ಶುಕ್ರವಾರ, ನವೆಂಬರ್ 4, 2011

ಸರಸ್ವತಿ ಪೂಜೆ

ದೇವಿ ಶಾರದೆ,
ನಿನ್ನ ಚರಣಕೆ ಶಿರವ ಬಾಗುತ ನಮಿಪೆವು,
ಕಾವುದೆಮ್ಮನು ಕರುಣೆಯಿಂದಲಿ,
ವರದ ವೀಣಾಪಾಣಿಯೇ, ವರದ ವೀಣಾಪಾಣಿಯೇ

ಇದು  ನಾವು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವಾಗ ನಿತ್ಯದ ಪ್ರಾರ್ಥನೆಯಾಗಿತ್ತು. ಬಾಲ್ಯದ ದಿನಗಳಲ್ಲಿ, ನಾವು ಪ್ರತಿದಿನವೂ ಓದುವುದಕ್ಕೆ ಕುಳಿತುಕೊಳ್ಳುವ ಮೊದಲು ಸರಸ್ವತಿ ದೇವಿಯ ಮೇಲಿನ ಸ್ತೋತ್ರವನ್ನು ಹೇಳಿಕೊಳ್ಳುತ್ತಿದ್ದೆವು. ಹಳ್ಳಿಗಳಲ್ಲಿ ಆಗಿನ ಕಾಲದಲ್ಲಿ ವಿದ್ಯುತ್ ದೀಪಗಳು ಇರಲಿಲ್ಲವಾದ್ದರಿಂದ, ನಾವೆಲ್ಲರೂ ಹೊಂಗೆ ಎಣ್ಣೆ ದೀಪವನ್ನು ಮಂಕರಿ ಅಥವಾ ಡಬ್ಬದ ಮೇಲಿರಿಸಿ ಅದರ ಸುತ್ತಲೂ ಕುಳಿತು, ಆ ಮಂದ ಬೆಳಕಿನಲ್ಲಿಯೇ ಓದುವುದು, ಬರೆಯುವುದನ್ನು ಮಾಡಿಕೊಳ್ಳುತ್ತಿದ್ದೆವು. ಕೆಲವು ಬಾರಿ ಓದುವುದಕ್ಕೆ ಬೇರೆ ಬೇರೆ ಸ್ನೇಹಿತರ ಮನೆಗಳಿಗೆ ಹೋಗಿ ಒಟ್ಟಾಗಿ ಓದುತ್ತಿದ್ದೆವು. ಏಕೋ ಏನೋ ಅಂದಿನ ದಿನಗಳಲ್ಲಿ ಓದಿನ ಬಗೆಗಿದ್ದ ಕಾಳಜಿ, ಶಿಸ್ತು ಈಗಿನ ವಿದ್ಯಾರ್ಥಿಗಳಲ್ಲಿ ಕಾಣಿಸುವುದಿಲ್ಲ.

ಸರಸ್ವತಿ ನಮಸ್ತುಭ್ಯಂ, ವರದೇ ಕಾಮರೂಪಿಣಿ,
ವಿದ್ಯಾರಂಭಂ ಕರಿಷ್ಯಾಮಿ, ಸಿದ್ಧಿರ್ಭವತು ಮೇ ಸದಾ

ವಿದ್ಯಾಧಿದೇವತೆಯಾದ ಸರಸ್ವತಿ ಮಾತೆಯನ್ನು, ಸರಸ್ವತಿಯೇ ನಿನಗೆ ನನ್ನ ನಮಸ್ಕಾರಗಳು, ನಾನು ವಿದ್ಯಾಭ್ಯಾಸ ಆರಂಭಿಸುತ್ತಿದ್ದೇನೆ, ಅದು ಸದಾಕಾಲ ನನಗೆ ಸಿದ್ಧಿಸುವಂತೆ ವರವ ನೀಡು ಎಂದು ಬೇಡುತ್ತಾ ವಿದ್ಯಾಭ್ಯಾಸ ಆರಂಭಿಸುವ ಮತ್ತು ಪರೀಕ್ಷೆ ಬರೆಯುವ ಮೊದಲು ಗಣಪತಿಯಂತೆ ತ್ರಿಮೂರ್ತಿಗಳಲ್ಲಿ ಒಬ್ಬರಾದ ಬ್ರಹ್ಮನ ಸತಿಯಾದ ಅಮ್ಮ ಬ್ರಹ್ಮನರಾಣಿ, ವಿದ್ಯಾದೇವತೆಯಾದ ಸರಸ್ವತಿ ಮಾತೆಯನ್ನು:

ಚತುರ್ಮುಖ ಮುಖ ಕಾಂಭೋಜ ವನಹಂಸಮಾ ದೂರ್ಮರ್ಮಾ,
ಮಾನಸೇ ರಮತಾಂ ಧೀರ್ಘಂ ಸರ್ವಶುಕ್ಲಾ ಸರಸ್ವತೀ

ಎಂದು ಸ್ತುತಿಸಿ, ಆರಾಧಿಸಿ, ಅವರ ಸಂಪೂರ್ಣ ಕೃಪೆ ಹಾಗೂ ಅನುಮತಿ ಕೋರುವುದು ವಾಡಿಕೆಯಾಗಿತ್ತು. ಈಗಲೂ ಸಹ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ, ಶೃಂಗೇರಿಯ ಶಾರದಾ ಮಂದಿರಕ್ಕೆ ಹೋಗಿ, ದರುಶನ ಮಾಡಿಕೊಂಡು ಬರುತ್ತಾರೆ. ಶ್ರೀ ಶಾರದಾ ದೇವಿಯು ಈ ರೀತಿಯಾಗಿ ವಿದ್ಯಾರ್ಥಿಗಳ ಆರಾಧ್ಯ ದೈವವಾಗಿದ್ದಾರೆ.

ವಿದ್ಯಾದದಾತಿ ವಿನಯಂ, ವಿನಯಾಧ್ಯಾತಿ ಪಾತ್ರತ್ವಂ,
ಪಾತ್ರತ್ವಾ ಧನಮಾಪ್ನೋತಿ, ಧನಧರ್ಮಂ ತಥಸುಖಂ

ವಿದ್ಯೆಯು ವಿನಯವನ್ನು ಕೊಡುತ್ತದೆ, ವಿನಯದಿಂದ ಸ್ಥಾನವು ಸಿಗುತ್ತದೆ, ಸ್ಥಾನದಿಂದ ಹಣವು ದೊರಕುತ್ತದೆ, ಆ ಹಣದ ದಾನಧರ್ಮದಿಂದ ನಂತರ ಸುಖವು ಉಂಟಾಗುತ್ತದೆ. ಇದಕ್ಕೆಲ್ಲ ಮೂಲವಾದ ಶ್ರೀ ಶಾರದಾ ದೇವಿಯ ಪೂಜೆಯು ಹಿಂದಿನ ಗುರುಕುಲದಿಂದಲೂ ರೂಡಿಯಲ್ಲಿರುವುದು ಕಂಡುಬರುತ್ತದೆ. ಇದನ್ನು ಶಾರದಾ ಅಥವಾ ಸರಸ್ವತಿ ಪೂಜೆ ಎಂದು ಕರೆಯಲಾಗುತ್ತದೆ. ನಮ್ಮ ಬಾಲ್ಯದ ದಿನಗಳಲ್ಲಿ ಸರಸ್ವತಿ ಪೂಜೆಯನ್ನು ಬಹಳ ವಿಜೃ೦ಭಣೆಯಿಂದ ಆಚರಿಸುತ್ತಿದ್ದೆವು. ಇದಕ್ಕೆ ನಮ್ಮ ಅಣ್ಣ-ಅಕ್ಕಂದಿರ ಆಚರಣೆಯೇ ಮೂಲ. ಸಾಮಾನ್ಯವಾಗಿ ಮೂರರಿಂದ ಎಂಟು ದಿನಗಳವರೆಗೆ ದೇವಿಯ ಪ್ರತಿಷ್ಟಾಪನೆಯನ್ನು ಮಾಡಿ, ಪ್ರತಿದಿನವೂ ಪೂಜಿಸಿ, ವಿಧವಿಧವಾದ ಚೆರಪು (ದೇವರ ಪ್ರಸಾದಕ್ಕೆ ಹಳ್ಳಿಯ ಭಾಷೆಯಲ್ಲಿ ಚೆರಪು ಎಂದು ಹೇಳುತ್ತಾರೆ) ಗಳನ್ನು ಹಂಚುತ್ತಿದ್ದರು.

ಶಾಲೆಗೆ ಹೋಗುವ ಎಲ್ಲಾ ವಿದ್ಯಾರ್ಥಿಗಳ ಮನೆಯಲ್ಲಿ ಈ ಸರಸ್ವತಿ ಪೂಜೆಯ ಸಡಗರವೋ ಸಡಗರ. ಓದಲು, ಬರೆಯಲು ಬಳಸುತ್ತಿದ್ದ ಎಲ್ಲಾ ಪುಸ್ತಕ, ಪೆನ್ನುಗಳನ್ನು ಓರಣವಾಗಿ ಜೋಡಿಸಿಟ್ಟು, ಅವುಗಳಿಗೆ ಅರಿಸಿನ-ಕುಂಕುಮ ಮತ್ತು ಹೂಗಳನ್ನು ಮುಡಿಸಿ, ಅದರ ಮೇಲೆ ಸರಸ್ವತಿಯ ಫೋಟೋ ಇಟ್ಟು, ಇಕ್ಕೆಲಗಳಿಗೆ ಬಾಳೆಕಂಬಗಳು ಮತ್ತು ಹಸಿರು ಮಾವಿನ ತೋರಣವನ್ನು ಮಂಟಪಕ್ಕೆ ಕಟ್ಟಿ ಚೆಂಡುಹೂವಿನಿಂದ ಸುತ್ತಲೂ ಅಲಂಕರಿಸಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ, ಮುಂದಕ್ಕೆ ಬೆಳ್ಳಿಯದೋ ಅಥವಾ ಕಂಚಿನದೋ ದೀಪಕಂಬಗಳನ್ನು ಹೊತ್ತಿಸಿ, ನೋಡುವವರಿಗೆ ಚೆಂದಕಾಣುವಂತೆ ಸರಸ್ವತಿ ದೇವಿಯ ಪ್ರತಿಷ್ಠಾಪನೆ ಮಾಡುತ್ತಿದ್ದೆವು.


ಛಾಯಾಚಿತ್ರ ಕೃಪೆ : ಸ್ವಾಮಿ ಬ್ರಹ್ಮಾನಂದ ಪ್ರತಿಷ್ಠಾನ

ಸರಸ್ವತಿ ಪೂಜೆಯ ಕಾರ್ಯಕ್ರಮವು ಒಬ್ಬ ವಿದ್ಯಾರ್ಥಿಯ ಮನೆಯಿಂದ ಶುರುವಾಗಿ, ಸರತಿಯಂತೆ ಎಲ್ಲರ ಮನೆಗಳಲ್ಲಿಯೂ ನಡೆಯುತ್ತಿತ್ತು. ಪ್ರತಿಯೊಬ್ಬರೂ ಎಲ್ಲರನ್ನೂ ತಂತಮ್ಮ ಮನೆಗಳಿಗೆ ಆಹ್ವಾನಿಸುತ್ತಿದ್ದರು. ಅದರಂತೆ, ನಾವು ವಿದ್ಯಾರ್ಥಿಗಳೆಲ್ಲಾ ಒಟ್ಟಾಗಿ ಎಲ್ಲರ ಮನೆಗೂ ಒಂದಾದ ನಂತರ ಮತ್ತೊಂದರಂತೆ ಹೊಗಿಬರುತ್ತಿದ್ದೆವು. ಪೂಜೆಗೆ ಮುಂಚೆ ಹಾಡುಗಳನ್ನು ಹೇಳುವ ಪರಿಪಾಠವಿದ್ದಿತು. ಸಂಗೀತ ಕಲಿತ ಅಥವಾ ಹಾಡು ಹೇಳಲು ಬರುತ್ತಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ, ಹಾಡು ಹೇಳಲು ಪ್ರತಿಯೊಬ್ಬರೂ ಪುಸಲಾಯಿಸುತ್ತಿದ್ದೆವು. ಅದರಂತೆ, ಒಬ್ಬೊಬ್ಬರೇ ಅಥವಾ ಕೆಲವರು ಸೇರಿಕೊಂಡು ಶಾರದಾ ಮಾತೆಯ ಬಗೆಗೆ ದೇವರನಾಮಗಳನ್ನು, ಕೆಲವು ಬಾರಿ ಸಿನಿಮಾ ಹಾಡುಗಳನ್ನು ಹಾಡಿಸುತ್ತಿದ್ದರು. ಹೀಗೆ ಒಂದು ಪೂಜೆಯಲ್ಲಿ ಐದರಿಂದ ಆರು ಹಾಡುಗಳನ್ನು ಹಾಡಿಸಿದ ನಂತರ ಮಂಗಳಾರತಿಯನ್ನು ಮಾಡಿ, ಕೊನೆಗೆ ಚೆರಪನ್ನು ಕೊಡುತ್ತಿದ್ದರು. ಚೆರಪು, ಒಂದೊಂದು ಮನೆಯಲ್ಲಿ ಒಂದೊಂದು ಬಗೆಯದ್ದಾಗಿರುತ್ತಿತ್ತು. ಒಬ್ಬರ ಮನೆಯಲ್ಲಿ ಸೌತೆಕಾಯಿ ಕೋಸಂಬರಿ ಮಾಡಿದ್ದರೆ, ಮತ್ತೊಬ್ಬರ ಮನೆಯಲ್ಲಿ ಕಡಲೆ ಹುಸಲಿ, ಇನ್ನೊಬ್ಬರ ಮನೆಯಲ್ಲಿ ಕಡಲೆಪುರಿ, ಹುರಳಿ ಹುಸಲಿ ಇತ್ಯಾದಿಗಳನ್ನು ಮಾಡಿಸುತ್ತಿದ್ದರು. ಇವುಗಳನ್ನೆಲ್ಲಾ ತಿಂದಮೇಲೆ ನಮಗೆ ಮನೆಯಲ್ಲಿ ಊಟವೇ ಸೇರುತ್ತಿರಲಿಲ್ಲ. ಹೀಗೆ ಸರಸ್ವತಿಯ ಪೂಜೆಯು ದಿನಕ್ಕೆ ಏಳರಿಂದ ಎಂಟು ಮನೆಗಳಲ್ಲಿ, ಕನಿಷ್ಠ ಒಂದು ವಾರದವರೆಗೆ ನಡೆಯುತ್ತಿತ್ತು. ಈ ರೀತಿಯಾಗಿ ಬಹಳ ಶ್ರದ್ಧೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಖಡ್ಡಾಯವಾಗಿ ತಪ್ಪದೆ ಆಚರಿಸಲ್ಪಡುತ್ತಿದ್ದ ಈ ಪೂಜೆಯು ಕಾಲಕ್ರಮೇಣ ಮರೆಯಾಗುತ್ತಿದ್ದು, ಹಿಂದಿನವರ ಸಂಪ್ರದಾಯಗಳನ್ನು ಈಗಿನ ಕಾಲದ ವಿದ್ಯಾರ್ಥಿಗಳು ಮರೆಯುತ್ತಿರುವ ಬಗ್ಗೆ ನನಗೆ ದುಃಖವಾಗುತ್ತಿದೆ ಎಂದೇ ಹೇಳಬಹುದು. ಸರಸ್ವತಿ ಪೂಜೆಯು ಈಗಿನ ಕಾಲದಲ್ಲಿ ಪರೀಕ್ಷೆಗೆ ಮುಂಚೆ ಶಾಲೆಯಲ್ಲಿ ಮಾತ್ರ ಆಚರಿಸುವ ಪೂಜೆಯಾಗಿ ಪರಿವರ್ತನೆಗೊಂಡಿದೆ. ಅದರಲ್ಲೂ, ನಗರದ ವಿದ್ಯಾರ್ಥಿಗಳು ಇದನ್ನು ಸಂಪೂರ್ಣ ಮರೆತಂತೆ ಕಂಡರೆ, ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ಇನ್ನೂ ಈ ಸಂಪ್ರದಾಯವನ್ನು ಸ್ವಲ್ಪಮಟ್ಟಿಗೆ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಈ ರೀತಿಯಾಗಿ ನಮ್ಮ ಬಾಲ್ಯದ ಸರಸ್ವತಿ ಪೂಜೆಯ ಆಚರಣೆಯನ್ನು ನಮ್ಮ ಮಕ್ಕಳಿಗೆ ತಿಳಿಸಿ, ಆಚರಿಸುವ ಮೂಲಕ ಈಗಲೂ ಮೆಲುಕುಹಾಕುತ್ತಿರುತ್ತೇನೆ.

ಲೇಖಕರ ಕಿರುಪರಿಚಯ
ಡಾ|| ಕೆ. ಎಂ. ಚೆನ್ನಕೇಶವಮೂರ್ತಿ.

ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕನಾಗಿ, ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

ಕನ್ನಡದ ಅಚಲ ಅಭಿಮಾನಿ ಹಾಗೂ ಅನುಯಾಯಿಯಾಗಿದ್ದು, ಕನ್ನಡ ನಾಡು-ನುಡಿಯ ಏಳಿಗೆಗೆ ಸದಾ ದುಡಿಯುವ ಕಹಳೆಯ ಒಬ್ಬ ಸಕ್ರಿಯ ಸದಸ್ಯ.

Blog  |  Facebook  |  Twitter

5 ಕಾಮೆಂಟ್‌ಗಳು:

  1. ಕಳೆದು ಹೋಗಿದ್ದ ಸಂಸ್ಕೃತಿಯನ್ನೂ ..ಆ ದಿನಗಳನ್ನು.. ಸಿಟಿ ಬದುಕಿನ ನಡುವೆ ಕಳೆದುಹೋಗುತ್ತಿರುವ ನಾಗರೀಕರಿಗೆ ಎಲ್ಲವನ್ನೂ ನೆನಪಿಸಿಕೊಟ್ಟ ನಿಮಗೆ ಅನಂತಾನಂತ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  2. ನನ್ನ ಶಾಲಾ ದಿನಗಳಲ್ಲಿ ಪ್ರತಿ ಶುಕ್ರವಾರ ಸರಸ್ವತಿ ಪೂಜೆ ನಡೆಸುತ್ತಿದ್ದೆವು. ಅದು ನನ್ನ ಹಾಗು ನನ್ನ ಸ್ನೇಹಿತರಿಗೆ ಸಂಭ್ರಮದ ಗಳಿಗೆಗಳೇ ಆಗಿದ್ದವು. ಕಾಲ ಕಳೆದಂತೆ ರಾಜಕೀಯ,ವಿಲಕ್ಷಣ ಜ್ಯಾತ್ಯಾತೀತವಾದ ಹಾಗು ಶಿಕ್ಷಕರಲ್ಲೇ ಇರುವ ಅನೇಕ ವೈಮನಸ್ಸಿನಿಂದಾಗಿ ಇಂದು ನಶಿಸಿಹೋಗಿದೆ. ಅದಕ್ಕೇ ನಮ್ಮ ಶಿಕ್ಷಣದ ಗುಣಮಟ್ಟ ನಾಗರೀಕತೆ ಬೆಳೆದಂತೆಲ್ಲಾ ಅಧೋಗತಿಗೆ ತಳ್ಳಲ್ಪಡುತ್ತಿರುವುದು. ನಿಮ್ಮ ಲೇಖನ ಕಳೆದು ಹೋದ ನೆನಪುಗಳನ್ನು ತಂದಿತು. ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ಅರ್ಥಪೂರ್ಣ ಆಚರಣೆಯೊಂದರ ವಿಮರ್ಶಾತ್ಮಕ ನಿರೂಪಣೆ ಅತ್ಯಂತ ಪ್ರಸ್ತುತವಾಗಿದೆ. ನಿಮ್ಮ ಅನುಭವದ ದರ್ಶನವು ನಮಗೆಲ್ಲಾ ಸನ್ಮಾರ್ಗದ ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು.

    ಪ್ರತ್ಯುತ್ತರಅಳಿಸಿ