ಗುರುವಾರ, ನವೆಂಬರ್ 10, 2011

ನಮ್ಮ ಭಾಷೆಯನ್ನು ಶುದ್ಧವಾಗಿರಿಸಿಕೊಳ್ಳಲು ಪ್ರಯತ್ನಿಸೋಣ....

ಛಾಯಾಚಿತ್ರ ಕೃಪೆ : ಎಸ್. ಜಿ. ರೆಡ್ಡಿ
ಇಲ್ಲಿ 'ನಮ್ಮ ಭಾಷೆ' ಎಂದರೆ ನಾನು ಹೇಳಲು ಇಚ್ಛಿಸುತ್ತಿರುವುದು, ನಾವು ಆಡುವ ಹಾಗೂ ಬರೆಯುವ ಕನ್ನಡ. ನಮ್ಮ ತಾಯಿನುಡಿ ಕನ್ನಡ ಒಂದು ಸುಂದರ ಹಾಗೂ ಸರಳ ಭಾಷೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ, ಅದನ್ನು ಬಳಸುತ್ತಿರುವ ನಮ್ಮ ತಪ್ಪುಗಳಿಂದ ಅದು ವಿರೂಪಗೊಳ್ಳುವುದನ್ನು ಆಗಾಗ ನಾವು ಗಮನಿಸುತ್ತಿರುತ್ತೇವೆ.

ವಿವರಗಳಿಗೆ ಹೋಗುವ ಮೊದಲು "ಕಹಳೆ" ತಂಡಕ್ಕೆ ನನ್ನ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಅಂತರ್ಜಾಲದಲ್ಲಿ ಕನ್ನಡದ ಕಂಪನ್ನು, ಅದೂ ರಾಜ್ಯೋತ್ಸವದ ತಿಂಗಳಿನುದ್ದಕ್ಕೂ ಹರಡಲು ಇವರು ಮಾಡುತ್ತಿರುವ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ. ಅವರ ಪ್ರಯತ್ನಕ್ಕೆ ಸೂಕ್ತ ಬೆಂಬಲ ಅಗತ್ಯ. ಅದಕ್ಕಾಗಿ ನಿಮ್ಮೆಲ್ಲರಿಗೂ ವಂದನೆಗಳು.

ಕನ್ನಡವನ್ನು ಆಡುತ್ತಿರುವ ನಮ್ಮ ಉಚ್ಛಾರಣೆಯಲ್ಲಿ ನಾನು ಗಮನಿಸಿರುವ ತಪ್ಪುಗಳಲ್ಲಿ ಸಾಮಾನ್ಯವಾದವು - 'ಅ/ಆ' ಮತ್ತು 'ಹ' ಅಕ್ಷರಗಳ ಬದಲಿ ಬಳಕೆ. ಉದಾಹರಣೆಗೆ, 'ಅದ್ದೂರಿ' ಯನ್ನು 'ಹದ್ದೂರಿ' ಎಂದೂ, 'ಹತ್ತಿ' ಯನ್ನು 'ಅತ್ತಿ' ಎಂದೂ ಉಚ್ಛರಿಸುವುದು. 'ಆದರ' ವನ್ನು 'ಹಾದರ' ಎಂದು ಉಚ್ಛರಿಸಿದಾಗ ಉಂಟಾಗುವ ಭಯಂಕರ ಅರ್ಥವ್ಯತ್ಯಾಸವನ್ನು ಗಮನಿಸಿದರೆ, ಇದರ ಪ್ರಾಮುಖ್ಯತೆ ಅರಿವಾಗುತ್ತದೆ. ಇನ್ನೊಂದು ಸಾಮಾನ್ಯವಾಗಿ ತಪ್ಪಾಗುವ ಪದ 'ಉತ್ಸವ'. ಇದನ್ನು ಅನೇಕರು 'ಉಸ್ತವ' ಎಂದು ಹೇಳುವುದನ್ನು ಗಮನಿಸಿದ್ದೇನೆ. ಹಾಗೇ, ಸಾಮಾನ್ಯವಾಗಿ ತಪ್ಪಾಗುವ ಇನ್ನೊಂದು ಪದ 'ಧಾಳಿ'. ಇತ್ತೀಚಿನ ದೂರದರ್ಶನದ ಒಂದು ಮಕ್ಕಳ ಹಾಡುಗಾರಿಕೆಯ ಸ್ಪರ್ಧೆಯಲ್ಲಿ ಒಬ್ಬ ಹುಡುಗಿ ಹಾಡುವಾಗ 'ಧಾಳಿ' ಎಂದು ಸರಿಯಾಗಿ ಹಾಡಿದರೂ, ಅಲ್ಲಿದ್ದ ಪ್ರಖ್ಯಾತ ಸಾಹಿತಿಯೊಬ್ಬರು, ಅದು ತಪ್ಪು, 'ದಾಳಿ' ಎಂದು ತಿದ್ದಿದರು. ನನಗೂ ಆಗ ಅನುಮಾನವಾಗಿ ಶಬ್ದಕೋಶವನ್ನು ನೋಡಿ 'ಧಾಳಿ'ಯೇ ಸರಿ ಎಂದು ಖಚಿತಪಡಿಸಿಕೊಂಡೆ.

ನಾನು ಕಂಡ ಕನ್ನಡದ ಅತ್ಯುತ್ತಮ ಉಚ್ಛಾರಣೆಗಳಲ್ಲಿ ಒಂದು, ನಮ್ಮ ನಾಡಿನ ಮೇರು ನಟ ದಿವಂಗತ ಡಾ|| ರಾಜ್ ಕುಮಾರ್ ರವರದ್ದು. ಕನ್ನಡ ಪಂಡಿತರ, ಸಾಹಿತಿಗಳ ಅಥವಾ ಉನ್ನತ ವ್ಯಾಸಂಗ ಮಾಡಿದವರ ಉದಾಹರಣೆಗಳು ಬೇಕಾದಷ್ಟಿರಬಹುದು. ಆದರೆ, ಡಾ|| ರಾಜ್ ಕುಮಾರ್ ರವರ ವಿಶೇಷತೆಯೆಂದರೆ, ಹೆಚ್ಚೇನೂ ವಿದ್ಯಾಭ್ಯಾಸವಿಲ್ಲದ ಅವರ ಭಾಷೆಯ ಮೇಲಿನ ಹಿಡಿತ. ಅದರ ಸಾಧನೆಯ ಹಿಂದಿನ ಅವರ ಆಸ್ಥೆ, ಶ್ರದ್ಧೆ ಮತ್ತು ಪರಿಶ್ರಮಗಳು ಗಮನಾರ್ಹ ಮತ್ತು ಅನುಕರಣೀಯ.

ಕನ್ನಡ ಮಾತನಾಡುವಾಗ ಉಂಟಾಗುವಂತೆಯೇ ಬರವಣಿಗೆಯಲ್ಲಿಯೂ ಅನೇಕ ತಪ್ಪುಗಳಾಗುತ್ತಿರುತ್ತವೆ. ಇದಕ್ಕೆ ಕೆಲವು ಉದಾಹರಣೆಗಳು - 'ನಿರ್ದೇಶಕರು' ಪದವನ್ನು 'ನಿರ್ಧೇಶಕರು' ಎಂದೂ, 'ವೈದ್ಯರು' ಪದವನ್ನು 'ವೈಧ್ಯರು' ಎಂದೂ ತಪ್ಪಾಗಿ ಬರೆಯುವುದು. 'ವೈಧ್ಯ' ಎಂದಾಗ, ಅದು ವಧ (ಕೊಲ್ಲು) ಅಥವಾ ವೈಧವ್ಯ (ಪತಿ ಇಲ್ಲದಿರುವಿಕೆ) ಎಂಬ ಪದಗಳಿಗೆ ಸಮಾನವಾಗುವ ಸಾಧ್ಯತೆಯಿದೆ. ಹಾಗೆಯೇ, 'ವಿದ್ಯೆ/ವಿದ್ಯಾಭ್ಯಾಸ' ಪದಗಳನ್ನು 'ವಿಧ್ಯೆ/ವಿಧ್ಯಾಭ್ಯಾಸ' ಎಂದು ತಪ್ಪಾಗಿ ಬರೆಯುವುದನ್ನು ಸಾಮಾನ್ಯವಾಗಿ ಗಮನಿಸುತ್ತೇವೆ.

ಈ ಉದಾಹರಣೆಗಳು ಕೇವಲ ಕೆಲವು ಮಾತ್ರ. ಹೀಗೆಯೇ ಬರೆಯುವಾಗ, ಓದುವಾಗ, ಮಾತನಾಡುವಾಗ ಹಲವಾರು ತಪ್ಪುಗಳು ಸರ್ವೇಸಾಮಾನ್ಯ. ಇದನ್ನು ತಪ್ಪಿಸಬೇಕಾದ್ದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ. ಪದಗಳ ಬಳಕೆಯ ತಪ್ಪು-ಒಪ್ಪುಗಳನ್ನು ದೃಢೀಕರಿಸಿಕೊಳ್ಳಲು ಹಾಗೂ ಸರಿಪಡಿಸಿಕೊಳ್ಳಲು ಕನ್ನಡ ಶಬ್ದಕೋಶಗಳ ಬಳಕೆ ಸರಿಯಾದ ದಾರಿ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರು 'ಕನ್ನಡ ರತ್ನ ಕೋಶ' ಎಂಬ ಒಂದು ಅಂಗೈನಷ್ಟು ಅಗಲದ ಶಬ್ದಕೋಶವನ್ನು ಮಾಡಿದ್ದಾರೆ. 360 ಪುಟಗಳ ಈ ನಿಘಂಟನ್ನು 1995 ರಲ್ಲಿ ನಾನು ಕೊಂಡಾಗ ಅದರ ಬೆಲೆ ಕೇವಲ 5 ರೂಪಾಯಿ ಮಾತ್ರ ಇತ್ತು. ಬಹುಶಃ ಉಚಿತವಾಗಿ ಕೊಟ್ಟರೆ ಯಾವುದೇ ವಸ್ತುವಿಗೆ ಪ್ರಾಮುಖ್ಯತೆ ಇರುವುದಿಲ್ಲ ಎಂಬ ತತ್ವದ ಮೇಲೆ ಅಷ್ಟು ಬೆಲೆ ಇರಿಸಿರಬಹುದು. ಈ ರತ್ನಕೋಶದಲ್ಲಿ ಕನ್ನಡ ಪದಗಳ ಅರ್ಥಗಳ ಜೊತೆಯಲ್ಲಿ, ಕೊನೆಯ ಕೆಲವು ಪುಟಗಳಲ್ಲಿ ತುಂಬಾ ಅಪರೂಪವಾದ ಅನೇಕ ಮಾಹಿತಿಗಳನ್ನೂ ಸಹ ಮುದ್ರಿಸಲಾಗಿದೆ. ಪ್ರತಿಯೊಬ್ಬ ಕನ್ನಡಿಗನ ಬಳಿಯೂ ಇರಬೇಕಾದ ಪುಸ್ತಕವಿದು ಎಂದು ನನ್ನ ಅಭಿಪ್ರಾಯ.

ನಮ್ಮ ತಾಯಿ ಕನ್ನಡತಿ ಪರಿಶುದ್ಧಳು. ಆ ಪರಿಶುದ್ಧತೆಯನ್ನು ಉಳಿಸಲು, ಬೆಳೆಸಲು, ಹರಡಲು ನಾವೆಲ್ಲಾ ಪ್ರಯತ್ನಿಸೋಣ..

ಲೇಖಕರ ಕಿರುಪರಿಚಯ
ಡಾ|| ಎ. ಎಂ. ಶಿವಕುಮಾರ್.

ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನವರಾದ ಇವರು, ಪ್ರಸ್ತುತ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿದ್ದಾರೆ.

ಹಳೆಯ ಕನ್ನಡ ಚಲನಚಿತ್ರ ಮತ್ತು ಹಾಡುಗಳ ಸಿ.ಡಿ. ಸಂಗ್ರಹಣೆ, ಸಂಗೀತ ಕೇಳುವುದು, ಕನ್ನಡ ಕಾದಂಬರಿಗಳನ್ನು ಓದುವುದು ಇವರ ಹವ್ಯಾಸ. ಇದಲ್ಲದೆ, ಕನ್ನಡ ನಾಡು-ನುಡಿಯ ಬಗ್ಗೆ ವಿಶೇಷವಾದ ಗೌರವ ಮತ್ತು ಕಾಳಜಿ ಹೊಂದಿರುವ ಇವರ ಕನ್ನಡ ಭಾಷಾಜ್ಞಾನ ಶ್ರೀಮಂತವಾದುದು.

Blog  |  Facebook  |  Twitter

3 ಕಾಮೆಂಟ್‌ಗಳು:

  1. ಡಾ|| ಎ. ಎಂ. ಶಿವಕುಮಾರ್ ರವರು ಭಾಷೆಯ ಶುದ್ದತೆ ಬಗ್ಗೆ ವಿವರಿಸುತ್ತಾ ನಾವು ಎಲ್ಲಿ ಎಲ್ಲಿ ಕನ್ನಡ ಬಾಷೆಯನ್ನು ಬರೆಯುವಾಗ ತಪ್ಪುಗಳನ್ನು ಎಸಗುತ್ತೇವೆ ಎಂದು ಉದಾಹರಣೆಗಳೊಂದಿಗೆ ತೋರಿಸಿಕೊಟ್ಟಿದ್ದಾರೆ . ನಾವು ಸಹ ಕೆಲವು ವೇಳೆಗಳಲ್ಲಿ , ತಿಳಿದೋ ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿರುತ್ತೇವೆ .ಅವರ ಈ ಲೇಖನವು ನಮಗೆಲ್ಲರಿಗೂ ಎಚ್ಚರಿಕೆ ಗಂಟೆಯಂತೆ ಅಂತಹತಪ್ಪುಗಳನ್ನು ಇನ್ನು ಮುಂದೆಮಾಡದಂತೆ ನಮ್ಮ ಮನಸ್ಸಿನಲ್ಲಿ ಸದಾ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು

    ಪ್ರತ್ಯುತ್ತರಅಳಿಸಿ
  2. ತಪ್ಪೆಸಗುವುದು ಮಾನವ ಸಹಜ; ಆದರೆ, ಭಾಷಾ ಬಳಕೆಯಲ್ಲಿ ನಾವು ಮಾಡುವ ಅತ್ಯಂತ ಸರಳ ತಪ್ಪುಗಳು ಅದೆಂತಹ ಅರ್ಥಾಭಾಸವನ್ನು ಸೃಷ್ಟಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಸರ್.

    ಪ್ರತ್ಯುತ್ತರಅಳಿಸಿ
  3. ನಿಜಕ್ಕೂ ಕಣ್ಣು ತೆರೆಸುವ ಲೇಖನ.
    ಬಹುಷಃ ಹೀಗಾಗಿರಬಹುದು. ಮಾತನಾಡುವಾಗ ಬಹಳಷ್ಟು ಜನ ಪದಗಳನ್ನು ನುಂಗಿ ಹಾಕುತ್ತಾರೆ ಹಾಗು ಉಚ್ಛಾರಣೆ ತಪ್ಪಾಗಿ ಮಾಡುತ್ತಾರ. ಅದನ್ನು ಕೇಳಿಸಿಕೊಂಡ ಕಿರಿಯರು ಅದೇ ಸರಿಯಾದ ಪದವೆಂದು ಅದನ್ನೇ ಬಳಸುತ್ತಿರುತ್ತಾರೆ.
    ಕನ್ನಡ ರತ್ನ ಕೋಶ ಈ ನಿಟ್ಟಿನಲ್ಲಿ ಬಹಳ ಉಪಯೋಗಕಾರಿ.
    ಹೋದಿ ಬಅಳ ಕುಶಿ ಹಾಯಿತು. :o)

    ಪ್ರತ್ಯುತ್ತರಅಳಿಸಿ