ಆಸೆಯನ್ನು ಎಲ್ಲರಲ್ಲೂ ಚಿಗುರಿಸುವ ತಮ್ಮ ಕಾರ್ಯ ನಿಜಕ್ಕೂ ಅದ್ಬುತ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಹೊಂದಿವಿರಿ. ಆ ನಿಮ್ಮ ಆಸೆ ನೆರವೇರಲಿ ಎಂದು ಆಶಿಸುವ
    ಆರ್.ಬಿ.ಗುರುಬಸವರಾಜ.

    ಪ್ರತ್ಯುತ್ತರಅಳಿಸಿ