ಸೋಮವಾರ, ನವೆಂಬರ್ 28, 2011

ತಾಯಿಯ ಒಡಲಾಳದಿಂದ

ಛಾಯಾಚಿತ್ರ ಕೃಪೆ : ಆಲ್ಬರ್ಟ್ ಐನ್ಸ್ಟೀನ್

ಕ್ಷೇಮಉಭಯ ಕುಶಲೋಪರಿ ಸಾಂಪ್ರತ28-11-2011


ಮಗೂ.. ಹೇಗಿದ್ದಿಯಾ..? ಎಲ್ಲವೂ ಸೌಖ್ಯವೇ?? ನಿನ್ನ ಕ್ಷೇಮದ ವಿಚಾರವಾಗಿಯೇ ನಾನು ಸದಾಕಾಲ ಚಿಂತಿಸುತ್ತಿರುವೆ. ನಿಮ್ಮೆಲ್ಲರುಗಳ ಹೊರತು ನನ್ನವರೆಂದು ಹೇಳಿಕೊಳ್ಳಲು ಮತ್ತಿನ್ಯಾರೂ ಇಲ್ಲವಲ್ಲ ನನಗೆ! ನನ್ನೊಳಗಿರುವ ಸಮಸ್ತ ಜೀವರಾಶಿಗಳ ಆರೈಕೆಯೊಂದಲ್ಲದೆ ನನಗೆ ಇನ್ಯಾವುದರ ಹಂಬಲವಿದ್ದೀತು ಹೇಳು?

ಸೌರಮಂಡಲದ ಮೂರನೇ ಸಂತಾನವಾಗಿ ಹುಟ್ಟಿ, ವರುಣ ದೇವನ ಕೃಪೆಯಿಂದ, ಜೀವಿಸಲು ಪೂರಕವಾದ ವಾತಾವರಣ ಹೊಂದಿರುವುದು ನನ್ನ ಸೌಭಾಗ್ಯವೇ ಸರಿ. ಅದರಿಂದ, ಕೋಟ್ಯನುಕೋಟಿ ಜೀವ ವೈವಿಧ್ಯಗಳನ್ನು ಸೃಷ್ಟಿಸಿ, ಅವೆಲ್ಲವುಗಳ ಲಾಲನೆ-ಪಾಲನೆಯಲ್ಲಿ ನಾನು ಕಂಡುಕೊಂಡ ಸಾರ್ಥಕತೆ ಅಪಾರ. ನಾ ಹೆತ್ತ ಜೀವಕೋಟಿಗಳಲ್ಲಿ ಅತ್ಯಂತ ಉನ್ನತ ಮಟ್ಟದ ಪ್ರಬುದ್ಧತೆ ಸಾಧಿಸಿರುವುದು ಮಾನವರುಗಳಾದ ನೀವು ಮಾತ್ರವೇ.

ಮನುಕುಲವು ಬೆಳೆದಂತೆಲ್ಲಾ, ತಾವುಗಳು ಇತರರಂತೆ ಕೇವಲ ನನ್ನ ಸಾಮಾನ್ಯ ಸಂಜಾತರು ಎನ್ನುವುದನ್ನು ಮರೆತ ಮಾನವರುಗಳು ನನ್ನೊಡಲಿನ ಮಾನವೇತರರನ್ನೆಲ್ಲಾ ಸ್ವಾರ್ಥಸಾಧನೆಗೆ ಬಳಸಿಕೊಂಡದ್ದು ಎಷ್ಟರ ಮಟ್ಟಿಗೆ ಎಂದರೆ, ಅನೇಕ ಜೀವ ಸಂಕುಲಗಳು ಶಾಶ್ವತವಾಗಿ ನಶಿಸಿಹೋಗುವಷ್ಟು! ತಂತ್ರಜ್ಞಾನದ ಅನ್ವೇಷಣೆಯಲ್ಲಿ ಅನೇಕ ಅದ್ಭುತ ಸಾಧನೆಗೈದ ಮನುಷ್ಯ, ನನ್ನೊಳಗಿನ ಸಂಪನ್ಮೂಲಗಳು ಬರಿಯ ಮಾನವಕುಲಕ್ಕೆ ಮಾತ್ರವೇ ಸೀಮಿತವಾಗಿರದೆ ಪ್ರತಿಯೊಂದು ಜೀವಕಣಕ್ಕೂ ಮೀಸಲಾಗಿರುವುದೆಂಬ ಸರಳ ವಾಸ್ತವವನ್ನು ಮನಗಾಣದೇ ಹೋಗಿರುವುದು ದುರಂತದ ಸಂಗತಿ.

ಮಗುವೇ, ನಿನ್ನ ಜಾಣ್ಮೆಯ ಅಟ್ಟಹಾಸ ಇತರೆ ಜೀವಿಗಳ ಶೋಷಣೆಗಷ್ಟೇ ಕೊನೆಗಾಣದೆ, ನನ್ನ ಜೀವಕ್ಕೇ ಸಂಚಕಾರ ತಂದೊದಗಿಸುವ ಮಟ್ಟಕ್ಕೆ ತಲುಪಿಬಿಟ್ಟಿದೆ. ಪೂರ್ವದಿಂದಲೂ ನಾನು ಕಾಪಾಡಿಕೊಂಡು ಬರುತ್ತಿದ್ದ ಪ್ರಾಕೃತಿಕ ಸಮತೋಲನವನ್ನು ನೀನು ಬುಡಮೇಲು ಮಾಡುತ್ತಿರುವುದರ ಅಂತಿಮ ಪರಿಣಾಮ ಮನುಕುಲದ ಸರ್ವನಾಶವೇ ಆಗಿದೆ ಎನ್ನುವ ಘೋರ ಸತ್ಯದ ಅರಿವು ನಿನಗಾಗುವುದಾದರೂ ಎಂದು?

ಇನ್ನು, ಮಾಲಿನ್ಯದ ಪರಾಕಾಷ್ಟೆಯನ್ನು ಬಣ್ಣಿಸುವುದೆಂತು? ಮಲಿನ ಗಾಳಿಯು ನನ್ನ ಉಸಿರುಗಟ್ಟಿಸುವುದಲ್ಲದೆ, ಸುರಕ್ಷಾ ಮೇಲ್ಪದರವನ್ನು ದುರ್ಬಲಗೊಳಿಸಿ ಅಪಾಯಕಾರಿ ವಿಕಿರಣಗಳು ನುಸುಳಲು ಎಡೆಮಾಡಿಕೊಟ್ಟಿದೆ. ಕಲುಷಿತಗೊಂಡ ನೀರು ಬಾಯಾರಿಸಿದೆಯಲ್ಲದೆ, ಅಸಂಖ್ಯಾತ ಕೊಳವೆ ಬಾವಿಗಳು ನನ್ನ ಒಡಲನ್ನು ಬಗೆದು ಬರಿದು ಮಾಡಿವೆ. ಎಲ್ಲೆ ಮೀರಿ ಬೆಳೆದಿರುವ ನಾಗರೀಕತೆಯು ಹಸಿರನ್ನೇ ಇಲ್ಲವಾಗಿಸಿ ನನ್ನ ಋತುಚಕ್ರವನ್ನು ಹಾಳುಮಾಡಿದೆ. ಅನ್ನಾಹಾರ ಬೆಳೆಯಲು ರಾಸಾಯನಿಕಗಳ ನಿರಂತರ ಬಳಕೆ ಫಲವತ್ತಾದ ಭೂಮಿಯನ್ನು ಮಣ್ಣಾಗಿಸಿದೆ. ಪರ್ಯಾಯ ಶಕ್ತಿಯುತ್ಪಾದನೆಗೆಂದು ನಿರ್ಮಿಸಲಾಗಿರುವ ಅಣುಸ್ಥಾವರಗಳು ನನ್ನ ಮಡಿಲಿಗೆ ಕಟ್ಟಿದ ಕೆಂಡದಂತಾಗಿವೆ.

ಸರಿ ಸುಮಾರು 200 ಸಾವಿರ ವರ್ಷಗಳಿಂದ ನಿನ್ನ ಅವಿರತ ಆರೈಕೆಯಲ್ಲಿಯೇ ಜೀವ ಸವೆಸಿರುವ ನಿನ್ನ ಈ ತಾಯಿಯು ಇನ್ನು ನಿನಗೆ ಬೇಡವಾದಳೇ? ಮಂಗಳಾದಿಯಾಗಿ ಅನ್ಯ ಗ್ರಹಗಳು ಮಲತಾಯಿಯಂತಾದಾವೆಯೇ ವಿನಃ ನನ್ನಂತೆ ತಾಯ್ತನದ ವಾತ್ಸಲ್ಯ ತೋರಲಾರವು. ಮುಪ್ಪಿನಿಂದ ಕೃಶವಾಗಿ ಹೋಗುತ್ತಿರುವ ನಿನ್ನ ತಾಯಿಯಲ್ಲಿ ಮಮತೆ ಮೂಡದೆ? ವೃದ್ಧಾಪ್ಯದಲ್ಲಿ ನೀನಲ್ಲದೇ ನನ್ನ ಕಾಳಜಿ ಮಾಡುವವರು ಇನ್ಯಾರಿದ್ದಾರೆ ಕಂದಾ..?? ಈ ನನ್ನ ಅಂತರಾಳದ ತಳಮಳ ನಿನಗೆ ತಿಳಿದೀತೆ? ಮನದಾಳದ ಈ ಮರುಗು ನಿನ್ನ ಹೃದಯ ಮುಟ್ಟೀತೆ.? ಒಡಲಾಳದ ನನ್ನ ಕೂಗು ನಿನ್ನ ಕಿವಿಯ ತಟ್ಟೀತೆ..??


ಇಂತು ನಿನ್ನ ಪ್ರೀತಿಯ,
ಭೂತಾಯಿ.

ಲೇಖಕರ ಕಿರುಪರಿಚಯ
ಶ್ರೀ ಪ್ರಶಾಂತ್ ಜಚಿ

ಉದ್ಯಾನನಗರಿ ಬೆಂಗಳೂರಿನವರಾದ ಇವರು, ಕರ್ನಾಟಕ ಹಾಗೂ ಕನ್ನಡದ ಬಗೆಗೆ ಅಪಾರವಾದ ಗೌರವ ಮತ್ತು ಅಭಿಮಾನ ಹೊಂದಿದ್ದಾರೆ.

ಕನ್ನಡ ನಾಡು-ನುಡಿಗೆ ತಮ್ಮ ಶಕ್ತಿಯಾನುಸಾರ ಪ್ರಾಮಾಣಿಕ ಸೇವೆಯನ್ನು ಸದಾಕಾಲ ಸಲ್ಲಿಸುವ ಹಂಬಲ ಇವರದು.

Blog  |  Facebook  |  Twitter

6 ಕಾಮೆಂಟ್‌ಗಳು:

  1. ತಾಯಿಯ ಹಂಬಲ, ಅಭಿಲಾಷೆಯನ್ನು ಬಹಳ ಚನ್ನಾಗಿ ವರ್ಣಿಸಿದ್ದೀರ ಪ್ರಶಾಂತ. ಒಳ್ಳೆಯದೆಲ್ಲಾ ತನ್ನ ಮಗುವಿಗೆ ಲಭಿಸಲಿ ಎಂಬ ಆಸೆ ತಾಯಿಗೆ. ಆದರೆ ಈ ಕ್ರೂರ ಜಗತ್ತು ಯಾರನ್ನು ಕಡೆಗಾಣಿಸುವಿದಿಲ್ಲ

    ಪ್ರತ್ಯುತ್ತರಅಳಿಸಿ
  2. ಸಹನಾ ಅವರೇ, ನಿಮ್ಮ ಪ್ರೋತ್ಸಾಹದಾಯಕ ಅನಿಸಿಕೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ಪ್ರಸ್ತುತ ಗಂಭೀರ ಸಮಸ್ಯೆಯನ್ನು ಎಲ್ಲರ ಮನ ಮುಟ್ಟುವಂತೆ ವರ್ಣಿಸಿದ್ದೀರಿ. ಇನ್ನಾದರು ನಮ್ಮ ಭೂತಾಯಿಯ ರಕ್ಷಣೆಗೆ ಎಲ್ಲರೂ ಪಣ ತೊಡೋಣ.

    ಪ್ರತ್ಯುತ್ತರಅಳಿಸಿ
  4. ಶಿವಕುಮಾರ್ ರವರೆ, ಧನ್ಯವಾದಗಳು. ಈ ಬರವಣಿಗೆಯು ಭೂತಾಯಿಯ ರಕ್ಷಣೆಯ ಬಗೆಗೆ ಚಿಂತನೆ ಮೂಡಿಸುವಂತಿದ್ದರೆ ನನ್ನ ಪ್ರಯತ್ನ ಸಾರ್ಥಕ!

    ಪ್ರತ್ಯುತ್ತರಅಳಿಸಿ
  5. ತಾಯಿಯ ಆಸೆ ವಾಂಚೆ ತುಂಬಾ ಅರ್ಥಪೂರ್ಣವಾಗಿ ವರ್ಣಿಸಿದ್ದೀರಾ ತಾಯಿಯ ಔದಾರ್ಯ ಪದಪುಂಜಗಳಲ್ಲಿ ಹಿಡಿದಿಡಲು ಸಾಧ್ಯವೆ ಎಂಬ ಸಂದೇಹ ಮಾತ್ರ ನನ್ನನ್ನು ಕಾಡುತ್ತಲೇ ಇರುತ್ತದೆ.
    ಧನ್ಯವಾದ
    ಆರ್.ಎಸ್ ಮಾಲಗತ್ತಿ.
    ಸುರಪುರ

    ಪ್ರತ್ಯುತ್ತರಅಳಿಸಿ
  6. ಭಾಷೆ ಹಾಗೂ ಪದಗಳಿಗೆ ವಿಶೇಷ ಅರ್ಥ-ಶಕ್ತಿ ತುಂಬುವಂತಹ ಸಾಮರ್ಥ್ಯ ನನಗೆ ಖಂಡಿತವಾಗಿಯೂ ಇಲ್ಲ. ಈ ಬರೆಹವು ಮನದಾಳದ ನನ್ನ ನೋವಿಗೆ ಪದಗಳ ರೂಪ ಕೊಡುವ ಒಂದು ಭಾವನಾತ್ಮಕ ಪ್ರಯತ್ನವಷ್ಟೇ..

    ಮಾಲಗತ್ತಿ ಅವರೇ, ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ