ಭಾನುವಾರ, ನವೆಂಬರ್ 20, 2011

ಲುಬುಂಟು - ಮುಕ್ತ ಪ್ರಪಂಚದ ಕೀಲಿಕೈ

'ವಿಂಡೋಸ್' - ಗಣಕಲೋಕದಲ್ಲಿ ಕ್ರಾಂತಿಯನ್ನುಂಟುಮಾಡಿ, ಬಳಕೆದಾರರಿಗೆ ಡಾಸ್-ಪ್ರಾಂಪ್ಟ್ ಪರದೆಯಿಂದ ಬಣ್ಣದ ವಿಸ್ಮಯ ಪ್ರಪಂಚಕ್ಕೆ ಪ್ರವೇಶ ಒದಗಿಸಿಕೊಟ್ಟ 'ಮಾಯಾ ಸಾಧನ'. ಇಂದಿಗೂ ಸಹ ಗಣಕಯಂತ್ರ ಎಂದೊಡನೆ ಬಹಳಷ್ಟು ಮಂದಿಯ ಸ್ಮೃತಿಗೆ ಅರಿವಾಗುವುದು 'ಮೈಕ್ರೋಸಾಫ್ಟ್' ಅವರ ವಿಂಡೋಸ್ ಮಾತ್ರ ಎನ್ನುವುದನ್ನು ನಾವೆಲ್ಲಾ ಒಪ್ಪುವುದಾದರೆ, ಅದು ನಮ್ಮೆಲ್ಲರ ಮೇಲೆ ಬೀರಿರುವ ಅಗಾಧವಾದ ಪ್ರಭಾವವನ್ನು ಊಹಿಸಿಕೊಳ್ಳಬೇಕು. ಇದರ ಹಿಂದೆ ಬಿಲ್ ಗೇಟ್ಸ್ ಹಾಗೂ ಇನ್ನಿತರರ ಅವಿರತ ಪರಿಶ್ರಮ ಇಲ್ಲದಿಲ್ಲ.

ವಿಂಡೋಸ್ ಗಣಕ ಸಾಧನದ ಪ್ರಖ್ಯಾತಿ ಪ್ರಪಂಚದಾದ್ಯಂತ ವಿಸ್ತಾರವಾಗಿ ಹರಡಿರುವುದು ಎಷ್ಟು ಸತ್ಯವೋ, ವಿಂಡೋಸ್ ಮಾತ್ರವೇ ಸಮಸ್ತ ಗಣಕಪ್ರಪಂಚವಲ್ಲ ಎನ್ನುವುದೂ ಅಷ್ಟೇ ಸತ್ಯ. ಭಾರತದ ಮಟ್ಟಿಗೆ ಹೇಳುವುದಾದರೆ, ಬಹುತೇಕ ಮಂದಿ ಬಳಕೆದಾರರು ವಿಂಡೋಸ್ ನ ನಕಲಿ ಆವೃತ್ತಿಗಳನ್ನೇ ಇಂದಿಗೂ ತಮ್ಮ ಗಣಕಯಂತ್ರಗಳಲ್ಲಿ ಸ್ಥಾಪಿಸಿಕೊಂಡಿರುವುದು ಸಾಮಾನ್ಯ ಸಂಗತಿಯಾಗಿದೆ. ಇಂಥಹ ನಕಲು ಮಾಡಿದ ಸಾಧನಗಳ ಮೂಲಕ ಗಣಕಲೋಕದೊಂದಿಗಿನ ನಮ್ಮ ಒಡನಾಟದ ಅನುಭವ ಸಂಕುಚಿತಗೊಳ್ಳದೇ ಇರದು.

ಹಾಗಾದರೆ, ಮೈಕ್ರೋಸಾಫ್ಟ್ ನ ನಕಲಿ ತಂತ್ರಾಂಶಗಳ ಮಾಯಾಜಾಲದಿಂದ ಮುಕ್ತಿ ಇಲ್ಲವೇ? ವಿಂಡೋಸ್ ಹಾಗೂ ಸಂಬಂಧಿತ ಸಾಧನಗಳ ಪರವಾನಗಿಗಳ ಕಪಿಮುಷ್ಟಿಯಿಂದ ಬಿಡುಗಡೆ ಸಾಧ್ಯವಿಲ್ಲವೇ? ದುಬಾರಿ ಹಣ ತೆರದೆ ಗುಣಮಟ್ಟದ ಗಣಕ ತಂತ್ರಾಂಶಗಳ ಬಳಕೆ ಅಸಾಧ್ಯವೇ? ಯಾವುದೇ ನಿರ್ಬಂಧಗಳಿಲ್ಲದೆ ಸ್ವಚ್ಛಂದವಾಗಿ ಗಣಕತೆರೆಯ ಒಳಹೊಕ್ಕು ವಿಹರಿಸುವುದಾದರೂ ಹೇಗೆ? ಎಂಬಿತ್ಯಾದಿಯಾದ ಪ್ರಶ್ನೆಗಳಿಗೆಲ್ಲಾ ಇರುವ ಏಕೈಕ ಉತ್ತರ : ಗಣಕಲೋಕದ ಸವಿಸ್ತಾರ ಮುಕ್ತ ಪ್ರಪಂಚದ ಒಂದು ಪ್ರಮುಖ ಭಾಗವಾದ - 'ಲಿನಕ್ಸ್'.

ಹೌದು, 'ಲಿನಕ್ಸ್', ನಿಜವಾಗಿಯೂ ಮುಕ್ತ ತಂತ್ರಾಂಶಗಳ ಒಂದು ಅದ್ಭುತ ಲೋಕ. ಇದು ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ಸ್ವಾಮ್ಯದಲ್ಲಿರದೆ, ಪ್ರಪಂಚದಾದ್ಯಂತ ಇರುವ ಬಳಕೆದಾರರ ರಚನಾತ್ಮಕ ಸಂಘಟನೆಯಿಂದ ಜನ್ಮ ತಳೆದು ಬೆಳೆಯುತ್ತಲಿದೆ. ಒಂದು ಕಾಲಕ್ಕೆ ಗಣಕಲೋಕದ ದೊರೆ ಎನಿಸಿಕೊಂಡಿದ್ದ ಮೈಕ್ರೋಸಾಫ್ಟ್, ಇಂದು ಲಿನಕ್ಸ್ ತಂತ್ರಾಂಶಗಳಿಗನುಸಾರವಾಗಿ ತನ್ನೊಳಗೆ ಬದಲಾವಣೆಗಳನ್ನು ತಂದುಕೊಳ್ಳುತ್ತಿದೆ ಎಂದರೆ - ಲಿನಕ್ಸ್ ನ ಅಸಾಮಾನ್ಯ ಸಾಮರ್ಥ್ಯ ಹಾಗೂ ಅಗಾಧ ಬೆಳವಣಿಗೆಯನ್ನು ನಾವು ಅರ್ಥಮಾಡಿಕೊಳ್ಳಬೇಕು.

ವಿಂಡೋಸ್ ಗೆ ಹೋಲಿಸಿದರೆ ಲಿನಕ್ಸ್ ಉತ್ತವಾದುದು, ಏಕೆ? ಎನ್ನುವ ಪ್ರಶ್ನೆಗೆ ಉತ್ತರಿಸುವ ನೂರಾರು ಉತ್ತಮ ಲೇಖನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಪೂರ್ಣವಾಗಿ ವಿಂಡೋಸ್ ಬಳಸುತ್ತಿರುವವರಿಗೆ, ಲಿನಕ್ಸ್ ಒಂದು ಪರಕೀಯ ಪ್ರಪಂಚವೆನ್ನುವ ಭಾವನೆ ಬರುವುದು ಸಹಜ. ಇಂಥಹವರಿಗೆಂದೇ ಹೇಳಿ ಮಾಡಿಸಿದಂತಿರುವುದು 'ಉಬುಂಟು' ಗುಂಪಿಗೆ ಸೇರಿದ 'ಲುಬುಂಟು' ಆಪರೇಟಿಂಗ್ ಸಿಸ್ಟಮ್ ತಂತ್ರಾಂಶ.




ಲುಬುಂಟು ವಿಶೇಷತೆಗಳು:
  1. ಕನ್ನಡ ಹಾಗೂ ಪ್ರಪಂಚದ ಬಹುತೇಕ ಭಾಷೆಗಳಲ್ಲಿ ಲಭ್ಯವಿರುವ ಹಗುರವಾದ (light weight) ಆಪರೇಟಿಂಗ್ ಸಿಸ್ಟಮ್
  2. ಹಳೆಯ ಮಾದರಿ ಗಣಕಯಂತ್ರಗಳಲ್ಲೂ ಯಶಸ್ವಿಯಾಗಿ ಉಪಯೋಗಿಸಬಹುದು
  3. ಗಣಕಯಂತ್ರದಲ್ಲಿ ಅನುಸ್ಥಾಪಿಸಿಕೊಳ್ಳದೆಯೇ ಸಿ. ಡಿ. (Live CD) ಮೂಲಕ ಉಪಯೋಗಿಸುವ ಅವಕಾಶವಿದೆ
  4. ಎಲ್. ಎಕ್ಸ್. ಡಿ. ಇ. (LXDE) ಡೆಸ್ಕ್-ಟಾಪ್ ಹೊಂದಿದ್ದು, ಅತ್ಯಂತ ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ
  5. ಎಲ್ಲಾ ವಿಧವಾದ ಹಾರ್ಡ್-ವೇರ್ ಗಳಿಗೂ ಅಳವಡಿಸಬಹುದಾದ ಡ್ರೈವರ್ ಲಭ್ಯವಿರುತ್ತವೆ
  6. ಅನುಸ್ಥಾಪನೆ ಮಾಡಿದ ನಂತರ, ಕನಿಷ್ಠ ಕಂಪ್ಯೂಟಿಂಗ್ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಯಾವುದೇ ತಂತ್ರಾಂಶಗಳು ಇರುವುದಿಲ್ಲ. ನಮಗೆ ಬೇಕಾದ ರೀತಿಯಲ್ಲಿ ಅಭಿವೃದ್ಧಿಪಡಿಸಿಕೊಳ್ಳಬಹುದು
  7. ನಮ್ಮ ಅಗತ್ಯಕ್ಕೆ ತಕ್ಕಂತೆ ಎಲ್ಲಾ ಬಗೆಯ ತಂತ್ರಾಂಶಗಳ ಮುಕ್ತ ಆವೃತ್ತಿಗಳು 'ಉಬುಂಟು ರೆಪಾಸಿಟರಿ'ಯಲ್ಲಿ ಲಭ್ಯ
  8. ತಂತ್ರಾಂಶಗಳ ನವೀನ ಬದಲಾವಣೆಗಳನ್ನೂ ಸಹ ಅಂತರ್ಜಾಲದ ಮೂಲಕ ಉಚಿತವಾಗಿ ಪಡೆದುಕೊಳ್ಳಬಹುದು
  9. ಬಳಕೆಯಲ್ಲಿನ ಅನುಮಾನಗಳು ಹಾಗೂ ತೊಂದರೆಗಳಿಗೆ ಅತ್ಯಂತ ತ್ವರಿತವಾಗಿ ಸಲಹೆ/ಸೂಚನೆ/ಸಹಕಾರ ನೀಡುವ ಉಬುಂಟು ಸಮುದಾಯದ ಸಹಾಯ ಸದಾ ಉಚಿತವಾಗಿ ದೊರೆಯುತ್ತದೆ (20ನೇ ನವೆಂಬರ್ 2011, ಉಬುಂಟು ಸಮುದಾಯ ಅಭಿನಂದನಾ ದಿನ - UCA Day).

ಗಣಕಯಂತ್ರವನ್ನು ನಮ್ಮ ಅಭಿರುಚಿಗೆ ತಕ್ಕಂತೆ ಮಾಯಾಪೆಟ್ಟಿಗೆಯಾಗಿಸಲು ಇದಕ್ಕಿಂತ ಹೆಚ್ಚಿನ ಅಗತ್ಯವೇನಿದೆ? ಬನ್ನಿ, ಲುಬುಂಟು ಕೀಲಿಕೈ ಬಳಸಿ ಲಿನಕ್ಸ್ ಎಂಬ ಮುಕ್ತ ಗಣಕಪ್ರಪಂಚದಲ್ಲಿ ಸ್ವಚ್ಛಂದವಾಗಿ ವಿಹರಿಸೋಣ...

(ನನಗೆ ಕನ್ನಡ ಅಕ್ಷರಜ್ಞಾನ ಇಲ್ಲದಿದ್ದರೂ ಸಹ 'ಕಹಳೆ'ಯಲ್ಲಿ ಭಾಗವಹಿಸುವ ಬಯಕೆ. ಆದ್ದರಿಂದ, ಇಂಗ್ಲಿಷ್ ನಲ್ಲಿ ನಾನು ಬರೆದ ಈ ಲೇಖನವನ್ನು ಕನ್ನಡಕ್ಕೆ ಭಾಷಾಂತರಿಸಿ, 20ನೇ ನವೆಂಬರ್ ದಿನದಂದು ಪ್ರಕಟಿಸಲು ಕಹಳೆ ತಂಡದವರಲ್ಲಿ ಕಳಕಳಿಯ ಮನವಿ)

ಲೇಖಕರ ಕಿರುಪರಿಚಯ
ಶ್ರೀಮತಿ ವೀಣಾ ರೂಬಿನಿ.

ಮೂಲತಃ ಗುಜರಾತ್ ರಾಜ್ಯದವರಾದ ಇವರು, ಹತ್ತು ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನದ ಅಲೆಯಲ್ಲಿ ಬೆಂಗಳೂರು ತಲುಪಿದರು. ಕನ್ನಡ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವ ಇವರಿಗೆ ಕನ್ನಡ ನಾಡು, ನುಡಿ ಹಾಗೂ ಜನರ ಬಗ್ಗೆ ಅಪಾರವಾದ ಗೌರವ.

ಹಳೆಯ ಚಲನಚಿತ್ರ ಗೀತೆಗಳನ್ನು ಆಲಿಸುವುದು, ಕಸೂತಿ ಹಾಗೂ ಚಿತ್ರಗಳಿಗೆ ಅಂದವಾಗಿ ಬಣ್ಣ ತುಂಬುವುದು ಇವರ ಹವ್ಯಾಸ.

Blog  |  Facebook  |  Twitter

4 ಕಾಮೆಂಟ್‌ಗಳು:

  1. ಲಿನಕ್ಸ್ ಅರಿವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು :)

    ಇನ್ನಷ್ತು ಲಿನಕ್ಸ್ ಲೇಖನಗಳು ಇಲ್ಲಿವೆ- http://linuxaayana.net

    ಪ್ರತ್ಯುತ್ತರಅಳಿಸಿ
  2. ಉತ್ತಮ ಲೇಖನ. ಲಿನುಕ್ಸ್ ನಲ್ಲಿ ಬಹಳ ವಿಷಯ ತಿಳಿದುಕೊಳ್ಳುವುದಿದೆ. ಮಾಹಿತಿಗಾಗಿ ಧನ್ಯವಾದಗಳು.. ಓಂ ಶಿವಪ್ರಕಾಶ್ ರವರೆ, ಸೈಟ್ ಹೆಸರೇ ವಿಭಿನ್ನವಗಿದ್ದೆ. ಖಂಡಿತ ಭೇಟಿಕೊಡುತ್ತೇನೆ..

    ಪ್ರತ್ಯುತ್ತರಅಳಿಸಿ
  3. ನಿಮ್ಮ ಲೇಖನವು, ಲಿನಕ್ಸ್ ಎಂಬ ವಿಸ್ಮಯ ಪ್ರಪಂಚದ ಪರಿಚಯವನ್ನು ಮಾಡಿಕೊಡುವುದಲ್ಲದೆ ಅದರ ಬಗೆಗೆ ಕುತೂಹಲ ಮೂಡಿಸುವಲ್ಲಿಯೂ ಸಹ ಯಶಸ್ವಿಯಾಗಿದೆ.

    ಪ್ರತ್ಯುತ್ತರಅಳಿಸಿ
  4. ವೀಣಾ ರೂಬಿನಿ ಯವರೇ ,ನಿಮ್ಮ ಲಿನಕ್ಸ್, ಲುಬುಂಟು, ಲೇಖನವು ತುಂಬಾ ಉಪಯುಕ್ತವಾಗಿದೆ .ಕನ್ನಡ ಬರೆಯಲು ಬರದಿದ್ದರೂ ಕನ್ನಡದ ಜನರ ಬಗ್ಗೆ ಹೊಂದಿರುವ ಆಸಕ್ತಿ ಕಳಕಳಿ ಮೆಚ್ಚುವಂತಾಗಿದೆ .ಇದನ್ನೇ ಮುಂದುವರಿಸಿ ಸರಳ ಕನ್ನಡಭಾಷೆಯನ್ನೂ ಸ್ವಲ್ಪ ಸ್ವಲ್ಪವಾಗಿ ಓದಲು ಬರೆಯಲು ಪ್ರಯತ್ನಿಸಿ ಯಶಸ್ವಿಯಾಗಬಾರದೆಕೆಂದು ನನ್ನ ಮನವಿ.

    ಪ್ರತ್ಯುತ್ತರಅಳಿಸಿ