ಬುಧವಾರ, ನವೆಂಬರ್ 23, 2016

ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ - ಡಾ. ಮೀನಗುಂಡಿ ಸುಬ್ರಮಣ್ಯ

ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ - ಡಾ. ಮೀನಗುಂಡಿ ಸುಬ್ರಮಣ್ಯ

ಶೀರ್ಷಿಕೆ: ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ 
ಲೇಖಕರು: ಡಾ. ಮೀನಗುಂಡಿ ಸುಬ್ರಮಣ್ಯ 
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಕ್ರೆಸೆಂಟ್ ರಸ್ತೆ, ಬೆಂಗಳೂರು. 
ಪ್ರಧಮ ಮುದ್ರಣ: 1988
ಐ.ಎಸ್.ಬಿ.ಎನ್.: 978-81-7302-037-7

ಪುಸ್ತಕ ಕುರಿತು: ಎಲ್ಲಿಂದಲಾದರೂ ಓದಲು ಪ್ರಾರಂಭಿಸಿದರೆ ಸರಿಯಾಗಿ ಅರ್ಥ ಆಗುವುದಕ್ಕಿಂತ ಹೆಚ್ಚಾಗಿ ಅಪಾರ್ಥ ಅನರ್ಥಗಳೇ ಆಗುವ ಸಂಭವವಿರುವುದರಿಂದ, ದಯಮಾಡಿ, ಈ ಪುಸ್ತಕವನ್ನು ಮೊದಲ ಪುಟದಿಂದ ಅನುಕ್ರಮವಾಗಿ ಓದಿ. ಒಂದು ವಾಕ್ಯದಲ್ಲಿ ಮಂಡಿಸಿದ ವಿಷಯ ಸರಿ ಅಲ್ಲ ಎಂದು ನಿಮಗೆ ಅನಿಸಿದರೆ, ದಯಮಾಡಿ, ಆ ಅಧ್ಯಾಯ ಮುಗಿಯುವವರೆಗೆ ನಿಮ್ಮ ನಿರ್ಣಯವನ್ನು ಕಾಯ್ದಿರಿಸಿ. ಈ ಪುಸ್ತಕದ ವಿಷಯ ಮನಸ್ಸು ಅಥವಾ ಮನಶ್ಶಾಸ್ತ್ರ ಅಲ್ಲ. ಈ ಪುಸ್ತಕ ಬರೆದಿರುವುದು ಮನುಷ್ಯರ ಬಗ್ಗೆ. ಎಂದರೆ ನಮ್ಮ ಬಗ್ಗೆ, ನಮ್ಮ ಸಹವರ್ತಿಗಳ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ, ನಮ್ಮ ಜೀವನ ಶೈಲಿಯ ಬಗ್ಗೆ. ಮಾನಸಿಕ ಸಮಸ್ಯೆಗಳ ಬಗ್ಗೆ ಪ್ರಚಲಿತವಿರುವ ಕೆಲವು ಸಾಂಪ್ರದಾಯಿಕ ಮತ್ತು ಸಾರ್ವತ್ರಿಕ ನಂಬಿಕೆಗಳ ಔಚಿತ್ಯವನ್ನು ನಾನು ಪ್ರಶ್ನಿಸಿದ್ದೇನೆ. ನಾನು ಮಂಡಿಸಿರುವ ವಾದಗಳಿಗೆ, ನಾನು ಎತ್ತಿರುವ ಪ್ರಶ್ನೆಗಳಿಗೆ ಸರಿಯಾದ ಸಾಂಪ್ರದಾಯಿಕ ವೈಜ್ಞಾನಿಕ ಉತ್ತರಗಳು ಇವೆ ಎಂಬ ಅರಿವು ನನಗಿದೆ. ಆದರೆ ಆ ಉತ್ತರಗಳು ಕೇವಲ ಉತ್ತರಗಳಾಗಿಯೇ ಉಳಿಯುತ್ತವೇ ವಿನಾ ಅವುಗಳಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಇಲ್ಲಿನ ವಾದಗಳೆಲ್ಲ ಸಮಸ್ಯೆಯನ್ನು ಪರಿಹಾರ ಮಾಡುವುದು ಹೇಗೆ ಎಂಬ ಚಿಕಿತ್ಸಾ ತಂತ್ರಗಳ ಕುರಿತದ್ದು. 'ತಲೆ ಸರಿ ಇಲ್ಲದವರಿಗೆ ಮಾತ್ರ ಸೈಕಾಲಜಿ' ಎಂಬ ಸಾರ್ವತ್ರಿಕ ಕಲ್ಪನೆ ಪ್ರಬಲವಾಗಿ ಚಲಾವಣೆಯಲ್ಲಿದೆ. ಆದರೆ 'ತಲೆ ಸರಿ ಇರುವವರು' ಕೂಡ ಸೈಕಾಲಜಿ ತಿಳಿದು ತಮ್ಮ 'ಸರಿಯಾದ' ಜೀವನ ಶೈಲಿಯನ್ನು ಇನ್ನಷ್ಟು ಸರಿಮಾಡಿಕೊಳ್ಳಬಹುದು ಎಂಬುದು ವಾಸ್ತವ. ಕನ್ನಡ ಓದುವ ಎಲ್ಲರಿಗೂ ಅರ್ಥವಾಗುವಂತೆ ನಿತ್ಯ ಬಳಕೆಯಲ್ಲಿರುವ ಶಬ್ಧಗಳನ್ನೇ ಉಪಯೋಗಿಸಬೇಕು ಎಂಬ ಮಿತಿ ಹಾಕಿಕೊಂಡು ಬರೆಯಲು ಶುರು ಮಾಡಿದಾಗ 'ಭಾಷಾ ಸಮಸ್ಯೆ' ಎದುರಿಸಬೇಕಾಯಿತು. ಕನ್ನಡದಲ್ಲೇ ಮಾತನಾಡಿ ಚಿಕಿತ್ಸೆ ಪಡೆದ, ಚೆನ್ನಾಗಿ ಇಂಗ್ಲೀಷ್ ಗೊತ್ತಿರುವ ನನ್ನ ಸಮಸ್ಯಾ ವ್ಯಕ್ತಿಗಳೊಡನೆ ಸುಮಾರು ಐದು ವರ್ಷಗಳಿಂದ ಚರ್ಚಿಸಿ, ಪ್ರಯೋಗದಲ್ಲಿ ಸರಾಗವಾಗಿ ಅಂಗೀಕರಿಸಲ್ಪಟ್ಟ ಭಾಷಾ ಸೂತ್ರವನ್ನು ನೀವು ಅಂಗೀಕರಿಸುತ್ತೀರಿ ಎಂದು ಆಶಿಸುತ್ತೇನೆ. - ಡಾ. ಮೀನಗುಂಡಿ ಸುಬ್ರಮಣ್ಯ.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ