ಬುಧವಾರ, ನವೆಂಬರ್ 2, 2011

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..

ಭುವನ ಭೂಪಟದಲ್ಲಿ, ಭವ್ಯವಾಗಿ ಬೆಳಗುತ್ತಿರುವ ಭಾರತದಲ್ಲಿ, ಕೀರ್ತಿಯುತವಾಗಿ ಕಂಗೊಳಿಸುತ್ತಾ, ವಿಶೇಷ ವ್ಯಕ್ತಿಗಳಾದ ಸರ್ ಎಂ. ವಿಶ್ವೇಶ್ವರಯ್ಯ, ಸರ್ ಸಿ. ವಿ. ರಾಮನ್, ಕುವೆಂಪು ರವರಂತಹ ಅನೇಕ ಅಜರಾಮರುಗಳನ್ನು, ವಿಶಾಲ ವಿಶ್ವಕೆ, ಅಮರವಾಗಿ ಸಮರ್ಪಿಸಿದ, ಕಾವೇರಿ ಮಡಿಲಿನ, ಶ್ರೀಗಂಧದ ಪರಿಮಳದ, ಪ್ರಕೃತಿ ಸಿರಿಯ, ಆಧ್ಯಾತ್ಮ ಅಗ್ರಜರ, ಕಂಪಿನ ಕರ್ನಾಟಕದ, ಪೂಜ್ಯ ಭುವನೇಶ್ವರಿ ಮಾತೆಯ ಮಕ್ಕಳಾದ, ಒಲವಿನ, ನಲಿವಿನ, ಕಣ್ಮಣಿ ಕನ್ನಡಿಗರೇ;

ಇತಿಹಾಸ ಪುಟಗಳಲ್ಲಿ, ಮೈಸೂರು ರಾಜ್ಯಕ್ಕೆ ವಿವಿಧ ರೀತಿಯ ಮಹತ್ವ ದೊರೆತಿದೆ. ಮಹಿಷಾಸುರನ ಮುಷ್ಟಿಯಲ್ಲಿ, ಮಂಕು ಕವಿದಿದ್ದನ್ನು, ಮಹಿಷಾಸುರನ ಮರ್ದನದಿಂದ ಮಂಕನ್ನು ಮುಗಿಸಿ, ಮಾನವನ್ನು ಮನೋಜ್ಞಗೊಳಿಸಿದ ದೇವಿ ಚಾಮುಂಡೇಶ್ವರಿಯು, ಮೈಸೂರು ರಾಜ್ಯ ಅಮರವಾಗಿ, ಅಗಣಿತವಾಗಿ, ಅಖಂಡವಾಗಿ, ಅಮೂಲ್ಯವಾಗಿ, ಅಕ್ಕರೆಯ ಅಂಶುವಾಗಿ, ಅದ್ಭುತವಾಗಿ, ಅದ್ವಿತೀಯವಾಗಿ, ಅನಘವಾಗಿ, ಅನರ್ಘ್ಯವಾಗಿ, ಅನುಗಾಲವೂ ಅನ್ವರ್ಥವಾಗಿ, ಆಕರ್ಷಣೀಯವಾಗಿ, ಅಕ್ಷಯವಾಗಿ, ಅಜರಾಮರವಾಗಲಿ ಎಂದು ಆಶೀರ್ವದಿಸಿ, ಕೃಪೆ ಮಾಡಿದ ಈ ನಾಡು ಕ್ರಮೇಣ ಕರ್ನಾಟಕವಾಗಿ, ಕೀರ್ತಿ ಸಂಪನ್ನತೆಯ ಪ್ರತೀಕವಾಗಿ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅನೇಕಾನೇಕ ಪ್ರತಿಭಾವಂತರನ್ನು ಸೃಷ್ಟಿಸುತ್ತಾ, ಪುರಸ್ಕರಿಸುತ್ತಾ, ಪ್ರೋತ್ಸಾಹಿಸುತ್ತಾ, ಸಂಸ್ಕಾರ, ಸಂಸ್ಕೃತಿಯ ಬೀಡಾಗಿ, ವಿಶ್ವಾಸ ವೃದ್ಧಿಸುತ್ತಾ, ವಿಕಾಸಗೊಳಿಸುತ್ತಾ, ವಿನಯಪೂರ್ವಕವಾಗಿ ವಿಜೃಂಭಿಸುತ್ತಿದೆ.

ಅನೇಕ ವಿದ್ಯಾಸಂಸ್ಥೆಗಳ, ಗುರುಕುಲಗಳ, ಚರಿತ್ರಾರ್ಹ ನೆಲೆಗಳ, ಮಾನವೀಯ ಶ್ರೀಮನ್ಮಹಾರಾಜರ ಮಾರ್ಮಿಕತೆಯ ಮನದಟ್ಟಿನ ವಿಶೇಷತೆಗಳನ್ನು ಹೊಂದಿದ ಕರ್ನಾಟಕದಲ್ಲಿ, ಕನ್ನಡ ಕಣ್ಮರೆಯಾಗುತ್ತಿರುವುದು, ಕರ್ನಾಟಕದ ಸಂಸ್ಕೃತಿ ಸಂಕುಚಿತಗೊಳ್ಳುತ್ತಿರುವುದು, ಅನ್ಯರು ಆವರಿಸುತ್ತಿರುವುದು, ಅನ್ಯ ಸಂಸ್ಕೃತಿ ಪ್ರಧಾನವಾಗುತ್ತಿರುವುದು, ಕನ್ನಡಮ್ಮನ ಇರುವು ಅದುರುತ್ತಿರುವುದು ವಿಪರ್ಯಾಸವಲ್ಲವೇ? ಕೆಚ್ಚೆದೆಯ ಕನ್ನಡಿಗರು ಕನ್ನಡಮ್ಮನನ್ನು ಉಳಿಸಿ ಕಂಗೊಳಿಸಲು ಕಂಕಣಬದ್ಧರಾಗುವುದು ಕರ್ತವ್ಯವಲ್ಲವೇ? ಜನ ಜಾಗೃತಿ ಜಾಗ್ರತೆಯಾಗಿ ಜರುಗಬೇಕಾಗಿದೆ.

'ನಾ ಮೆಟ್ಟುವ ನೆಲ ಅದೇ ಕರ್ನಾಟಕ' ಎಂದು ಕನ್ನಡಿಗರು ವಿಶ್ವವ್ಯಾಪಿಗಳಾಗಿ, ಮೆಟ್ಟಿದ ನೆಲವನ್ನು ಕರ್ನಾಟಕವಾಗಿಸಿ, ಕರ್ನಾಟಕದ ಕೀರ್ತಿ ಧ್ವಜವನ್ನು ಹೆಮ್ಮೆಯಿಂದ ಆರೋಹಣ ಮಾಡಿ, ಕನ್ನಡಮ್ಮನ ಕೀರ್ತಿ ಕಿರೀಟಕ್ಕೆ ಹೆಮ್ಮೆಯ ಗರಿ ಮೂಡಿಸಿ, ವಿಶ್ವದ ಭೂಪಟದಲ್ಲಿ ಕರ್ನಾಟಕವು ಮಿನುಗುವಂತೆ ಮಾಡಿದ ಕನ್ನಡಿಗರಿಗೆ ಕಳಕಳಿಯ ಕರ ಜೋಡಣೆಯ ವಂದನೆಗಳು. ಕೆಚ್ಚೆದೆಯ ಕಿತ್ತೂರು ಚೆನ್ನಮ್ಮ, ಕೆಳದಿಯ ಚೆನ್ನಮ್ಮ, ಬೆಳವಡಿಯ ಮಲ್ಲಮ್ಮ, ಒನಕೆ ಓಬವ್ವ ರಂತಹ ವೀರ ವನಿತೆಯರಿಗೆ ಜನ್ಮ ನೀಡಿ, ಸುಪ್ತ ಚೇತನಗಳನ್ನು ಜಾಗೃತಗೊಳಿಸಿ, ದೇಶ ಪ್ರೇಮದ ಕಹಳೆ ಮೊಳಗಿಸಿ, ತ್ಯಾಗದ ಹಿರಿಮೆ ಹಿಗ್ಗಿಸಿ, ಕರ್ನಾಟಕದ ಕೀರ್ತಿ ಕಹಳೆ ಪ್ರೇರೇಪಕ ಪಾಂಚಜನ್ಯದಂತೆ ಅಮರನಾದವಾಗಿರುವಂತೆ ಮಾಡಿರುವುದು, ಇಂದಿನ ಹಾಗೂ ಎಂದೆಂದಿನ ಪೀಳಿಗೆಗಳಿಗೂ ದಾರಿದೀಪವಾಗಿ ಮೂಡಿಸಿದ ಕೀರ್ತಿ ಕನ್ನಡಮ್ಮನದಲ್ಲವೇ? ಕನ್ನಡಮ್ಮನ ಋಣ ತೀರಿಸುವ ಹೆಬ್ಬಯಕೆಯ ಸಂಕಲ್ಪವು ಮನೋಪ್ರೇರಣೆಯಾಗಿ, ಸಕಲ ಕನ್ನಡಿಗರಲ್ಲಿ ಮೊಳಕೆಯೊಡೆದು ಸಾಧನೆಯಾಗಿ ಸಾರ್ಥಕವಾಗಲಿ ಎಂಬುದೇ ಈ ಸುಸಂದರ್ಭದ ಮನೋಭಿಲಾಷೆ.

ಅನ್ಯ ಭಾಷೆಗಳ ಮೇಲೆ ವಿಶ್ವಾಸವಿರಲಿ. ವ್ಯಾವಹಾರಿಕವಾಗಿ ಅವಶ್ಯಕತೆಯಿದ್ದಾಗ ವಿವೇಚನೆಯಿಂದ ಬಳಕೆಯಾಗಲಿ. ಆದರೆ, ಇದೇ ಮೋಹದಲ್ಲಿ ಹೆತ್ತ ಕನ್ನಡಮ್ಮನ ಧೋರಣೆಯಾಗದಿರಲಿ, ಧಾರಣೆಯಾಗಲಿ.

ಕನ್ನಡದ ಕೀರ್ತಿ ಕಂಪಿಸಿದ ಮಹಾನ್ ಮಹಾತ್ಮರುಗಳನ್ನು ಮೇಳೈಸುತ್ತಾ, ಆಧ್ಯಾತ್ಮ ಸದ್ಗುರುಗಳಿಗೆ ಸಾಷ್ಟಾಂಗವಾಗಿ ಭಕ್ತಿ ಸಮರ್ಪಿಸುತ್ತಾ, ಜ್ಞಾನ ಪೀಠ ಪ್ರಶಸ್ತಿಗೆ ಭಾಜನರಾಗಿ ಕರ್ನಾಟಕದ ಗೌರವವನ್ನು ಸಂಕಲನಗೊಳಿಸಿದವರಿಗೆ ಅಭಿನಂದಿಸುತ್ತಾ, ಭಾರತ ರತ್ನರಿಗೆ, ಪದ್ಮ ಶ್ರೀ ಗಳಿಗೆ ವಂದಿಸುತ್ತಾ, ಕಲಾವಿದರುಗಳನ್ನು ಗೌರವಿಸುತ್ತಾ, ಸಾಹಿತಿಗಳನ್ನು ಸ್ಮರಿಸುತ್ತಾ, ಪ್ರತಿಭೆಗಳನ್ನು ಪುರಸ್ಕರಿಸುತ್ತಾ, ನಿಷ್ಕಪಟ ಹಾಗೂ ನಿಸ್ವಾರ್ಥ ಸೇವಾ ಮನೋಭಾವದ ಸಮಾಜ ಸೇವಕರಿಗೆ ನಮಿಸುತ್ತಾ, ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿ ಕೊಡುಗೆ ನೀಡಿದವರಿಗೆ ವಂದಿಸುತ್ತಾ, ಮತ್ತೆ ಮತ್ತೆ ಇದೇ ಹಾದಿಯಲ್ಲಿ ಸಾಗುತ್ತಿರುವ ಅನೇಕ ಪ್ರಕಟಿತ ಹಾಗೂ ಅಪ್ರಕಟಿತ ಮಹಾನ್ ವ್ಯಕ್ತಿಗಳನ್ನು ಗುರುತಿಸಿ, ಪುರಸ್ಕರಿಸಿ, ಕನ್ನಡಮ್ಮನ ಹಿರಿಮೆಯನ್ನು ವಿಕಾಸಗೊಳಿಸುತ್ತಾ, ಕನ್ನಡಮ್ಮನು ಮಿನುಗು ತಾರೆಯಾಗಿ ನಮ್ಮೆಲ್ಲರನ್ನೂ ನಿರಂತರವಾಗಿ ಕಾಪಾಡುವಂತೆ ಪ್ರಾರ್ಥಿಸುತ್ತಾ, ಅತ್ಯುತ್ತಮ ಸಾಧನೆಗಳು ಇತರರಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತಾ, ಸಕಲರಿಗೂ ಸದ್ಬುದ್ಧಿಯು ಸನ್ಮಾರ್ಗದಲ್ಲಿ ಪ್ರಚೋದನೆಯಾಗಿ ಸಕಲ ಅಭಿವೃದ್ಧಿಯು ಸಿದ್ಧಿಸಲು ಭುವನೇಶ್ವರಿ ಮಾತೆಯ ಆಶೀರ್ವಾದವಾಗಿ, ಕನ್ನಡ ಕಂಪಿನ ಇಂಪು ವಿಸ್ತಾರವಾಗಲಿ, ಕನ್ನಡವೇ ನಿತ್ಯ, ಕನ್ನಡವೇ ಸತ್ಯ ಚಿರಾಯುವಾಗಲಿ, ಸಕಲರಿಗೂ ಸಕಲ ಸನ್ಮಂಗಳವಾಗಲಿ, ಸರ್ವೇ ಜನ ಸುಖಿನೋ ಭವಂತು ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

ಲೇಖಕರ ಕಿರುಪರಿಚಯ
ಡಾ|| ವಿ. ವಿ. ಕುಮಾರ್,
ವ್ಯವಸ್ಥಾಪಕರು (ಮಾರುಕಟ್ಟೆ),
ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತ,
ಮೈಸೂರು.

01-11-1969 ರಲ್ಲಿ ಅಂದಿನ ರಾಷ್ಟ್ರಪತಿ ಸನ್ಮಾನ್ಯ ಶ್ರೀ ವಿ. ವಿ. ಗಿರಿ ಯವರಿಂದ 'ಪ್ರೆಸಿಡೆಂಟ್ ಸ್ಕೌಟ್' ಪ್ರಶಸ್ತಿ ಸ್ವಿಕರಿಸಿದ ಇವರು ಕಾರ್ಯಕ್ರಮ ನಿರೂಪಣೆ, ಲೇಖನಗಳು, ಅತಿಥಿ ಉಪನ್ಯಾಸ, ಹಾಸ್ಯ, ಆಧ್ಯಾತ್ಮವನ್ನು ವೈಜ್ಞಾನಿಕವಾಗಿ ವಿಶ್ಲೇಸಿಸುವುದು, ವ್ಯಕ್ತಿತ್ವ ವಿಕಸನ ಮತ್ತು ಪ್ರೇರೇಪಣೆ ಮುಂತಾದ ವಿಷಯಗಳಲ್ಲಿ ಉನ್ನತ ಆಸಕ್ತಿ ರೂಡಿಸಿಕೊಂಡಿದ್ದಾರೆ.

Blog  |  Facebook  |  Twitter

4 ಕಾಮೆಂಟ್‌ಗಳು:

  1. ಈ ಲೇಖನವು ಚೆನ್ನಾಗಿ ಮೂಡಿಬಂದಿದೆ . ಇದನ್ನು ಓದಿ ನನಗೆ ಬಹಳ ಸಂತಸವಾಯಿತು!.ಕಹಳೆಯ
    ಮೊದಲ ಕನ್ನಡ ನಾದ ಹಬ್ಬದ ವಿಚಾರಮಯ, ವಿಚಾರವೊಂತಿಕೆಯ ,ವಿಚಾರಶೀಲ ವಿಷಯಗಳನೊಂದಿರುವ ಈ
    ಲೇಖನ ಪ್ರಕಟಣೆಗಾಗಿ ಕಹಳೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. kannadatanavannu belesalu intha lekhanagalu tumba avashya nimma lekhaniyinda innu hechchina lekhanagalu moodi barali. pradyumna

    ಪ್ರತ್ಯುತ್ತರಅಳಿಸಿ
  3. ಕನ್ನಡ ಹಾರೂ ಕರ್ನಾಟಕದ ಶ್ರೀಮಂತಿಕೆಯನ್ನು, ಶ್ರೀಮಂತವಾಗಿ ವರ್ಣಿಸಿದ್ದೀರಿ. ಕಹಳೆಯ ಕರೆಗೆ ಅತ್ಯಂತ ತ್ವರಿತ ಹಾಗೂ ಸಮರ್ಪಕವಾಗಿ ಸ್ಪಂದಿಸಿದ್ದಕ್ಕೆ ನಮ್ಮ ತಂಡದ ಪರವಾಗಿ ನಿಮಗೆ ವಂದನೆಗಳು ಸರ್.

    ಪ್ರತ್ಯುತ್ತರಅಳಿಸಿ