ಶನಿವಾರ, ನವೆಂಬರ್ 5, 2011

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಛಾಯಾಚಿತ್ರ ಕೃಪೆ : ದಿ ಹಿಂದು ಪತ್ರಿಕೆ

ನಮ್ಮ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿ ೧೨ ವರ್ಷ ಕಳೆದಿವೆ. ನಮ್ಮಲ್ಲಿ ದ್ವಿಚಕ್ರ ವಾಹನ ಅಥವಾ ಕಾರುಗಳಿಲ್ಲದ ಕಾರಣ ನಮ್ಮ ಹೆಚ್ಚಿನ ಓಡಾಟಗಳಿಗೆ ಬೆಂ. ಮ. ಸಾ. ಸಂ. ಯೇ ಆಸರೆ. ಕಾಲೇಜಿಗೆ ಹೋಗುವಾಗ ಮತ್ತೀಗ ಉದ್ಯೋಗದ ಸ್ಥಳ ತಲುಪಲು ಬೆಂ. ಮ. ಸಾ. ಸಂ. ಯನ್ನೇ ಅವಲಂಬಿಸಿದ್ದೇನೆ. ಈ ೧೨ ವರ್ಷಗಳಲ್ಲಿ ನಾ ಕಂಡಿರುವಂತೆ ಬೆಂ. ಮ. ಸಾ. ಸಂ. ಯಲ್ಲಿ ಆದ ಬದಲಾವಣೆಗಳೆಂದರೆ ಕೇವಲ ವಾಹನಗಳ ಹೆಚ್ಚಳ, ಹೊಸ ಮಾರ್ಗಗಳು ಹಾಗೂ ವೋಲ್ವೊದಂತ ಹವಾನಿಯಂತ್ರಿತ ಗಾಡಿಗಳ ಸೇರ್ಪಡೆ. ಮುಖ್ಯವಾಗಿ ಬೇಕಾಗಿರುವ ಸಮಯ ಪಾಲನೆ ಹಾಗೂ ಸಿಬ್ಬಂದಿಗಳಲ್ಲಿರಬೇಕಾದ ಸೌಜನ್ಯತೆ/ಸೇವಾ ಮನೋಭಾವ - ಇವೆರಡರಲ್ಲೂ ಏನೂ ಬದಲಾವಣೆ ಆದಂತಿಲ್ಲ.

ಕೆಲವು ಮಾರ್ಗಗಳಲ್ಲಿ ವಿಪರೀತ ವಾಹನ ದಟ್ಟಣೆ ಇರುತ್ತದೆ. ಅದರಿಂದಾಗಿ ಸಮಯದಲ್ಲಿ ಏರುಪೇರಾಗುವುದು ನಿಜ. ಆದರೆ ಇದನ್ನೇ ನೆಪಮಾಡಿಕೊಂಡು ಎಷ್ಟೋ ಚಾಲಕ/ನಿರ್ವಾಹಕರು ತಮ್ಮ ಮನಬಂದಂತೆ ಕೆಲಸಮಾಡುವುದುಂಟು. ೧೦-೧೫ ನಿಮಿಷ ತಡವಾದರೆ ಏನೋ ತೊಂದರೆ ಅನ್ನಬಹುದು; ಆದರೆ ಘಂಟೆಗಟ್ಟಲೆ ತಡವಾಗಿ ಬರುವುದು ಅಥವಾ ಬಾರದೇ ಇರುವುದನ್ನು ಏನೆನ್ನೋಣ? ನಿಲ್ದಾಣಕ್ಕೆ ಬಂದು ಹೋಗುವಂತಹ ಗಾಡಿಗಳ ಮೇಲೆ ನಿಗಾ ಇಡಲು ಸಿಬ್ಬಂದಿಗಳಿದ್ದಾರೆ. ಆದರೆ ಲಂಚದ ಹಾವಳಿ ಇವರನ್ನೂ ಬಿಟ್ಟಿಲ್ಲ. ಬಸ್ಸು ಸರಿಯಾಗಿ ವೇಳೆಗೆ ಬರದ್ದಿದ್ದರೆ (ಬಂದರೆ ಕೂಡ ಏನಾದರೂ ನೆಪ ಹೇಳಿ) ನಿಲ್ದಾಣದಲ್ಲಿರುವ ಸಂಚಾರ ನಿಯಂತ್ರಕರು ನಿರ್ವಾಹಕರಿಂದ ಹಣ ಕೀಳುತ್ತಾರೆ. ನಾ ಕೇಳಿರುವಂತೆ ನಿರ್ವಾಹಕರು ಪ್ರಿತಿನಿತ್ಯ ಸಂಚಾರ ನಿಯಂತ್ರಕರಿಗೆ, ಸಂಬಂಧಿಸಿದ ಡಿಪೋ ಅಧಿಕಾರಿಗಳಿಗೆ ಕಾಣಿಕೆ ನೀಡುತ್ತಿರಬೇಕು. ಇಲ್ಲವಾದರೆ ಏನಾದರೂ ನೆಪ ಹೇಳಿ ಮೆಮೋ ನೀಡುತ್ತಾರೆಂದು. ಎಷ್ಟೂ ಬಾರಿ ನಿಲ್ದಾಣದಲ್ಲಿ ಕಾಯುತ್ತಿರಬೇಕಾದರೆ ನಾ ಇದನ್ನು ಕಣ್ಣಾರೆ ಕಂಡಿರುವೆ. ಈ ದುಡ್ಡನ್ನು ನಿರ್ವಾಹಕ ತನ್ನ ಜೇಬಿನಿಂದ ಕೊಡುತ್ತಾನೆಯೇ? ಇಲ್ಲ. ಇದು ಕೆಲವು ಪ್ರಯಾಣಿಕರಿಗೆ ಚೀಟಿ ನೀಡದೆ ಗಳಿಸಿದ ಹಣ. ಇದರ ಪರಿಣಾಮ - ಒಂದು ಮಾರ್ಗದಲ್ಲಿ ಹಣ ಸಂಗ್ರಹಣೆ ಸಮರ್ಪಕವಾಗಿಲ್ಲವೆಂದು ಮಾರ್ಗ ಬದಲಾವಣೆ ಅಥವಾ ಗಾಡಿಗಳ ಸಂಖ್ಯೆ ಕಡಿತಗೊಳಿಸುವುದು. ಇತ್ತೀಚಿನ ಉದಾಹರಣೆ - ಮಾರ್ಗ ಸಂಖ್ಯೆ BC-6A (ನಮ್ಮ ಮನೆಯ ಬಳಿ ಸಾಗುತ್ತಿತ್ತು. ಈಗ ಬರುತ್ತಿಲ್ಲ!!) ಇದರಿಂದ ಕೊನೆಗೆ ಸಂಕಷ್ಟಕ್ಕೀಡಾಗುವವನು ಪ್ರಯಾಣಿಕ.

ತಿಂಗಳ ಹಿಂದೆ ನಡೆದ ಘಟನೆ. ಮಾರ್ಗ ಸಂಖ್ಯೆ 375A ಕೆಂಗೇರಿ ನಿಲ್ದಾಣಕ್ಕೆ ಬಂದು Electronic City ಗೆ (ನನ್ನ ಕಚೇರಿ ಇಲ್ಲಿರುವುದು) ಹೋಗುವಂತದ್ದು. ಒಂದು ಸೋಮವಾರ ತಾಸಿಗೂ ಹೆಚ್ಚು ಕಾಲ ನಾನು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಲಿದ್ದೆ. ಆದರೆ ಬಸ್ಸೇ ಬರಲ್ಲಿಲ್ಲ. ಬೇರೆ ಮಾರ್ಗದ ಗಾಡಿಯಲ್ಲಿ ಹೋಗಬೇಕಾಯಿತು. ಇದೇ ಪ್ರಸಂಗ ಮರು ದಿನವೂ ಎದುರಾಯಿತು. ಸಂಚಾರ ನಿಯಂತ್ರಕರ ಬಳಿ ಕೇಳಿದರೆ ಸಿದ್ಧ ಉತ್ತರ - traffic jam. ಬಸ್ಸು ಹೊರಡುವುದು ಶಿರ್ಕೆಯಿಂದ. ಶಿರ್ಕೆ-ಕೆಂಗೇರಿ ನಡುವಿನ ದೂರ ೪ k.m ಹಾಗೂ ಒಂದು ಸಿಗ್ನಲ್!! ಮೂರನೇ ದಿನವು ಈ ಸ್ಥಿತಿ ಎದುರಾದಾಗ ನಿಲ್ದಾಣದಲ್ಲಿದ್ದ ಗಸ್ತು ವಾಹನ "ಸಾರಥಿ"ಯ ಸಿಬ್ಬಂದಿಯಲ್ಲಿ ವಿಚಾರಿಸಿದೆ. ದೊರೆತ ಉತ್ತರ - "ನೀವು ಇಲ್ಲಿ ನಿಲ್ಲಬೇಡಿ ಮುಂದೆ ಸಿಗ್ನಲ್ ಬಳಿ ನಿಲ್ಲಿ. ಕೆಲವೊಂದು ಸಲ ಬಸ್ಸುನಿಲ್ದಾಣಕ್ಕೆ ಬರದೆ ಸಿಗ್ನಲ್ ನಲ್ಲಿಯೇ ತಿರುಗಿ ಹೋಗುತ್ತದೆ!!!" ಹಾಗಾದರೆ ನಿಲ್ದಾಣದಲ್ಲಿ ನಿಂತ ನಮ್ಮ ಗತಿ? ಅಷ್ಟೊಂದು ಹಣ ವ್ಯಯಿಸಿ ನಿಲ್ದಾಣ ಏತಕ್ಕಾಗಿ ಕಟ್ಟಿದರೋ? ಒಂದು ಮಾರ್ಗ ಎಂದ ಮೇಲೆ ಅದನ್ನು ಪಾಲಿಸುವುದು ಬೇಡವೇ? ಇದನ್ನು ಪ್ರಶ್ನಿಸಿದರೆ ದೊರೆತದ್ದು ಅಹಂಕಾರ, ಅಸಡ್ಡೆಯ ಮಾತು!! ಈ ರೀತಿ ಮೇಲ್ವಿಚಾರಣೆ ಸಿಬ್ಬಂದಿಯೇ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಸೇವೆ ಸುಧಾರಿಸುವುದೆಂತು?

ಇನ್ನು ಚಾಲಕ/ನಿರ್ವಾಹಕರು ಪ್ರಯಾಣಿಕರ ಸಂಗಡ ನಡೆದುಕೊಳ್ಳುವ ರೀತಿ-ಆ ದೇವರಿಗೇ ಪ್ರೀತಿ!! ಬಸ್ಸು ಹತ್ತಲು/ಇಳಿಯಲು ಪುರುಸೊತ್ತೇ ನೀಡುವುದಿಲ್ಲ. 'ಬೇಗ ಬನ್ನಿ' ಎಂದು ಕಿರುಚ್ಚುತ್ತಲೇ ಇರುತ್ತಾರೆ. ಅಶಕ್ತರು, ವೃದ್ಧರು, ಮಹಿಳೆಯರು ಪ್ರಯಾಣಿಸುವುದೇ ಕಷ್ಟವಾಗಿದೆ. ನಿಲ್ದಾಣದಲ್ಲಿ ಸರಿಯಾಗಿ ಬಸ್ಸು ನಿಲ್ಲಿಸದಿರುವುದು, ವಾಹನ ದಟ್ಟಣೆ ಇರುವ ರಸ್ತೆಯ ಮಧ್ಯದಲ್ಲೇ ಇಳಿಯಲು ಸೂಚಿಸುವುದು, ಶಾಲಾ ಮಕ್ಕಳ ಗುಂಪನ್ನು ನೋಡಿದರೆ ದೂರದಲ್ಲೆಲ್ಲೋ ನಿಲ್ಲಿಸುವುದು, Racing ಚಾಲಕರಂತೆ ಪೈಪೋಟಿಗಿಳಿವುದು - ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಈ ಬಗ್ಗೆ ನಾನು ಬೆಂ. ಮ. ಸಾ. ಸಂ. ಯ ಕರೆ ಕೇಂದ್ರಕ್ಕೆ (ಕಾಲ್ ಸೆಂಟರ್) ಎಷ್ಟೋ ಬಾರಿ ದೂರು ನೀಡಿದ್ದೇನೆ. ಅವರ ಅಂತರ್ಜಾಲ ತಾಣದಲ್ಲೂ ದೂರು ದಾಖಲಿಸಿದ್ದೇನೆ. ಆದರೆ ನಾನು ನೀಡಿದ ಯಾವೊಂದು ದೂರಿಗೂ ಪ್ರತ್ಯುತ್ತರ ಬಂದಿಲ್ಲ, ದೂರು ನೀಡುವುದನ್ನು ನಾನು ನಿಲ್ಲಿಸಿಲ್ಲ!!!

ಇವೆಲ್ಲ ಅವಸ್ಥೆಗಳಿಗೆ ಮುಖ್ಯ ಕಾರಣ - ಏನೂ ಪ್ರಶ್ನಿಸದೆ ಮೂಕರಾಗಿ ಇದನ್ನೆಲ್ಲಾ ಸಹಿಸುತ್ತಿರುವ ನಾವುಗಳು. ಬೆಂ. ಮ. ಸಾ. ಸಂ. ಸೇವೆಯನ್ನು ಉಪಯೋಗಿಸುತ್ತಿರುವ ಪ್ರತಿಯೊಬ್ಬ ಗ್ರಾಹಕನೂ ಪ್ರಶ್ನಿಸಲು ಶುರುವಿಟ್ಟರೆ ಖಂಡಿತವಾಗಿಯೂ ಒಳ್ಳೆ ಬದಲಾವಣೆಗಳನ್ನು ಕಾಣಬಹುದು. ಇದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ - ನೀವು ಪ್ರಯಾಣಿಸುವ ಬಸ್ಸಿನಲ್ಲಿ ನಿಮಗೆ ಸರಿಯಾಗಿ ಸೇವೆ ದೊರೆಯಲಿಲ್ಲವೆಂದರೆ (ಅ) ಬಸ್ಸಿನ ಮಾರ್ಗ ಸಂಖ್ಯೆ (ಆ) ಬಸ್ಸಿನ ನೋಂದಣಿ ಸಂಖ್ಯೆ ಹಾಗೂ (ಇ) ಸಮಯ - ಈ ಮೂರು ವಿವರಗಳೊಡನೆ ಬೆಂ. ಮ. ಸಾ. ಸಂ. ಯ ಕರೆ ಕೇಂದ್ರಕ್ಕೆ ದೂರು ನೀಡಿ.

ಕರೆ ಕೇಂದ್ರದ ದೂರವಾಣಿ ಸಂಖ್ಯೆ - 1800 425 1663.

ಕನ್ನಡದಲ್ಲಿ ದೂರು ನೀಡಲು ಬೆಂ. ಮ. ಸಾ. ಸಂ. ಯ ಅಂತರ್ಜಾಲ ಪುಟ - http://www.bmtcinfo.com/sitekan/BSComplaints.jsp

ಇದು ನಮ್ಮ ನಿಮ್ಮೆಲರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ. ಸುಧಾರಣೆಗಾಗಿ ಕಾಯುತ್ತ ಕೂರಬೇಡಿ, ಸುಧಾರಣೆ ತರಲು ಕೈ ಜೋಡಿಸಿ ಪ್ರಯತ್ನಿಸಿ.

ಲೇಖಕರ ಕಿರುಪರಿಚಯ
ಶ್ರೀ ಸುಧೀರ್ ನಿಂಜೂರ್.

ಹೆಸರು - ಸುಧೀರ್ ನಿಂಜೂರ್. ಹುಟ್ಟಿ ಬೆಳದದ್ದು ಕರಾವಳಿ ಜಿಲ್ಲೆ ಉಡುಪಿಯಲ್ಲಿ. ಕಾಲೇಜು ಶಿಕ್ಷಣ, ಉದ್ಯೋಗ ಅರಸಿ ಬಂದು ನೆಲೆಸಿದ್ದು "ನಮ್ಮ ಬೆಂಗಳೂರು"ನಲ್ಲಿ. ವೃತ್ತಿಯಲ್ಲಿ Software Engineer. ಉದ್ಯೋಗ ನಿಮಿತ್ತ ದೇಶ-ವಿದೇಶ ದರ್ಶನ. ಬಾಲ್ಯದಿಂದ ಬೆಳೆದು ಬಂದ ಹವ್ಯಾಸ - ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹ. ಕಾಲೇಜು ಮೆಟ್ಟಿಲು ಹತ್ತಿದ ನಂತರ ಕಥೆ-ಕಾದಂಬರಿ ಓದುವ ಆಸಕ್ತಿ ಬೆಳೆಸಿಕೊಂಡದ್ದು. ಸಂಗೀತ ಆಲಿಸುವುದು, ಪ್ರವಾಸ ಹೊರಡುವುದು, ಯಕ್ಷಗಾನ ವೀಕ್ಷಿಸುವುದು- ಕಾಲ ಕಳೆಯುವ ಇನ್ನಿತರೆ ಸಾಧನಗಳು!! ಓದಿನ ಜೊತೆಗೆ ಏನಾದರೂ ಬರೆಯಬೇಕೆಂಬ ಹಂಬಲದೊಂದಿಗೆ ಇತ್ತೀಚಿಗೆ BLOG ಲೋಕಕ್ಕೆ ಸೇರಿರುವೆ. ಅಂತರ್ಜಾಲದಲ್ಲಿ ಕನ್ನಡವನ್ನು ಪಸರಿಸಲು ಹೊರಟ "ಕಹಳೆ" ತಂಡಕ್ಕೆ ಶುಭಾಶಯಗಳು.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಬಹಳ ಚೆನ್ನಾಗಿ ಪರಿಸ್ಥಿತಿಯನ್ನು ವಿವರಿಸಿದ್ದೀರಿ.. ಆಫೀಸ್ ಕ್ಯಾಬ್ ಗಳಲ್ಲಿ ಓಡಾಡುವ ಬಿಪಿಓ ಸಾಫ್ಟ್ವೇರ್ ಉದ್ಯೋಗಿಗಳಿಗೆ ಇದರ ಅನುಭವವಿರುವುದಿಲ್ಲ.. ಕೇವಲ ದೂರು ಹೇಳುವ ಜನರಿರುವ ಈ ಕಾಲದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿ ಜನರನ್ನು ಪ್ರೇರೇಪಿಸುವ ಕೆಲಸವನ್ನೂ ಮಾಡುವ ಮೂಲಕ ನಿಮ್ಮ ಲೇಖನದ ಕಳೆ ಹೆಚ್ಚಿಸಿದ್ದೀರಿ.. ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  2. ಸಮಾಜದ ನ್ಯೂನತೆಗಳನ್ನು ಹತ್ತಿರದಿಂದ ಗಮನಿಸಿ, ಜನಸಾಮಾನ್ಯರ ಒಳಿತಿಗಾಗಿ ಅದರ ನಿವಾರಣೆಗೆ ಮಾರ್ಗೋಪಾಯಗಳನ್ನು ಸೂಚಿಸಿರುವ ನಿಮ್ಮ 'ಸಾಮಾಜಿಕ ಕಾಳಜಿ' ಅನುಕರಣೀಯ.

    ಪ್ರತ್ಯುತ್ತರಅಳಿಸಿ