ಶುಕ್ರವಾರ, ನವೆಂಬರ್ 25, 2016

ಉಯ್ಯಾಲೆ - ಚದುರಂಗ

ಉಯ್ಯಾಲೆ - ಚದುರಂಗ

ಶೀರ್ಷಿಕೆ: ಉಯ್ಯಾಲೆ
ಲೇಖಕರು: ಚದುರಂಗ
ಪ್ರಕಾಶಕರು: ಅಭಿರುಚಿ ಪ್ರಕಾಶನ, ಸರಸ್ವತೀಪುರ, ಮೈಸೂರು. 
ಪ್ರಧಮ ಮುದ್ರಣ: 1960
ಐ.ಎಸ್.ಬಿ.ಎನ್.: 81-7877-006-7

ಪುಸ್ತಕ ಕುರಿತು: ಸರ್ವಮಂಗಳೆಯನ್ನು ಸೃಷ್ಟಿಸಿ ಓದುಗರ ಮನಸ್ಸನ್ನು ತಮ್ಮತ್ತ ಸೆಳೆದುಕೊಂಡ ಗೆಳೆಯ ಚದುರಂಗರು ರಾಧೆಯನ್ನು, ಶೇಷಗಿರಿಯನ್ನು, ಕೃಷ್ಣೇಗೌಡರನ್ನು, ಪ್ರಭಾವತಿಯನ್ನು - ಜೀವಂತವಾಗಿ ಹಲವು ಪಾತ್ರಗಳನ್ನು - ನಮ್ಮ ಮುಂದೆ ನಿಲ್ಲಿಸಿದ್ದಾರೆ. ಸುಂದರಿ ರಾಧೆ, ಪುಸ್ತಕಪ್ರಿಯ ಶೇಷಗಿರಿ, ಜೀವನೋಲ್ಲಾಸಿ ಕೃಷ್ಣೇಗೌಡ, ಸುಕುಮಾರಿ ಮುಗ್ದೆ ಪ್ರಭಾವತಿ, ಒಳ್ಳೆಯವನಾದರೂ ಪುಸ್ತಕದ ಹಾಳೆಯಲ್ಲಿ ಹುದುಗಿ, ಹೆಂಡತಿ ರಾಧೆಯ ಸುತ್ತ ಅಸಹನೆಯ ಕೋಟೆ ಬೆಳೆಯಲು ಕಾರಣನಾಗಿ ಓದುಗರಿಂದ ಸಹಾನುಭೂತಿಯ ನಿಟ್ಟುಸಿರನ್ನು ಸಂಪಾದಿಸುವ ಶೇಷಗಿರಿ, ರಾಧೆ-ಶೇಷಗಿರಿಗಳ ನಡುವೆ ಬಂದು, ಪ್ರಭಾವತಿಯ ಪ್ರೀತಿಯನ್ನೂ ರಾಧೆಯ ಒಲವನ್ನೂ ಗಳಿಸಿ, ಅವರ ಸಂಸಾರದಲ್ಲಿ ಸ್ನೇಹದ ಒರತೆಯನ್ನು ಹರಿಸಲೆತ್ನಿಸಿದ ಕೃಷ್ಣೇಗೌಡ, ಜನ್ಮತಃ ಕಲಾವಿದೆಯಾದ ಪುಟ್ಟ ಪ್ರಭಾವತಿ. ಹೀಗೆ ಈ ಪಾತ್ರಗಳು ನಿಚ್ಚಳವಾಗಿ ನಿಲ್ಲುತ್ತವೆ. ರಾಧೆ ಕೃಷ್ಣೇಗೌಡರು ಪರಸ್ಪರ ಆಕರ್ಷಣೆಗೆ ಗುರಿಯಾಗಿದ್ದಾಗ ಬರುವ ಹಾವಿನ ಪ್ರಸಂಗ ಎಷ್ಟು ಎದೆ ನಡುಗಿಸುವುದೋ ಅಷ್ಟೇ ಮಾರ್ಮಿಕವಾಗಿದೆ. ಚದುರಂಗರು ಪ್ರಯತ್ನಿಸಿದರೆ ಮನಸ್ಸಿನ ಅಂತರಾಳದ ನಾನಾ ಪದರಗಳನ್ನು ಬಿಚ್ಚಿರಿಸಬಲ್ಲರು ಎಂಬುದಕ್ಕೆ ಇದು ದ್ಯೋತಕವಾಗಿದೆ. - ಎಚ್ಚೆಸ್ಕೆ.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ