ಬುಧವಾರ, ನವೆಂಬರ್ 16, 2011

ಕನ್ನಡ ಕಡೆಗಣಿಸಿದ ಸರ್ಕಾರದ ಹಿಂದಿರುವ ಸತ್ಯದ ನೆಲೆ

ಛಾಯಾಚಿತ್ರ ಕೃಪೆ : ಬಿ. ಎಸ್. ಶಿವಕುಮಾರ
ಐವತ್ತಾರನೆಯ ಕನ್ನಡ ರಾಜ್ಯೋತ್ಸವವನ್ನು ನಾವಿಂದು ಆಚರಿಸಿದ್ದೇವೆ. ಇದೇ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಅಥವಾ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಬೇರೊಂದು ಶಾಲೆಗೆ ವಿಲೀನಗೊಳಿಸುವ ವಿಚಾರ ಬಹು ಚರ್ಚೆಗೆ ಗ್ರಾಸವಾಗಿದೆ. ಆಳುವ ಸರ್ಕಾರವೇ ಕನ್ನಡದ ಬಗೆಗೆ ನಿರ್ಲಕ್ಷ್ಯ ತಾಳಿದರೆ, ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವವರ್ಯಾರು? ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಮಾತೃಭಾಷೆಯೊಂದೇ ಸರ್ವಸ್ವ. ವಾತ್ಸಲ್ಯಮಯಿಯಾದ ತಾಯಿ ಮಡಿಲಲ್ಲಿ ಮಲಗಿ ಅವಳ ಜೋಗುಳದ ನಿನಾದದೊಡನೆ ಭಾವೈಕ್ಯಗೊಂಡು ಅದರ ಅಂತಃಸತ್ವವನ್ನು ಹೀರಿ ಮಾತೃ ನುಡಿಯಲ್ಲೇ ಬೆಳೆದ ಅವರ ಮುಗ್ಧ ಭಾವಕ್ಕೆ ಕನ್ನಡ ಒಲಿದಿದೆ.

ನಮ್ಮ ನಗರ ಪ್ರದೇಶಗಳಲ್ಲಿ ಪ್ರತಿವರ್ಷ ನವೆಂಬರ್ ಬಂತೆಂದರೆ ರಾಜ್ಯೋತ್ಸವವನ್ನು ನಾಡಿನ ಹಬ್ಬವಾಗಿ ಆಚರಿಸುತ್ತಾರೆ. ನಮ್ಮ ಸಂಸ್ಕೃತಿಯ ಪ್ರತೀಕವೆಂಬಂತೆ ಆಚರಿಸುತ್ತಿದ್ದರೂ ನಗರ ಪ್ರದೇಶದ ವಿದ್ಯಾವಂತ ಕನ್ನಡಿಗರು ಹೆಚ್ಚಾಗಿ ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಸಹಜ. ಹೀಗಾಗಲು ಮೂಲ ಕಾರಣವೇನು? ಇವತ್ತಿನ ವಿದ್ಯಾವಂತ ವರ್ಗ ಏಕೆ ಕನ್ನಡ ಭಾಷಾ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಲು ಹಿಂಜರಿಯುತ್ತಿದ್ದಾರೆ? ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಲು ಏಕೆ ಬಯಸುತ್ತಾರೆ? ಅದರ ಹಿಂದಿರುವ ಸತ್ಯವನ್ನು ಹುಡುಕಿ ಅರ್ಥೈಸಿಕೊಳ್ಳುವುದು ಸೂಕ್ತ.

ಕನ್ನಡಿಗರಾದ ನಾವೆಲ್ಲಾ ನಮ್ಮ ಮಾತೃ ಸಂಸ್ಕೃತಿಯನ್ನು ಬೆಳೆಸಿ, ಉಳಿಸಿ, ಸಂರಕ್ಷಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ನಿಜ. ಆದರೆ, ಇದುವರೆವಿಗೂ ನಾವು ಪರಿಪೂರ್ಣವಾಗಿ ಕನ್ನಡ ಭಾಷಾ ಮಾಧ್ಯಮವನ್ನು ಅನುಸರಿಸಿ ಪ್ರಗತಿಪಥದ ಹೆಜ್ಜೆಯಲ್ಲಿ ಹಾದುಬಂದಿದ್ದೇವೆಯೇ? ಎಂಬ ಪ್ರಶ್ನೆಯನ್ನು ಹಾಕಿಕೊಂಡು ಚಿಂತಿಸಬೇಕಾದುದು ಅನಿವಾರ್ಯವಾಗಿದೆ. ಕನ್ನಡಿಗರಾದ ನಾವು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗುವುದು ಸರಿಯಾದ ಕ್ರಮವಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ರಾಷ್ಟೀಯ ಮಟ್ಟದಲ್ಲಿ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕಾದರೆ ಯಾವ ಭಾಷೆಯ ಮೊರೆ ಹೋಗಬೇಕು ಎಂಬುದಕ್ಕೆ ನಾವೆಲ್ಲಾ ಉತ್ತರವನ್ನು ಹುಡುಕಿಕೊಳ್ಳಬೇಕು. ಈ ಮಾತಿನ ಮೂಲಕ ನಾನು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿರೋಧಿಸುತ್ತಿಲ್ಲ; ಇದು ವಾಸ್ತವತೆಯ ದೃಷ್ಟಿಯ ಆಲೋಚನೆಯಾಗಿದೆ.

ಮುಖ್ಯವಾಗಿ ನಮ್ಮೆದುರಿಗಿರುವ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡು ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಗತಿಯತ್ತ ಸಾಗಬೇಕಾದರೆ ಜ್ಞಾನಾರ್ಜನೆಯನ್ನು ರೂಡಿಸಿಕೊಳ್ಳುವ ಕಾಲೇಜು ಹಂತದಲ್ಲಿ ಎಲ್ಲಾ ಜ್ಞಾನಶಿಸ್ತುಗಳ ವಿಷಯಗಳು ಮಾತೃಭಾಷೆಯಲ್ಲಿ ಬೋಧಿಸಲ್ಪಟ್ಟಾಗ ಮಾತ್ರ. ಒಂದು ರೀತಿಯಲ್ಲಿ ಆ ಕ್ರಮ ಔಚಿತ್ಯಪೂರ್ಣವೆಂದು ನಾವು ಭಾವಿಸುವುದಾದರೂ ವಿಶ್ವಮಟ್ಟದ ವಿಜ್ಞಾನ ತಂತ್ರಜ್ಞಾನಗಳ ವಿಷಯಗಳು ಎಂದು ಭಾವಿಸಿದಾಗ ಇಂಗ್ಲಿಷ್ ಭಾಷೆ ಬಲ್ಲವರಾಗಿರಲೇಬೇಕು. ಕನ್ನಡ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಲು ಹೇಗೆ ಸವಾಲಾಗಿ ಸ್ವಿಕರಿಸಬೇಕು ಎಂಬುದನ್ನು ಬುದ್ಧಿಜೀವಿಗಳೇ ಕಾಲಧರ್ಮಕ್ಕನುಗುಣವಾಗಿ ಮಾರ್ಗೋಪಾಯಗಳನ್ನು ಸೂಚಿಸಬೇಕು.

ಜಾಗತೀಕರಣದ ನಿಯಮಾನುಸಾರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಹಣ ಗಳಿಸುವುದಕ್ಕೆ ಹೊರಟಿದ್ದು, ಶಿಕ್ಷಣ ವ್ಯವಸ್ಥೆಯಲ್ಲೂ ಭಿನ್ನ ಸ್ವರೂಪವನ್ನು ಕಾಯ್ದುಕೊಳ್ಳುವುದಕ್ಕೆ ತೊಡಗಿವೆ. ಕನ್ನಡ ಮಾಧ್ಯಮದಲ್ಲಿ ಪರವಾನಗಿ ಪಡೆದು ಇಂಗ್ಲಿಷ್ ಮಾಧ್ಯಮದ ಬೋಧನೆಯಲ್ಲಿ ತೊಡಗಿದ್ದರೂ ಅಂತಹ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಗೋಜಿಗೇ ಹೋಗದ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವುದಕ್ಕೆ ಮುಂದಾಗಿರುವುದು ದುರಾದೃಷ್ಟಕರ ಸಂಗತಿ. ಇದರ ಹಿಂದಿರುವ ಸತ್ಯವೇನೆಂಬುದನ್ನು ಕನ್ನಡಿಗರು ಅರ್ಥಮಾಡಿಕೊಳ್ಳಬೇಕಾಗಿದೆ. ಇಂಗ್ಲಿಷ್ ವ್ಯಾಮೋಹ ಉಳ್ಳವರ ಕಡೆಗೆ ಸರ್ಕಾರ ಹೊರಳುತ್ತಿದೆ ಎಂದರೆ ತಪ್ಪಾಗಲಾರದು.

ಪ್ರಮುಖ ಐಚ್ಚಿಕ ವಿಷಯಗಳ ಶಾಸ್ತ್ರಜ್ಞಾನಗಳ ಬೋಧನೆಯ ನಡುವೆ ಕನ್ನಡ ಭಾಷಾ ವಿಷಯಗಳು ಇಂದು ಊಟಕ್ಕೆ ಉಪ್ಪಿನಕಾಯಿಯ ಸ್ಥಿತಿಯಲ್ಲಿವೆ.  ಹಾಗಾದರೆ ಮುಂದಿನ ದಿನಗಳಲ್ಲಿ ಕನ್ನಡವನ್ನೇ ನಂಬಿದವರ ಪಾಡೇನು? ಹಿಂದಿನಿಂದಲೂ ಕನ್ನಡಪರ ಹೋರಾಟ, ಧೋರಣೆಗಳು ವ್ಯಕ್ತವಾಗಿವೆ ನಿಜ. ಹಾಗಾದರೆ, ಇಂಗ್ಲಿಷ್ ವ್ಯಾಮೋಹ ತಪ್ಪಿದೆಯೇ? ಕನ್ನಡಪರ ಹೋರಾಟ ಮತ್ತು ಧೋರಣೆಯುಳ್ಳವರು ಪರಿಪೂರ್ಣವಾಗಿ ಯಶಸ್ಸು ಗಳಿಸಿದ್ದಾರೆಯೇ? ಕನ್ನಡವನ್ನೇ ನಂಬಿದವರ ಭವಿಷ್ಯದ ಬದುಕೇನು? ಉನ್ನತ ಸ್ಥಾನ-ಮಾನಗಳುಳ್ಳ ವಿದ್ಯಾವಂತ ವರ್ಗ ತಮ್ಮ ಮಕ್ಕಳಿಗೆ ಯಾವ ಜ್ಞಾನಶಿಸ್ತುಗಳ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ? ಬಡ ಹಾಗೂ ಅವಿದ್ಯಾವಂತ ವರ್ಗದ ಮಕ್ಕಳು ಯಾವ ಜ್ಞಾನಶಿಸ್ತುಗಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆ? ಅವುಗಳ ಫಲಾಫಲ ಹಾಗೂ ಭವಿಷ್ಯದಲ್ಲಿ ಸುಂದರ ಬದುಕು ಯಾರದಾಗಿದೆ? ಸುಮಾರು ವರ್ಷಗಳಿಂದಲೂ ಶಿಕ್ಷಣ ಮಾಧ್ಯಮಗಳ ತರ್ಕ-ತಕರಾರು ನಡೆಯುತ್ತಲೇ ಇದೆ.

ಸರ್ಕಾರದ ಶಿಕ್ಷಣ ಮಾಧ್ಯಮದ ನೀತಿಯನುಸಾರ, ಶಾಲೆಯಲ್ಲಿ ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆಯಿದೆ. ಇಂಗ್ಲಿಷ್ ಭಾಷೆಯನ್ನು ಹೊರತು ಪಡಿಸಿದರೆ ಉಳಿದ ಜ್ಞಾನಶಿಸ್ತುಗಳನ್ನು ಶಿಕ್ಷಣ ನೀತಿಯಾನುಸಾರವಾಗಿ ಕನ್ನಡದಲ್ಲಿಯೇ ಕಲಿಯುತ್ತಾರೆ ಹಳ್ಳಿಯ ಮಕ್ಕಳು. ಇವರು ಇಂಗ್ಲೀಷನ್ನು ಕಂಠಪಾಠ ಮಾಡಿ ಉಪಾಧ್ಯಾಯರಿಗೆ ಒಪ್ಪಿಸಿ 'good' ಎನಿಸಿಕೊಳ್ಳುತ್ತಾರೆಯೇ ಹೊರತು ಇಂಗ್ಲಿಷ್ ವಿಷಯದ ಭಾವಪೂರ್ಣ ಅರ್ಥದ ಅರಿವು ಅವರಿಗಿರುವುದಿಲ್ಲ. ಇಂಥಹ ಮಕ್ಕಳು ಕಷ್ಟಪಟ್ಟು ಎಸ್. ಎಸ್. ಎಲ್. ಸಿ. ಹಂತ ಹತ್ತಿದರೂ ಇಂಗ್ಲಿಷ್ ಅವರಿಗೆ ಕಬ್ಬಿಣದ ಕಡಲೆಯಾಗಿ ಉಳಿಯುತ್ತದೆ.

ಇಂದು, ಬದುಕನ್ನು ರೂಪಿಸುವ ಶಿಕ್ಷಣದ ಅಗತ್ಯತೆಯಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಮೇಧಾವಿಗಳು ಕನ್ನಡ ಭಾಷೆಗೆ ಧಕ್ಕೆ ಬಾರದ ಹಾಗೆ ಯುವ ಜನತೆಗೆ ಬೇಕಾದ ಪೂರಕ ಶಿಕ್ಷಣ ಮಾಧ್ಯಮ ಹಾಗೂ ಮೌಲ್ಯಾಧಾರಿತವಾದ ಜ್ಞಾನಶಿಸ್ತುಗಳನ್ನು ಹೇಗಿರಬೇಕೆಂಬುದನ್ನು ಚಿಂತಿಸುವುದರ ಜೊತೆಗೆ ಕನ್ನಡ ಬೆಳವಣಿಗೆಯನ್ನೂ ಒಂದು ಸವಾಲಾಗಿ ಸ್ವಿಕರಿಸಿ ಓದುಗರ ಬದುಕಿಗೆ ಎಂತಹ ಭದ್ರಬುನಾದಿ ಹಾಕಬೇಕೆಂಬುದರತ್ತ ಯೋಚಿಸಬೇಕು. ಶಿಕ್ಷಣ, ಕಲಿತವರ ಬದುಕಿಗೆ ಬೆಳಕಾಗಬೇಕು. ಸರ್ಕಾರ ಕನ್ನಡ ಮಾಧ್ಯಮ ಶಿಕ್ಷಣವನ್ನು ನಂಬಿದವರ ಬದುಕು ಬರಡಾಗದಂತೆ ನೋಡಿಕೊಂಡರಷ್ಟೇ ಸಾಕು.

ಲೇಖಕರ ಕಿರುಪರಿಚಯ
ಡಾ|| ಬಸವರಾಜು ತೋಟಹಳ್ಳಿ.

ಇವರು ಮಂಡಿಸಿದ 'ಕನಕಪುರ ತಾಲ್ಲೂಕಿನ ಗ್ರಾಮದೇವತೆಗಳು - ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ತುಮಕೂರು ವಿಶ್ವವಿದ್ಯಾಲಯ, ಕನಕಪುರ ಮುನಿಸಿಪಾಲ್ ಕಾಲೇಜು ಮುಂತಾದ ಗ್ರಾಮಾಂತರ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸುರಾನಾ ಕಾಲೇಜು, ಬೆಂಗಳೂರು ಇಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.

ವೃತ್ತಿಯಲ್ಲಿ ಉತ್ತಮ ಹಿಡಿತ ಹೊಂದಿರುವ ಶ್ರೀಯುತರು 'ಬಲಿಪೀಠ' ಮತ್ತು 'ಕ್ರಾಂತಿಯ ಕಿಡಿ' ಎಂಬ ನಾಟಕಗಳನ್ನು, 'ಚಿಗುರಿದ ಗರಿಕೆ' ಎಂಬ ಕವನ ಸಂಕಲನವನ್ನು, 'ಕನಕಪುರ ತಾಲ್ಲೂಕಿನ ಶಾಸನಗಳು' ಎಂಬಿತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ವೈಚಾರಿಕ ಲೇಖನಗಳ ರಚನೆ, ಸಾಹಿತ್ಯ ವಿಮರ್ಶೆ ಮುಂತಾದವುಗಳನ್ನು ಹವ್ಯಾಸವಾಗಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

4 ಕಾಮೆಂಟ್‌ಗಳು:

  1. ಕನ್ನಡ ಭಾಷೆಯ ಬಗೆಗಿನ ಡಾ|| ಬಸವರಾಜು ತೋಟಹಳ್ಳಿ ಇವರ ಚಿಂತನೆಗಳು ನಿಜಕ್ಕೂ ಅರ್ಥ ಗರ್ಭಿತ ಹಾಗೂ ಶ್ಲಾಘನೀಯವಾಗಿವೆ .ಸರಕಾರ ಇವುಗಳಿಗೆ ಸ್ಪೂರಕವಾಗಿ ಸ್ಪಂದಿಸಿ ಕ್ರಮಕೈಗೊಂಡಲ್ಲಿ ಇವರ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ .

    ಪ್ರತ್ಯುತ್ತರಅಳಿಸಿ
  2. ಅರ್ಥಗರ್ಭಿತ ಲೇಖನ.. ಕಹಳೆ ನಿಜಕ್ಕೂ ಉತ್ತಮ ಲೇಖನ ಹಾಗು ಲೇಖಕರನ್ನು ಪಡೆಯುತ್ತಿದೆ. ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  3. ಪ್ರಚಲಿತ ವಿದ್ಯಾಮಾನದ ಅತ್ಯಂತ ಸಮಂಜಸ ತರ್ಕ ಮಂಡಿಸಿದ್ದೀರಿ. ನಿಮ್ಮ ಆಲೋಚನಾ ಹರಿವು ಇಂದು ನಮ್ಮೆದುರಿಗಿರುವ ಕನ್ನಡಾಭಿಮಾನ ಹಾಗೂ ಜಾಗತೀಕರಣ ನಡುವಿನ ಸಂದಿಗ್ಧ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ನೀಡಿದೆ.

    ಪ್ರತ್ಯುತ್ತರಅಳಿಸಿ
  4. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳು ಮತ್ತು ಕನ್ನಡಿಗರ ಡೋಲಾಯಮಾನ ಪರಿಸ್ಥಿತಿಯನ್ನ ಬಹು ಚೆನ್ನಾಗಿ ವಿವರಿಸಿದ್ದೀರಿ. ಇನ್ನಾದರೂ ಕನ್ನಡಕ್ಕೊಂದು ಉತ್ತಮ ನೆಲೆ ಸಿಗುವಂತಾಗಲಿ.

    ಪ್ರತ್ಯುತ್ತರಅಳಿಸಿ