ಮಂಗಳವಾರ, ನವೆಂಬರ್ 1, 2011

ಮುನ್ನುಡಿ

ಕರುನಾಡಿನ ನಮ್ಮ ಸಮಸ್ತ ಬಾಂಧವರಿಗೆ ಕನ್ನಡ ರಾಜ್ಯೋತ್ಸವ 'ನಾಡಹಬ್ಬದ' ಶುಭಾಶಯಗಳು.

'ನಾಡಹಬ್ಬ' ಎಂದೊಡನೆ, ನಮ್ಮೆಲ್ಲರಿಗೂ ನೆನಪಾಗುವುದು ಮೈಸೂರಿನ ವಿಶ್ವವಿಖ್ಯಾತ 'ದಸರಾ' ಹಬ್ಬ - ತಾಯಿ ಚಾಮುಂಡೇಶ್ವರಿ ದೇವಿಯು ಮಹಿಷಾಸುರನನ್ನು ಮರ್ದಿಸಿ, ದುಷ್ಟ ಶಕ್ತಿಯನ್ನು ನಿಗ್ರಹಿಸಿದ ಸ್ಮರಣಾರ್ಥ ಆಚರಣೆ. ಭಾರತಕ್ಕೆ ಪರಕೀಯರಿಂದ ಸ್ವಾತಂತ್ರ್ಯದೊರಕಿದ ಸುಮಾರು ಒಂಭತ್ತು ವರ್ಷಗಳ ನಂತರ, ಅಂದರೆ 1956 ರ ನವೆಂಬರ್ ಒಂದರಂದು ದಕ್ಷಿಣ ಭಾರತದಲ್ಲಿ ನೆಲೆಸಿ ಕನ್ನಡ ಭಾಷೆಯನ್ನಾಡುವ ಜನರಿದ್ದ ಮುಂಬಯಿ, ಹೈದರಾಬಾದ್ ಮತ್ತು ಮದರಾಸ್ ಪ್ರಾಂತ್ಯಗಳನ್ನು ಅಂದಿನ ಮೈಸೂರು ಸಂಸ್ಥಾನಕ್ಕೆ ಸೇರ್ಪಡೆಗೊಳಿಸಿ ರಚಿಸಲಾದ 'ಮೈಸೂರು' ರಾಜ್ಯವನ್ನು 1973 ನೇ ನವೆಂಬರ್ ಒಂದರಂದು 'ಕರ್ನಾಟಕ' ಎಂದು ಮರುನಾಮಕರಣ ಮಾಡಿದ ಈ ಸುದಿನವನ್ನು ನಾವು 'ನಾಡಹಬ್ಬ' ಎಂದು ಪರಿಗಣಿಸಿಕೊಂಡಿರುವುದು ಅಪ್ರಸ್ತುತವಾಗಲಾರದೆಂಬುದು ನಮ್ಮೆಲ್ಲರ ವೈಯಕ್ತಿಕ ಅಭಿಪ್ರಾಯ.

56ನೇ ಕನ್ನಡ ರಾಜ್ಯೋತ್ಸವವನ್ನು ದೇಶ-ವಿದೇಶಗಳಲ್ಲಿರುವ ಕನ್ನಡಿಗರೆಲ್ಲರೂ ಸೇರಿ ಪ್ರಪಂಚದಾದ್ಯಂತ ಆಚರಿಸಲು ಅನುವಾಗುವಂತೆ ಒಂದು ಅಂತರ್ಜಾಲ ತಾಣವನ್ನು ಸೃಷ್ಟಿಸಿ, ಅದಕ್ಕೆ 'ಕಹಳೆ' ಎಂಬ ನಾಮಾಂಕಿತ ಮಾಡಿದಾಗ ನಮಗಾದ ಆನಂದ ಹೇಳತೀರದು. ಅಂದು ನಾವು ಕಂಡ 'ಹಗಲುಗನಸು' ನನಸಾಗುವ ಸುಸಂದರ್ಭ ಇಂದು ಒದಗಿಬಂದಿದೆ.

'ಕಹಳೆ'ಗೆ ಈವರೆಗೂ ದೊರೆತಿರುವ ಪ್ರತಿಕ್ರಿಯೆಯು ಹರ್ಷವನ್ನಲ್ಲದಿದ್ದರೂ ನಮಗೆ ಸಮಾಧಾನವನ್ನು ತಂದುಕೊಟ್ಟಿದೆ. ಈ ತಿಂಗಳ ಪ್ರತಿ ದಿನವೂ ಪ್ರಕಟಿಸಲು ಸಾಕಷ್ಟು ಬರವಣಿಗೆಗಳು ನಮಗೆ ತಲುಪಿಲ್ಲವಾದರೂ ಸಹ ಎಲ್ಲಾ 30 ದಿನಗಳೂ ಹೊಸತೊಂದು ಲೇಖನವನ್ನು ಬಿತ್ತರಿಸುವ ಆಶಯದ ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಅತ್ಯವಶ್ಯ ಎಂಬ ಅಂಶವನ್ನು ಇಲ್ಲಿ ಒತ್ತಿಹೇಳಲು ಇಚ್ಛಿಸುತ್ತೇವೆ.

2011 ರ ನವೆಂಬರ್ ಒಂದರಿಂದ ಪ್ರಾರಂಭಗೊಂಡು, ಪ್ರತೀ ವರ್ಷವೂ ನವೆಂಬರ್ ತಿಂಗಳಿನಲ್ಲಿ ಕನ್ನಡ ಕಹಳೆಯನ್ನು ಮೊಳಗಿಸಲು ಈ ಕಾರ್ಯಕ್ರಮವು ಒಂದು ಸಮೂಹ ಚಟುವಟಿಕೆಯಾಗುವುದು ಅವಶ್ಯ. ಕಹಳೆಯ ಸಮೂಹಕ್ಕೆ ಸೇರಿಕೊಳ್ಳಲು ಪ್ರತಿಯೊಬ್ಬ ಕನ್ನಡಿಗರನ್ನೂ ಈ ಮೂಲಕ ತುಂಬು ಹೃದಯದಿಂದ ಆಮಂತ್ರಿಸುತ್ತಿದ್ದೇವೆ.

ವಿಶಾಲ ಹೃದಯವಂತಿಕೆಯ ಕನ್ನಡಿಗರ ವಿಶೇಷ-ವಿಶಿಷ್ಟ ಚಿಂತನೆ-ಭಾವನೆಗಳನ್ನು ಶ್ರೀಮಂತ ಕನ್ನಡ ಭಾಷೆಯಲ್ಲಿ ಪ್ರಭಾವೀ ಅಂತರ್ಜಾಲ ಮಾಧ್ಯಮದಲ್ಲಿ ಕಹಳೆಯ ಮೂಲಕ ಕನ್ನಡಾಂಬೆಗೆ ಅರ್ಪಿಸುವ ಸದಾವಕಾಶ ಪಡೆದುಕೊಂಡ ನಾವೆಲ್ಲರೂ ಧನ್ಯರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ