ಶುಕ್ರವಾರ, ನವೆಂಬರ್ 18, 2011

ಜಿ. ಪಿ. ರಾಜರತ್ನಂ ಅಯ್ಯಂಗಾರ್

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?
ತಿಂಡಿ ಬೇಕು ತೀರ್ಥ ಬೇಕು, ಎಲ್ಲ ಬೇಕು
ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು..

ಈ ಶಿಶು-ಗೀತೆಯನ್ನ ಎಷ್ಟು ಜನ ತಮ್ಮ ಬಾಲ್ಯದಲ್ಲಿ ಕಲಿತಿಲ್ಲ? "ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಪುಟ್ಟ ಪಾಪ, ಕೂಸು ಮರಿ ಬೇಕೇ? ಕೂಸುಮರಿ" ಹೀಗೆ ಹತ್ತು ಹಲವು ಮಕ್ಕಳ ಪದ್ಯಗಳನ್ನು ಹಾಡಿ ನಲಿದಿದ್ದೇವೆ. ಒಮ್ಮೆಯಾದರೂ ಅದನ್ನು ಬರೆದವರು ಯಾರಿರಬಹುದು ಎಂದು ಯೋಚಿಸಿದ್ದೀವಾ? ಪ್ರಾಯಶಃ ಇಲ್ಲ. ಈ ಎಲ್ಲ ಗೀತೆಗಳ, ಇನ್ನೂ ಹಲವು ಗೀತೆಗಳ ಕರ್ತೃ ಒಬ್ಬರೇ ಎಂದರೆ ಅಚ್ಚರಿ ಆಗಬಹುದೇನೋ. ನಿಜ, ಆ ಮಕ್ಕಳ ಮನಸನ್ನು, ಅದರ ತದಗುದಿಯನ್ನು ಅರ್ಥ ಮಾಡಿಕೊಂಡ ಜೀವಿ ಜಿ.ಪಿ.ರಾಜರತ್ನಂ.

ಜಿ.ಪಿ.ರಾಜರತ್ನಂ
ಜಿ. ಪಿ. ರಾಜರತ್ನಂ ಅಯ್ಯಂಗಾರ್ ಅವರು 1905, ಡಿಸೆಂಬರ್ 5 ರಂದು ಜನಿಸಿದರು. ತಾಯಿಯಿಲ್ಲದ ತಬ್ಬಲಿಯಾಗಿ, ತಂದೆಯ ವಾತ್ಸಲ್ಯದಿ, ಅಜ್ಜಿಯ ಅಕ್ಕರೆಯಲ್ಲಿ ಬೆಳೆದರು. 1931 ರಲ್ಲಿ ಕನ್ನಡದಲ್ಲಿ ಎಂ. ಎ. ಮುಗಿಸಿದರು.

''ಯಂಡ್ಕುಕ ರತ್ನ'' ಪದ್ಯ ಮಾಲೆ ರಚಿಸಿದರು. ಒಬ್ಬ ಬಡವ, ಕುಡುಕ, ಅವನ ಪ್ರಿಯತಮೆ, ಅವನ ಕನ್ನಡ ಪ್ರೇಮ, ಅವನ ಸುತ್ತಲಿನ ಜಗತ್ತನ್ನು ಕಾಣುವ ರೀತಿಯನ್ನು ಪದ್ಯದ ರೂಪದಲ್ಲಿ ಚಿತ್ರಿಸಿದ್ದಾರೆ. ಅವು ಹಳ್ಳಿ ಸೊಗಡಿನ ಭಾಷಾ ಪ್ರಯೋಗದಲ್ಲಿ ಇದ್ದು, ಜೀವನದ ದಾರ್ಶಣಿಕ ಸತ್ಯಗಳನ್ನು ಪ್ರತಿಬಿಂಬಿಸುತ್ತವೆ. ಪಿ. ಕಾಳಿಂಗ ರಾವ್, ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಮತ್ತು ಹಲವು ಗಾಯಕರು ಅವರ ಸಾಹಿತ್ಯಕ್ಕೆ ಸಂಗೀತ ಉಸಿರು ಕೊಟ್ಟು ಬದುಕಿಸಿದ್ದಾರೆ.

ಇನ್ನ ಮಕ್ಕಳ ಸಾಹಿತ್ಯಕ್ಕೆ ಬಂದರೆ, ಅದರ ರಚನೆಯ ಹಿಂದೊಂದು ಕುತೂಹಲಕಾರಿ ಕಥೆ ಇದೆ.

1932 ರಲ್ಲಿ, ಎಂ. ಎ. ಪದವೀಧರರಾದರೂ, ಅವರಿಗೆ ಅದಕ್ಕೆ ತಕ್ಕ ಕೆಲಸ ಸಿಕ್ಕಿರಲಿಲ್ಲ. ಅಷ್ಟರಲ್ಲಾಗಲೇ ಅವರು ರತ್ನನ ಪದಗಳನ್ನು ರಚಿಸಿ ಆಗಿತ್ತು. ಹೀಗಿರುವಾಗ ಅವರ ತಂದೆಯ ಆರೋಗ್ಯ ಕೆಟ್ಟಿತು. ಅವರ ತಂದೆ ಮಾಧ್ಯಮಿಕ ತರಗತಿಯ ಶಿಕ್ಷಕರಾಗಿದ್ದರು. ಅಂದು 'ಬದಲಿ' ಶಿಕ್ಷಕರಾಗಿ ಶಾಲೆಗೆ ಹೋದರು. ಅಲ್ಲಿ ಶಾಲಾ ಮಕ್ಕಳ ಪಠ್ಯ ಪದ್ದತಿಯಲ್ಲಿ ಇದ್ದ ಪಾಠ, ಪದ್ಯಗಳನ್ನು ನೋಡಿ, "ಮಕ್ಕಳು ಇದನ್ನು ಹೇಗೆ ತಾನೇ ಸವಿದಾವು?" ಎಂದು ಬೇಸರಿಸಿದರು. ಮಾಧ್ಯಮಿಕ-ಎರಡನೇ ತರಗತಿಯ ಮಕ್ಕಳಿಗೆ ಪುಸ್ತಕದಲ್ಲಿನ ಪದ್ಯ 'ಹರಿ ಭಕ್ತಿ ಸಾರ' ಹೇಳಿಕೊಟ್ಟು ಬಂದರು. ಅಂದು ಸಂಜೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸ್ನಾನ ಘಟ್ಟದಲ್ಲಿ ಕಾಲು ಚಾಚಿ ಕುಳಿತು ಕೊಂಡಾಗ ಅವರಿಗೆ ಮಕ್ಕಳಿಗೆ ಇಷ್ಟ ಆಗುವ ಹಾಗೆ ಏನಾದರು ಬರಿಯಬೇಕು ಎಂಬ ಹಂಬಲದೋರಿತು. ಆಗ
"ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ"

ರೂಪುಗೊಂಡಿತು. ಅದನ್ನು ಪೂರ್ತಿ ಬರೆದು, ರಾಗ ಹಾಕಿ, ರಾತ್ರಿಯೆಲ್ಲ ಮಕ್ಕಳು ಎಷ್ಟು ಸಂತೋಷ ಪಡಬಹುದೆಂಬ ಹುಮ್ಮಸ್ಸಿನಲ್ಲೇ ಕಳೆದರು. ಮುಂದಿನ ದಿನ, ಪಾಠ ಮುಗಿದ ಮೇಲೆ, "ತುತ್ತೂರಿ"ಯನ್ನು ಕರಿ ಹಲಗೆಯ ಮೇಲೆ ಬರೆದು ಅದನ್ನು ಮಕ್ಕಳಿಗೆ ಹೇಳಿ ಕೊಟ್ಟರು. ಮಕ್ಕಳಿಗೆ ಹಿಗ್ಗೋ ಹಿಗ್ಗು. ಮಕ್ಕಳ ಸಂತಸ ಕಂಡರೆ ಸಂತಸ ಪಡದ ಜೀವ ಈ ಭುವಿಯಲ್ಲಿ ಉಂಟೆ?

ಅದೇ ವಾರ ಇನ್ನ ಒಂದಷ್ಟು ಶಿಶು ಗೀತೆಗಳನ್ನು ಬರೆದರು. ಮನೆಯ ಬೀದಿಯಲ್ಲಿ ಇದ್ದ ಮಕ್ಕಳಿಗೆ ಹೇಳಿಕೊಟ್ಟರು. ಮಕ್ಕಳ ಪೋಷಕರಿಗೆ ಬಹಳಾನೇ ಇಷ್ಟವಾಗ ತೊಡಗಿತು. ಅದೇ ಬೀದಿಯಲಿ ಶ್ರೀ. ಎ. ವೆಂಕಟ ರಾವ್ ಎಂಬ ಪುಸ್ತಕ ಮಾರುವ, ಮುದ್ರಿಸುವ "ಪ್ರೋಗ್ರೆಸ್ಸ್ ಬುಕ್ ಸ್ಟಾಲ್ " ನಡೆಸುವವರು ಇದ್ದರು. ಅವರು ರಾಜರತ್ನಂ ಅವರ ಶಿಶು ಗೀತೆಗಳನ್ನು "ಹೀಗೆ ನನ್ನ ತುತ್ತೂರಿ" ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಪ್ರಕಟಿಸಿದರು.

ಅದೇ ಕಾಲದಲ್ಲಿ ಡಾ|| ಎಂ. ವೀ. ಗೋಪಾಲ ಸ್ವಾಮಿ ಎಂಬ ಮನಶಾಸ್ತ್ರಜ್ಞರು ಸಣ್ಣ ಮಕ್ಕಳಿಗಾಗಿ ಒಂದು ಶಿಶು ವಿಹಾರ ಆರಂಭ ಮಾಡಿದ್ದರು. ಅವರು ತುತ್ತೂರಿ ಓದಿ, ಪ್ರಭಾವಿತರಾಗಿ ಇವರನ್ನು ಅಲ್ಲೇ ಕೆಲಸ ಮಾಡಲು ಆಹ್ವಾನವಿತ್ತರು. ಅಲ್ಲಿ ರಾಜರತ್ನಂ ಅವರು ಒಂದು ವರ್ಷ ಸೇವೆ ಸಲ್ಲಿಸಿದರು, ಅದೇ ಸಮಯದಲ್ಲಿ 1933 ರಲ್ಲಿ 'ಕಡಲೆಪುರಿ', 'ಚುಟುಕ' ಎಂಬ ಎರಡು ಕವನ ಸಂಕಲನಗಳು ಬಿಡುಗಡೆಯಾದವು. ಅಲ್ಲಿಂದ ಬೆಂಗಳೂರಿನ ರಾಮ ಮೋಹನ ಕಂಪನಿ ಪ್ರಕಾಶಕರು "ಚೀನಾ ದೇಶದ ಬುದ್ಧ ಯಾತ್ರಿಕರು" ಇದರ ಬಗ್ಗೆ ಬರೆದು ಕೊಡಲು ಕೋರಿಕೊಂಡರು. ಅದೇ ವೇಳೆಗೆ ರಾಜರತ್ನಂ ಧರ್ಮ-ಪತ್ನಿ ಕ್ಷಯ ರೋಗದಿಂದ ಬಳಲುತಿದ್ದರು. ಅವರ ಆಸ್ಪತ್ರೆ ಖರ್ಚಿಗೆ ತಡಕಾಡುತಿದ್ದಾಗ, ಈ ಆಹ್ವಾನವು ಮರುಳುಗಾಡಿನಲ್ಲಿ ನೀರು ಸಿಕ್ಕ ಹಾಗೆ ಆಯಿತು.

ಸಮಯವಿದ್ದಾಗೆಲ್ಲಾ ಬರೆದಿದ್ದನ್ನ ಕೂಡಿಸಿ 'ಕಲ್ಲುಸಕ್ಕರೆ' 1935 ರಲ್ಲಿ ಪ್ರಕಟಿಸಿದರು. ಮುಂದೆ ಸಣ್ಣ ಗದ್ಯ ಪಾಠಗಳ ಸಮ್ಮಿಲನವೇ 'ಗುಲಗಂಜಿ' ಹಾಗೂ 'ಕೋಳಿಕಳ್ಳ' ಆಯಿತು . ಹೀಗೆ ಮುಂದೆ ಬಹಳ ಪ್ರಕಟಿಸಿದರು.

ರಾಜರತ್ನಂ ಅವರು ಮಕ್ಕಳ ಮನಸ್ಸನ್ನು ಎಷ್ಟು ಚನ್ನಾಗಿ ಗ್ರಹಿಸಿದ್ದರು ಎಂದರೆ, ಆಟದ ಜೊತೆ ಪಾಠ ಇದ್ದರೆ, ಮಕ್ಕಳಿಗೆ ಕಲಿಕೆ ತ್ರಾಸು ಎನಿಸುವುದೇ ಇಲ್ಲ ಎಂದು ತಿಳಿದಿದ್ದರು .ಅವರ ಮಾತಿನಲ್ಲೇ ಹೇಳಬೇಕೆಂದರೆ "ಮಕ್ಕಳು ನಾದ ಪ್ರಿಯರು. ಕೇಳಿದ ವರ್ಣಗಳನ್ನು, ಕೇಳಿದ ಪದಗಳನ್ನು, ಕೇಳಿದ ಪಂಕ್ತಿಗಳನ್ನು ಪುನಃ ಪುನಃ ಕೇಳುತಿದ್ದರೆ ಅವರಿಗೆ ಸಂತೋಷ".

ಒಂದು ಎರಡು ಬಾಳೆಲೆ ಹರಡು, ವಾರಕೆ ಎಳೇ ಏಳು ದಿನ, ಹತ್ತು ಮಕ್ಕಳು ಇಂತಹವು ಪದ್ಯರೂಪದಿ ಬಾಯಿಪಾಠ ಮಾಡಿದರೆ ಬಹಳ ದಿನ ನೆನಪು ಉಳಿಯುತ್ತದೆ ಎಂದು ರಚಿಸಿದರು.

ಇಂತಹ ಜೀವಿ ಬಹು ವಿರಳ. ಅವರಿಂದ ರಚಿತವಾದ ಶಿಶು ಸಾಹಿತ್ಯ, ನಾಟಕ ಹಾಗೂ ಇತರೆ ಗದ್ಯ ಪ್ರಕಾರಗಳು ಅವರ ಹೃದಯಂಗಮ ಶೈಲಿಯ, ಸುಗಮ ಗ್ರಹಿಕೆಗೆ ಆಪ್ತವಾದ ಬರವಣಿಗೆಗೆ ಮೊಹರು ಅಚ್ಚು ಒತ್ತುತ್ತದೆ.

ಇದು ಶಿಶು-ಸಾಹಿತ್ಯಕ್ಕೆ ಅವರಿತ್ತ ಕೊಡುಗೆಯ ಬಗ್ಗೆ ಕಿರು ಲೇಖನ. ಒಬ್ಬ ತಾಯಿಯಿಲ್ಲದ ತಬ್ಬಲಿ ಬರೆದ ಕವಿತೆಗಳನ್ನು ನಮ್ಮ ರಾಜ್ಯದ ಎಲ್ಲಾ ತಾಯಂದಿರು ಅವರ ಮಕ್ಕಳಿಗಾಗಿ ಹಾಡುತ್ತಾರೆ. ಅವರ ಬಗ್ಗೆ, ಅವರಿಂದ ಶಿಶು-ಸಾಹಿತ್ಯ ಹೊರಹೊಮ್ಮಿದ ಹಿನ್ನಲೆ ಈ ಲೇಖನದಲ್ಲಿದೆ. ಇದೇ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅದರ ಬಗ್ಗೆ ಬರೆಯುತ್ತಾ ಹೋದರೆ ಒಂದು ಕಿರು ಹೊತ್ತಿಗೆಯೇ ತಯಾರಾಗುವುದೇನೋ.

ರಾಜರತ್ನಂ ಕನ್ನಡಭಾಷೆಯ ಪ್ರಾವೀಣ್ಯತೆ, ಅದರ ಮೇಲಿನ ದಟ್ಟ ಒಲವನ್ನು ನಿರೂಪಿಸಲು ಈ ಸಾಲುಗಳು ಸಾಕಲ್ಲವೇ?

ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯೋಲ್ಸಾಕಿದ್ರೂನೇ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ ನೀ ಕಾಣೆ..

1969 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಕರ್ನಾಟಕ ರಾಜ್ಯ ಸರ್ಕಾರವು 1970 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನಿತ್ತು ಗೌರವಿಸಿತು.

ಲೇಖಕರ ಕಿರುಪರಿಚಯ
ಶ್ರೀಮತಿ ಸಹನಾ ಸುಹಾಸ್.

ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಕಳೆದ 4 ವರ್ಷಗಳುದ್ದಕ್ಕೂ ಯಾಂತ್ರಿಕ ಬದುಕು ನಡೆಸಿ, ಈಗ ಕೆಲಸ ಬಿಟ್ಟು ತಾಯಿತನವೆಂಬ ಮಾಂತ್ರಿಕ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ.

ಕನ್ನಡ ಭಾಷೆ, ಅದರ ಸಾಹಿತ್ಯದ ಬಗ್ಗೆ ಅಪಾರವಾದ ಅಭಿಮಾನ ಹೊಂದಿರುವ ಇವರು ಬಹುತೇಕ ಎಲ್ಲಾ ಸಾಹಿತ್ಯ ಪ್ರಕಾರಗಳನ್ನು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

Blog  |  Facebook  |  Twitter

14 ಕಾಮೆಂಟ್‌ಗಳು:

  1. ಅತ್ಯುತ್ತಮವಾಗಿ ತಪ್ಪಿಲ್ಲದ ಸ್ವಚ್ಛ ಕನ್ನಡಲ್ಲಿ ಬರೆದಿದ್ದೀರಿ. ರಾಜರತ್ನಂರವರು ಮಕ್ಕಳ ಪದ್ಯ ರಚನೆಗೆ ಶುರುವಿಟ್ಟುಕೊಂಡ ಸಂದರ್ಭ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  2. ರಾಜರತ್ನಂ ಅವರ ಬಗ್ಗೆ ಒಳ್ಳೆಯ ಲೇಖನ ಕೊಟ್ಟಿದ್ದೀರಿ. ಇತರ ಪ್ರಕಾರಗಳಲ್ಲೂ ಅವರ ಕೈ ಚಳಕ ಹೇಗಿತ್ತು ಎಂಬುದು ಇನ್ನಾದರೂ ತಿಳಿಯ ಬೇಕಿದೆ.

    ಪ್ರತ್ಯುತ್ತರಅಳಿಸಿ
  3. ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ರಾಜರತ್ನಂ ಅಂತಹ ಅಪೂರ್ವವಾದ ರತ್ನದ ಬಗ್ಗೆ ಹೆಚ್ಚು ವಿವರ ನೀಡಿದಕ್ಕೆ ಧನ್ಯವಾದಗಳು. ಹೀಗೆ ಬರೆಯುತ್ತಿರಿ. ನಿಮ್ಮ ಲೇಖನ ಓದುವುದೇ ಒಂದು ಖುಷಿ. ನಿಮ್ಮ ಲೇಖನ ನಮ್ಮ ಸಂತಸಕ್ಕೆ ಕಾರಣ.

    ಅಶ್ವಿನಿ ಅಜಿತ್.

    ಪ್ರತ್ಯುತ್ತರಅಳಿಸಿ
  4. ಜಿ ಪಿ ರಾಜ ರತ್ನಂ ಎಂದ ಕೂಡಲೇ ನೀವು ಹೇಳಿದ ಪದ್ಯಗಳೆಲ್ಲ ಒಮ್ಮೆ ನನ್ನ ಮನಸಲ್ಲಿ ಗುನುಗಿದವು. ಇಂತಹ ಒಬ್ಬ ಬರಹಗಾರ ನಮ್ಮ ಕನ್ನಡದ
    ಹೆಮ್ಮೆಯ ಜೀವ ಎಂದರೆ ತಪ್ಪಾಗಲಾರದು. ನಿಮ್ಮ ಲೇಖನದಲ್ಲಿ ಅವರ ಬರಹ ಶೈಲಿಯನ್ನು ಪರಿಪೂರ್ಣವಾಗಿ ನೀವು ತಿಳಿಸಿದ್ದೀರಿ. ತುಂಬಾ ಚೆನ್ನಾಗಿ ಮೂಡಿ
    ಬಂದಿದೆ.

    ಪ್ರತ್ಯುತ್ತರಅಳಿಸಿ
  5. "ಮಕ್ಕಳು ನಾದ ಪ್ರಿಯರು. ಕೇಳಿದ ವರ್ಣಗಳನ್ನು, ಕೇಳಿದ ಪದಗಳನ್ನು, ಕೇಳಿದ ಪಂಕ್ತಿಗಳನ್ನು ಪುನಃ ಪುನಃ ಕೇಳುತಿದ್ದರೆ ಅವರಿಗೆ ಸಂತೋಷ". ಜಿ.ಪಿ.ರಾಜರತ್ನ೦ ಅವರು ಮಕ್ಕಳ ಮನಸ್ಸನ್ನು ಅರಿತಿದ್ದರು ಎನ್ನುವುದನ್ನು ಅವರ ಈ ಹೇಳಿಕೆ ಸ್ಪಷ್ಟಪಡಿಸುತ್ತದೆ. ಬಹಳ ಚೆನ್ನಾಗಿ, ಆತ್ಮೀಯವಾಗಿ ಪರಿಚಯಿಸಿದ್ದೀರಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  6. ಜಿ ಪಿ ರಾಜರತ್ನಂ ಅವರ ಬಗ್ಗೆ ಓದಿ ತುಂಬಾನೇ ಖುಷಿ ಆಯಿತು.... ನಿಮ್ಮ ಲೇಖನವನ್ನು ಓದುಓದುತ್ತ ನಾನು ನನ್ನು ಬಾಲ್ಯದ ದಿನಗಳನ್ನು ನೆನಪಿಸಿಕೊಂಡೆ .....ಒಂದು ಎರಡು ಬಾಳೆಲೆ ಹರಡು.., ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ ? ನನ್ನ ಬಾಲ್ಯದ ಗೆಳತಿ ನೀತಾ ಅವರ ಅಮ್ಮ ನನಗೆ ಇ ಪದ್ಯವನ್ನು ಹೆಳಿಸುತಿದ್ದರು....ಒಂದು ಎರಡು ಬಾಳೆಲೆ ಹರಡು......ನನಗೆ ಇನ್ನು ಪೂರ್ತಿಯಾಗಿ ನೆನಪಿದೆ..!! ಸಹನಾ ರವರೆ ನಿಮ್ಮ ಲೇಖನವನ್ನ ಓದಿ ಮನೋಲ್ಲಸಗೊಂಡಿತು ..ತಮಗೆ ಹೃತ್ಪೂರ್ವ ವಂದನೆಗಳು ..!

    ಪ್ರತ್ಯುತ್ತರಅಳಿಸಿ
  7. ಜಿ. ಪಿ. ರಾಜರತ್ನಂ ಅವರ ಶಿಶುಕಾವ್ಯಗಳು ನಮ್ಮ ಸ್ಮೃತಿಯಿಂದ ಎಂದೆಂದಿಗೂ ಅಳಿಸಿಹೋಗಲಾರವು. ನಿಮ್ಮ ಈ ಲೇಖನವು ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು.

    ಪ್ರತ್ಯುತ್ತರಅಳಿಸಿ
  8. ಸಹನಾ ರಾಜರತ್ನಂ ಅವರ ಬಗ್ಗೆ ಚೆನ್ನಾಗಿ ವಿವರಿಸಿದ್ದಿರಾ... ಅಂದ ಹಾಗೆ ನಾಯಿ ಮರಿ ನಾಯಿ ಮರಿ ಹಾಡನ್ನು ಹಾಡಿರದ ಮಕ್ಕಳಿಲ್ಲ.. ಅದನ್ನು ಮರೆಯಲು ಸಾಧ್ಯವಿಲ್ಲ... ಮಕ್ಕಳನ್ನು ಸಂತೋಷ ಪಡಿಸುವುದರಲ್ಲೇ ಸಂತೋಷ ಇದೆ ಎನ್ನುವುದು ಎಷ್ಟು ಸತ್ಯ ಅಲ್ಲವೇ...ಇದಕ್ಕೆ ಜೆ.ಪಿ ಅವರ ಕವಿತೆಗಳೇ ಸಾಕ್ಷಿ... ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಒಳ್ಳೆಯ ಲೇಖನ ನೀಡಿದ್ದಿರಾ..

    ಪ್ರತ್ಯುತ್ತರಅಳಿಸಿ
  9. ಇಂತಹ ಮೇರು ವ್ಯಕ್ತಿಯ ಬಗ್ಗೆ ತುಂಬಾ ಉತ್ತಮ ಮಾಹಿತಿಗಳನ್ನು ಒದಗಿಸುವ ಲೆಖನ. 1905, ಡಿಸೆಂಬರ್ 5 ರಂದು ಜನಿಸಿದರು ಎಂದಿದೆ. ವಿಕಿಪೀಡಿಯಾದಲ್ಲಿ ಹುಟ್ಟಿದ ವರ್ಷ 1904 ಎಂದಿದೆ. ಯಾವುದು ಸರಿಯೆನ್ನುವ ಗೊಂದಲ.

    ಪ್ರತ್ಯುತ್ತರಅಳಿಸಿ
  10. ಇಂತಹ ಮೇರು ವ್ಯಕ್ತಿಯ ಬಗ್ಗೆ ತುಂಬಾ ಉತ್ತಮ ಮಾಹಿತಿಗಳನ್ನು ಒದಗಿಸುವ ಲೆಖನ. 1905, ಡಿಸೆಂಬರ್ 5 ರಂದು ಜನಿಸಿದರು ಎಂದಿದೆ. ವಿಕಿಪೀಡಿಯಾದಲ್ಲಿ ಹುಟ್ಟಿದ ವರ್ಷ 1904 ಎಂದಿದೆ. ಯಾವುದು ಸರಿಯೆನ್ನುವ ಗೊಂದಲ.

    ಪ್ರತ್ಯುತ್ತರಅಳಿಸಿ
  11. ಇಂತಹ ಮೇರು ವ್ಯಕ್ತಿಯ ಬಗ್ಗೆ ತುಂಬಾ ಉತ್ತಮ ಮಾಹಿತಿಗಳನ್ನು ಒದಗಿಸುವ ಲೆಖನ. 1905, ಡಿಸೆಂಬರ್ 5 ರಂದು ಜನಿಸಿದರು ಎಂದಿದೆ. ವಿಕಿಪೀಡಿಯಾದಲ್ಲಿ ಹುಟ್ಟಿದ ವರ್ಷ 1904 ಎಂದಿದೆ. ಯಾವುದು ಸರಿಯೆನ್ನುವ ಗೊಂದಲ.

    ಪ್ರತ್ಯುತ್ತರಅಳಿಸಿ
  12. ತುಂಬಾ ಚೆನ್ನಾಗಿ ಬರೆದಿದ್ದೀರಿ ಸಹಾನಾ ಮೇಡಂ 🙏 ಒಳ್ಳೆಯ ಮಾಹಿತಿಯನ್ನು ಹಾಗೂ ಸಂದೇಶವನ್ನು ನೀಡಿದ್ದೀರಿ.

    ಪ್ರತ್ಯುತ್ತರಅಳಿಸಿ