ಶನಿವಾರ, ನವೆಂಬರ್ 26, 2011

ಬೆಂಗಳೂರಿನ ಕೆಂಪೇಗೌಡ ಗೋಪುರಗಳು

ಲಾಲ್-ಬಾಗ್ ಕೆಂಪೇಗೌಡ ಗೋಪುರ
ಉದ್ಯಾನನಗರಿ ಎಂದೇ ಪ್ರಖ್ಯಾತವಾಗಿರುವ ಬೆಂಗಳೂರು ಮಹಾನಗರದ ನಾಲ್ಕೂ ದಿಕ್ಕುಗಳಲ್ಲಿ ಕೆಂಪೇಗೌಡ ಕಟ್ಟಿಸಿದರು ಎನ್ನಲಾದ ಗೋಪುರಗಳು ಇವೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಗೋಪುರಗಳ ಇತಿಹಾಸಕ್ಕೆ ಹೊಂದಿಕೊಂಡಂತೆ ಹಲವಾರು ಕುತೂಹಲಕಾರಿ ಹಿನ್ನೆಲೆಗಳನ್ನೂ ಸಹ ನಾವು ಕೇಳಿದ್ದೇವೆ. ಸಾಮಾನ್ಯವಾಗಿ ಬಹುತೇಕ ಮಂದಿ ಹೇಳುವುದೇನೆಂದರೆ, ಬೆಂಗಳೂರು ನಗರವು ಅದರ ನಾಲ್ಕೂ ದಿಕ್ಕಿಗೆ ಇರುವ ಕೆಂಪೇಗೌಡ ಗೋಪುರಗಳ ಸಹರದ್ದು ಮೀರಿ ಬೆಳೆದರೆ ಕೇಡುಂಟಾಗುತ್ತದೆ; ಬೆಂಗಳೂರು ನಗರವು ನಾಲ್ಕೂ ದಿಕ್ಕಿಗಿರುವ ಗೋಪುರಗಳವರೆಗೆ ಬೆಳೆಯುವ ಸಾಧ್ಯತೆ ಇದೆಯೆಂದು ಕೆಂಪೇಗೌಡರು ಅವುಗಳನ್ನು ನಿರ್ಮಿಸಿದರು; ಇತ್ಯಾದಿ.

ಶ್ರೀ ಕರ್ಲಮಂಗಲಂ ಶ್ರೀಕಂಠಯ್ಯ ಇವರು ರಚಿಸಿದ 'ಕೆಂಪೇಗೌಡನ ಜಯಪ್ರಶಸ್ತಿ' ಎಂಬ ಗ್ರಂಥದಲ್ಲಿ ಈ ಗೋಪುರಗಳು ಎರಡನೆಯ ಕೆಂಪೇಗೌಡನ ಕಾಲದಲ್ಲಿ ನಿರ್ಮಾಣವಾಗಿವೆ ಹಾಗೂ ಈ ರೀತಿಯ ಗೋಪುರಗಳನ್ನು ಬೆಂಗಳೂರಿನ ಚತುರ್ದಿಕ್ಕಿನಲ್ಲಿಯೂ ಕಟ್ಟಿಸಲಾಯಿತು ಎಂಬುದಾಗಿ ತಿಳಿಸಲಾಗಿದೆ. ಈ ಕಾರಣಕ್ಕಾಗಿಯೇ ಏನೋ, ಬೆಂಗಳೂರಿನಲ್ಲಿ ಇರುವ ಗೋಪುರಗಳ ಸಂಖ್ಯೆ ನಾಲ್ಕು ಎಂಬ ನಂಬಿಕೆ ಉಂಟಾಗಿದೆ. ಆದರೆ, ಇತ್ತೀಚಿನ ಕೆಲವು ತಜ್ಞರ ಪ್ರಕಾರ ಬೆಂಗಳೂರಿನಲ್ಲಿರುವ ಕೆಂಪೇಗೌಡರ ಕಾಲದ ಗೋಪುರಗಳ ಸಂಖ್ಯೆ ಎಂಟು. ಅವು ಯಾವುವೆಂದರೆ:
  1. ಲಾಲ್-ಬಾಗ್ ಹಿಂಭಾಗದ ಬೃಹತ್ ಬಂಡೆಯ ಮೇಲಿರುವ ಗೋಪುರ
  2. ಅಲಸೂರು ಕೆರೆಯ ಬದಿಯ ಗುಡ್ಡದ ಮೇಲಿರುವ ಗೋಪುರ
  3. ಕೆಂಪಾಂಬುಧಿ ಕೆರೆಯ ಬದಿಗಿರುವ ಗೋಪುರ
  4. ಕೆಂಪಾಂಬುಧಿ ಕೆರೆಯ ಇನ್ನೊಂದು ಬದಿಗಿರುವ ಗೋಪುರ
  5. ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದ ಬಳಿಯಿರುವ ಗೋಪುರ
  6. ಗವಿಗಂಗಾಧರೇಶ್ವರ ಗುಹಾಂತರ ದೇವಾಲಯದ ಬದಿಗಿರುವ ಗೋಪುರ
  7. ದೊಡ್ಡ ಬಸವಣ್ಣನ ಗುಡಿಯ ಹಿಂಭಾಗದಲ್ಲಿರುವ ಗೋಪುರ
  8. ಬಿನ್ನಿಮಿಲ್ ಕೆರೆಯ ಬದಿಯಲ್ಲಿದ್ದ ಗೋಪುರ
ಕೆಂಪೇಗೌಡರ ಗೋಪುರಗಳೆಲ್ಲವೂ ಎತ್ತರವಾದ ಪ್ರದೇಶಗಳಲ್ಲಿದ್ದು, ಬಹುಶಃ ತನ್ನ ಸಾಮ್ರಾಜ್ಯವನ್ನು ಶತ್ರುಗಳ ಧಾಳಿಯಿಂದ ರಕ್ಷಿಸಿಕೊಳ್ಳಲು ಆತ ಮಾಡಿಕೊಂಡಿದ್ದ ರಕ್ಷಣಾ ವ್ಯವಸ್ಥೆಯ ಅಂಶಗಳಂತೆ ತೋರುತ್ತವೆ. ಗೋಪುರಗಳಲ್ಲಿ ಸದಾ ಕಾವಲುಗಾರರು ಬೀಡುಬಿಟ್ಟು, ಶತ್ರುಗಳಿಂದ ಒದಗಬಹುದಾದ ತೊಂದರೆಗಳ ಬಗೆಗೆ ಮುನ್ನೆಚ್ಚರಿಕೆ ನೀಡುತ್ತಿದ್ದಿರಬೇಕು. ಆದ್ದರಿಂದಲೇ, ಎಲ್ಲಾ ಗೋಪುರಗಳೂ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಾರ್ಗದಲ್ಲಿಯೇ ಇವೆ.

ಈ ಎಲ್ಲಾ ಗೋಪುರಗಳ ಪೈಕಿ, ಲಾಲ್-ಬಾಗ್ ಹಾಗೂ ಮೇಖ್ರಿ ವೃತ್ತದ ಬಳಿಯಿರುವ ಗೋಪುರಗಳನ್ನು ಪುನರ್ ನಿರ್ಮಿಸಲಾಗಿದ್ದು, ತಮ್ಮ ಹಳೆಯ ವಿನ್ಯಾಸವನ್ನು ಕಳೆದುಕೊಂಡಂತೆ ಕಾಣುತ್ತವೆಯಾದರೂ ಮಹಾನಗರ ಪಾಲಿಕೆಯ ಸೂಕ್ತ ನಿರ್ವಹಣೆಯ ಕಾರಣ ಅತ್ಯಂತ ಆಕರ್ಷಕವಾಗಿ ಕಾಣುತ್ತವೆ. ಅಲಸೂರು ಕೆರೆಯ ಬಳಿಯಿರುವ ಗೋಪುರವು ಸೈನಿಕರ ಸುಪರ್ದಿಯಲ್ಲಿರುವುದರಿಂದ, ವೀಕ್ಷಣೆಗೆ ಅವಕಾಶಗಳು ಕಡಿಮೆ. ಉಳಿದವುಗಳ ಅವಸ್ಥೆ ಹೇಳತೀರದಾಗಿದ್ದು, ಅತ್ಯಂತ ಶಿಥಿಲಗೊಂಡಿದ್ದರೆ, ಬಿನ್ನಿಮಿಲ್ ಸಮೀಪದ ಗೋಪುರವು ಸಂಪೂರ್ಣವಾಗಿ ನಾಶವಾಗಿದೆ.

ನಾಗರೀಕತೆ ಬೆಳೆದಂತೆಲ್ಲಾ ಹಳೆಯ ಅವಶೇಷಗಳನ್ನು ನೆಲಸಮ ಮಾಡಿ, ಮುಗಿಲೆತ್ತರದ ವಿನೂತನ ಕಟ್ಟಡಗಳನ್ನು ನಿರ್ಮಿಸುತ್ತಿರುವ ನಾವು ಬೆಂಗಳೂರಿನಲ್ಲಿರುವ ಭವ್ಯವಾದ ಪುರಾತನ ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ಬಗೆಗೆ ಚಿಂತನೆ ನಡೆಸುತ್ತಿಲ್ಲವೇನೋ ಎಂಬ ಶಂಕೆ ಮೂಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಾಗರಿಕ ಪ್ರಜ್ಞೆ ಮೆರೆದು ನಮ್ಮಲ್ಲಿರುವ ಪುರಾತನ ಸ್ಮಾರಕಗಳ ಸಂರಕ್ಷಣೆ ಮಾಡಬೇಕಿದೆ.

ಲೇಖಕರ ಕಿರುಪರಿಚಯ
ಶ್ರೀ ವಿವೇಕಾನಂದ ವಿ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ಬಿ.ಇ. ಪದವೀಧರರು. ಪ್ರಸ್ತುತ ಬೆಂಗಳೂರಿನ ಹೆಸರಾಂತ ಐಟಿ ಕಂಪನಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬಿಡುವಿನ ವೇಳೆಯಲ್ಲಿ ಕಥೆ, ಕಾದಂಬರಿ ಓದಿವ ಹಾಗೂ ಹಳೆಯ ಚಿತ್ರಗೀತೆಗಳನ್ನು ಕೇಳುವ ಹವ್ಯಾಸ ಹೊಂದಿದ್ದಾರೆ.

Blog  |  Facebook  |  Twitter

3 ಕಾಮೆಂಟ್‌ಗಳು:

  1. ಬಹಳ ಅಪರೂಪದ ಮಾಹಿತಿ ಒದಗಿಸಿದ್ದೀರಿ. ಧನ್ಯವಾದಗಳು. ಎಲ್ಲ ಗೋಪುರಗಳನ್ನು ಒಮ್ಮೆ ನೋಡುವ ಮನಸ್ಸಾಗುತ್ತಿದೆ.

    ಪ್ರತ್ಯುತ್ತರಅಳಿಸಿ
  2. ಕೆಂಪೇಗೌಡರ ಗೋಪುರಗಳ ಬಗ್ಗೆ ನಮಗೆ ತಿಳಿಯದ ಕೆಲವು ಮಾಹಿತಿಗಳನ್ನು ಶ್ರೀ ವಿವೇಕಾನಂದ ವಿ ರವರು ತಮ್ಮ ಲೇಖನದಲ್ಲಿ ಒದಗಿಸಿದ್ದಾರೆ .ಅವರಿಗೆ ಇದಕ್ಕಾಗಿ ಧನ್ಯವಾದಗಳು .

    ಪ್ರತ್ಯುತ್ತರಅಳಿಸಿ
  3. ಬೆಂಗಳುರಿನಲ್ಲಿಯೇ ಹುಟ್ಟಿ-ಬೆಳೆದು, ಇಲ್ಲಿರುವ ಕೆಂಪೇಗೌಡ ಗೋಪುರಗಳ ಬಗೆಗೆ ಅರಿವಿಲ್ಲದ ನನಗೆ ನಿಮ್ಮ ಲೇಖನವು ಸೂಕ್ತ ಮಾಹಿತಿಯನ್ನು ಒದಗಿಸಿತು. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ