ಮಂಗಳವಾರ, ನವೆಂಬರ್ 5, 2013

ನಾನೂ ಇಲ್ಲಾ! ನೀನೂ ಇಲ್ಲಾ!! ಹಾಗಾದ್ರೆ ಯಾರು ಇದೆಲ್ಲಾ!!!

ನನ್ನದೂ ಅಲ್ಲ, ನಿನ್ನದೂ ಅಲ್ಲ, ಹಾಗಾದ್ರೆ ಯಾರದು ಇದೆಲ್ಲಾ? ನಾನು ಯಾರು? ನೀನು ಯಾರು? ಇವೆಲ್ಲಾ ಯಾರು? ಯಾರದು? ಇಂತಹ ಅನೇಕಾನೇಕ ಗೊಂದಲಗಳಿಂದ ತಳಮಳಗೊಂಡು, ನಾನು ತಿಳಿದಿರುವುದೇ ಸರ್ವಸ್ವ, ತಿಳಿಯದಿರುವುದು ಶೂನ್ಯ. ನಾನು ಸರ್ವಸ್ವವೋ? ಸರ್ವಸ್ವವೂ ನಾನೋ ಎಂದರಿಯದೆ ನಾನೇ ಶ್ರೇಷ್ಠ ಎಂಬ ಅಹಂಕಾರದಿಂದ, ತಿಳಿಯಬೇಕಾದ್ದನ್ನು ತಿಳಿಯದಿರುವುದು, ತಿಳಿಯಬಾರದ್ದನ್ನು ತಿಳಿಯುವುದು, ಇಂತಹ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದ ನಮಗೆ ಜಿಜ್ಞಾಸೆ ಮೂಡಿಸಿ, ಸರಿ ಹೆಜ್ಜೆಯನ್ನಿಡಲು ಭಗವಾನ್ ಶ್ರೀ ರಮಣ ಮಹರ್ಷಿಯವರ ಉಪದೇಶಸಾರದ ಸಿಂಚನ ಮಾರ್ಗದರ್ಶನವಾಗಿದೆ.

ಇಲ್ಲದೆ ಇರುವಿಕೆಯಿಂದ ಇರುವಿಕೆ ಬರುವುದಿಲ್ಲ. ತಿಳಿದ ನಿಯಮಗಳು ಕನಿಷ್ಠ. ತಿಳಿಯದ ನಿಯಮಗಳು ಅಪಾರ.  ಪ್ರತಿಯೊಂದು ಕರ್ಮದ ಫಲವೂ ನಿಯಮದಿಂದ ನಿಯಂತ್ರಿತವಾಗಿದೆ. ಈ ನಿಯಂತ್ರಣದ ಹಿಂದಿರುವ ಶಕ್ತಿ ಯಾವುದು? ಜೀವನವು ಅರ್ಥಪೂರ್ಣ ಎಂಬ ಪರಿಪೂರ್ಣ ಸತ್ಯವನ್ನು ಅರಿಯಬೇಕು. ನಾವು ಮಾಡುವ ಕರ್ಮದಲ್ಲಿ ಆತ್ಮವಿಶ್ವಾಸ ಇರಬೇಕು ಆತ್ಮ ವಿಶ್ವಾಸದಲ್ಲಿ ಧರ್ಮದ ಶಕ್ತಿ ಇರುತ್ತದೆ. ಧರ್ಮದ ಶಕ್ತಿಯ ಹಿಂದೆ ಮಾಡಬೇಕಾದಂತಹ ಧಾರ್ಮಿಕ ಕರ್ಮಕ್ಕೆ ಧೈರ್ಯ ಇರುತ್ತದೆ. ಅಧಾರ್ಮಿಕ ಕರ್ಮಗಳನ್ನು ಬಿಡಲು ಧೈರ್ಯ ಇರುತ್ತದೆ. ಇದೇ ಪಕ್ವತೆಯ ಲಕ್ಷಣ.

ಯಾವ ಕರ್ಮದಲ್ಲಿ 'ನಾನು' ಎಂಬ ಅಹಂಕಾರ ಇಲ್ಲದೆ ದೈವ ಸಮರ್ಪಣಾ ಭಾವ ಕೂಡಿದೆಯೋ ಅದೇ ಶ್ರೇಷ್ಠ. ದೈವ ಸೃಷ್ಟಿ ನಿಶ್ಚಲ, ಜೀವನ ಸೃಷ್ಟಿ ಚಂಚಲ ಎಂಬುದೇ ನಿಜ.

ದೈವ ಭಾವದಿಂದ ಮಾಡಿದ ಕಾಯಕವೇ ಪೂಜೆ, ವಾಚಕವೇ ಜಪ, ಮನಸ್ಸೇ ಧ್ಯಾನವೆಂಬ ಅವ್ಯಕ್ತ ಸತ್ಯವನ್ನು ಅರಿಯುವುದೇ ಜ್ಞಾನ. ಪಂಚ ಮಹಾಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಪೃಥ್ವಿಗಳು, ಸೂರ್ಯ ಚಂದ್ರರು ನಾನು ಎಂಬುವ ಸಹಿತವಾಗಿರುವುದೇ ದೈವ ಎಂಬ ಗೋಪ್ಯ ಜ್ಞಾನವನ್ನು ಅರಿಯುವುದೇ ಆನಂದ-ಪೂರ್ಣಾನಂದ.

ಸ್ಥೂಲ ಸೂಕ್ಷ್ಮಗಳ ಮಹತ್ವ, ಸೂಕ್ಷ್ಮದ ವೇಗ, ವ್ಯಾಪಕ, ಇವುಗಳ ವಿಚಾರಗಳನ್ನು ಜಾಗೃತಗೊಳಿಸುವುದೇ ವಿವೇಕ. ಮನುಷ್ಯ ಜೀವನದ ಅಸ್ತಿತ್ವವೇ ಮನಸ್ಸು. ಮನಸ್ಸು ಎಂಬುದು ಒಂದು ಅಮೋಘ ಉಪಕರಣ. ಮನಸ್ಸನ್ನು ಉಪಯೋಗಿಸುವ ಸ್ವಾತಂತ್ರ್ಯ ಮನುಷ್ಯನಿಗಿದೆ. ಮನಸ್ಸಿನ ಆರೋಗ್ಯಕ್ಕೆ ಅಧ್ಯಾತ್ಮ, ಧಾರ್ಮಿಕ, ಮಾರ್ಗದರ್ಶನ ಬೇಕು. ಇದಕ್ಕಾಗಿ ಅನುಸರಿಸಬೇಕಾದ ಮೂರು ಮಾರ್ಗಗಳಲ್ಲಿ:
ಒಂದನೇ ಮಾರ್ಗ: ಯಶಸ್ವಿಯಾಗಿರುವವರು ತಂದೆ, ತಾಯಿ, ಗುರು ಹಿರಿಯರು ಹಾಗೂ ಶಾಸ್ತ್ರದ ಮಾರ್ಗದರ್ಶನದಲ್ಲಿ ಯಾವ  ರೀತಿ ಉತ್ತಮ ಜೀವನ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ತಿಳಿಯುವುದು.
ಎರಡನೇ ಮಾರ್ಗ: ಇನ್ನೊಬ್ಬರನ್ನು ಹಿಂಸಿಸದೆ, ದೂಷಿಸದೆ ಶ್ರದ್ಧೆ ವಿಶ್ವಾಸಗಳಿಂದ ಧಾರ್ಮಿಕ ಮಾರ್ಗದರ್ಶನ ಪಡೆದು ಸರಿ ಕಂಡದ್ದನ್ನು ಸ್ವೀಕರಿಸಿವುದು, ಸರಿ ಇಲ್ಲದ್ದನ್ನು ನಿರಾಕರಿಸುವುದು.
ಮೂರನೇ ಮಾರ್ಗ: ಅಧ್ಯಾತ್ಮ ಮಾರ್ಗದರ್ಶನದಿಂದ ವಿವೇಕಯುಕ್ತ ಜಿಜ್ಞಾಸೆ ಮಾಡುವುದು. ಯಾವಾಗ ಈ ಜ್ಞಾನ ಲಭ್ಯವಾಗುವುದೋ ಆಗ ಮನಸ್ಸು ಸೂಕ್ಷ್ಮ ಆಗುತ್ತದೆ. ಈ ಸೂಕ್ಷ್ಮವೇ ಧ್ಯಾನ. ಹೊರ ಮನಸ್ಸಿನಿಂದ ಶಾಂತಿ ಆದ ಮೇಲೆ ಒಳ ಮನಸ್ಸಿನ ಶಾಂತಿಗೆ ಹೋಗಬೇಕು. ಒಳ ಮನಸ್ಸು ಅತ್ಯಂತ ಶಕ್ತಿಶಾಲಿ. ಸ್ವಾನುಭವ ತಂದುಕೊಳ್ಳುವುದೇ ಧ್ಯಾನ.

ನಾನು ನಾನಾಗೆ ಇದ್ದು, ನಾನು ಮಾತ್ರ ನನ್ನನ್ನು ಗುರುತಿಸಬೇಕು. ಅಂತಃಕರಣದಲ್ಲಿ ವೃತ್ತಿ ಬದಲಾದರೂ, ಅಂತಃಕರಣ ಬದಲಾಗದೆ ಸ್ಥಿರವಾಗಿ ಇರುತ್ತದೆ. ಎಲ್ಲಕ್ಕೂ ನಾನು ಸಾಕ್ಷಿ ಮಾತ್ರ. ದೇಹ ಧ್ಯಾನ ಮಾಡುತ್ತದೆ, ಮನಸ್ಸು ಜಪ ಮಾಡುತ್ತದೆ, ನಾನು ಸಾಕ್ಷಿ ಮಾತ್ರ. ನಾನು ಎಚ್ಚರ. ಶಾಂತಿ ಸ್ಥಿತಿಯಲ್ಲಿ ನಾನು. ಅಂತಃಕರಣ ಶಾಂತ ಸ್ಥಿತಿ ಗುರುತಿಸುವಾಗ ನನ್ನ ಸ್ವಭಾವ ಏನು? ನನ್ನ ಸ್ವಭಾವ ಶಾಂತಿ ಇದ್ದರೆ ನಾನು ಶಾಂತಿ ಗುರುತಿಸುತ್ತೇನೆ.

ನಾನು ಸಾಕ್ಷಿ - ಇದು ಸತ್, ನಾನು ಎಚ್ಚರ - ಇದು ಚಿತ್, ನಾನು ಶಾಂತ - ಇದು ಆನಂದ. ಸತ್, ಚಿತ್, ಆನಂದದ ಸಂಗಮವೇ ಸಚ್ಚಿದಾನಂದ, ಇದು ನಾನೇ, ಸಚ್ಚಿದಾನಂದವು ನನ್ನ ಸ್ವರೂಪವೇ ಆಗಿದೆ. ಎಚ್ಚರದ ಇರುವಿಕೆ ಸತ್ ನಿಂದ ಕೂಡಿದೆ. ಶಾಂತವಾಗಿದೆ. ಸಚ್ಚಿದಾನಂದನಾಗಿದ್ದೇನೆ ಸ್ಥಿತಪ್ರಜ್ನನಾಗಿದ್ದೇನೆ. ಇದೇ ನಾನು.

ಲೇಖಕರ ಕಿರುಪರಿಚಯ
ಡಾ. ವಿ. ವಿ. ಕುಮಾರ್

ವೃತ್ತಿಯಲ್ಲಿ ಪಶುವೈದ್ಯರಾದ ಇದರು ಮೂಲತಃ ಮೈಸೂರಿನವರು. ಪ್ರಸ್ತುತ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿಯ ಮೈಸೂರು ತರಬೇತಿ ಕೇಂದ್ರದಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮ ನಿರೂಪಣೆ, ಲೇಖನಗಳು, ಅತಿಥಿ ಉಪನ್ಯಾಸ, ಹಾಸ್ಯ, ಅಧ್ಯಾತ್ಮವನ್ನು ವೈಕ್ಞಾನಿಕವಾಗಿ ವಿಶ್ಲೇಷಿಸುವುದು, ತರಬೇತಿ, ವ್ಯಕ್ತಿತ್ವ ವಿಕಸನ ಮತ್ತು ಪ್ರೇರೇಪಣೆ, ಶುಭಾಶಯ ಪತ್ರಗಳ ವಿನ್ಯಾಸ ಇತ್ಯಾದಿ ಇವರ ನೆಚ್ಚಿನ ಹವ್ಯಾಸಗಳು.

Blog  |  Facebook  |  Twitter

1 ಕಾಮೆಂಟ್‌:

  1. “ನಾನು ನೀನಿನ ಈನಿನಾನಿಗೆ ಆನು ತಾನದ ತನನನ” ಎಂಬ ಬೇಂದ್ರೆಯವರ ಮಾತಿನ “ನಾನು” ಎಂಬುದರ ವಿಸ್ತಾರರೂಪವಾಗಿ ಅನುಸಂಧಾನ ಮಾಡಬಹುದಾದ ಈ ಬರಹ ಅತಿ ಸುಂದರ ಹಾಗೂ ಸುಸಜ್ಜಿತ. ಮೇಲೆ ಈಜಿದವರಿಗೆ ಬರೆಯ ಕಪ್ಪೆ ಚಿಪ್ಪು, ತಳ ಮುಟ್ಟಿದವರಿಗೆ ಮುತ್ತುಗಳು ಹೇಗೋ ಹಾಗೆ, ತಿಳಿದವರಿಗೂ ತಿಳಿಯದಂತಿರುವ ತಿಳಿ ಮನಸ್ಸಿನ ತಿಳಿಯದವರಿಗೆ ತಿಳಿ ಹೇಳುವ ನಿಮ್ಮ ಈ ಬರಹ ಕಹಳೆಯ ಮೇರು ಲೇಖನಗಳಲ್ಲಿ ಒಂದು.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ