ಗುರುವಾರ, ನವೆಂಬರ್ 15, 2018

ಭಾವ ಲಹರಿ

ನಾನು ಮುಗಿಲು ನೀನು ಕಡಲು
ಸುರಿಸೋಣ ಭರಣಿ ಮಳೆ
ನಾನು ಹೊಲ ನೀನು ಜಲ
ಬೆಳೆಸೋಣ ಹುಲುಸು ಬೆಳೆ.

ನಾನು ಎಣ್ಣೆ ನೀನು ಬತ್ತಿ
ಬೆಳಗೋಣ ಮೂಲೆ ಮುಡುಕು
ನಾನು ಎಲರು ನೀನು ಅಲರು
ಹರಡೋಣ ಕಂಪು ಅಗರು.

ನಾನು ಭಾವ ನೀನು ಲಹರಿ
ಹಾಡೋಣ ಭಾವ ಗೀತೆ
ನಾನು ಗೆಜ್ಜೆ ನೀನು ಹೆಜ್ಜೆ
ಮಾಡೋಣ ಭರತ ನಾಟ್ಯ.

ನಾನು ಕುಂಚ ನೀನು ಬಣ್ಣ
ಬಿಡಿಸೋಣ ನವ್ಯ ಚಿತ್ರ
ನಾನು ಸಾಕ್ಷಿ ನೀನು ಅಕ್ಷಿ
ಸಾರೋಣ ನಗ್ನ ಸತ್ಯ.

ನಾನು ಕವಿ ನೀನು ಕಿವಿ
ಹಾಡಿ ಕೇಳೋಣ ಬನ್ನ ಬವಣೆ
ನಾನು ಪಥಿಕ ನೀನು ರಥಿಕ
ಸವೆಸೋಣ ಬಾಳ ಪಯಣ.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ನಿರಂಜನ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 14, 2018

ಮೈಗಳ್ಳ ಕೋಗಿಲೆ


ಚಿತ್ರ ಕೃಪೆ : ಗೂಗಲ್

ಒಂದು ಊರಿತ್ತು. ಆ ಊರಿನಲ್ಲಿ ಒಂದು ದೊಡ್ಡದಾದ ಆಲದ ಮರವಿತ್ತು. ಆ ಆಲದ ಮರದಲ್ಲಿ ಒಂದು ಕಾಗೆ ವಾಸವಾಗಿತ್ತು. ಕಾಗೆಯು ದಿನಾ ಆಹಾರವನ್ನು ಹುಡುಕುತ್ತಾ ಹೋಗುತ್ತಿತ್ತು. ಸಿಕ್ಕಿದ ಆಹಾರವನ್ನು ತಿಂದು ಗೂಡಿಗೆ ಬರುತ್ತಿತ್ತು.

ಒಂದು ದಿನ ಮನೆಯ ಮುಂದೆ ಒಬ್ಬ ಹುಡುಗ ಪಕ್ಷಿಗಳಿಗೆ ಧಾನ್ಯಗಳನ್ನು ಹಾಕುತ್ತಿದ್ದ. ಕಾಗೆಯು ಅಲ್ಲಿಗೆ ಹೋಗಿ ಧಾನ್ಯಗಳನ್ನು ಎತ್ತಿಕೊಂಡು ಬಂದು ಮರದ ಮೇಲೆ ಕುಳಿತುಕೊಂಡು ಧಾನ್ಯಗಳನ್ನು ತಿಂದು ತನ್ನ ಗೂಡಿಗೆ ಹಾರಿ ಹೋಯಿತು.

ಸ್ವಲ್ಪ ದಿನಗಳ ನಂತರ ಕಾಗೆಯು ತನ್ನ ಗೂಡಿನಲ್ಲಿ ಮೊಟ್ಟೆಗಳನ್ನು ಇಟ್ಟಿತು. ಒಂದು ದಿನ ಸೋಮಾರಿ ಕೋಗಿಲೆಯು ಕಾಗೆ ಇಲ್ಲದ ಸಮಯದಲ್ಲಿ ಕಾಗೆಯ ಗೂಡಿಗೆ ಬಂದು ಒಂದು ಮೊಟ್ಟೆಯನ್ನು ಇಟ್ಟು ಹಾರಿ ಹೋಯಿತು.

ಕಾಗೆ ತನ್ನ ಗೂಡಿಗೆ ಬಂದಿತು. ಸ್ವಲ್ಪ ದಿನದವರೆಗೆ ಕಾಗೆ ಮೊಟ್ಟೆಗಳಿಗೆ ಕಾವು ಕೊಟ್ಟಿತು. ಮೊಟ್ಟೆಗಳು ಕೆಲವು ದಿನಗಳ ನಂತರ ಒಡೆದು ಮರಿಗಳು ಹೊರಗೆ ಬಂದವು. ನೋಡಲು ಎಲ್ಲ ಮರಿಗಳೂ ಒಂದೇ ರೀತಿ ಇದ್ದವು. ಎರಡು ದಿನಗಳ ನಂತರ ಕಾಗೆ ಮರಿಗಳು ಕಾ.. ಕಾ.. ಎನ್ನಲು ಪ್ರಾರಂಭಿಸಿದವು. ಆದರೆ ಕೋಗಿಲೆ ಮರಿಗೆ ಕಾ.. ಕಾ.. ಎನ್ನಲು ಬರಲಿಲ್ಲ. ಕಾಗೆ ಅದನ್ನು ಕುಕ್ಕಲು ಹೋದಾಗ ಕೋಗಿಲೆ ಬಂದು ಅದರ ಮರಿಯನ್ನು ಎತ್ತಿಕೊಂಡು ಹಾರಿ ಹೋಯಿತು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಚೈತ್ರ, ಆರ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 13, 2018

ತರಕಾರಿ

ಚಿತ್ರ ಕೃಪೆ : ಗೂಗಲ್

ಕೊಳ್ಳಿರಿ ತಾಜಾ ತರಕಾರಿ
ಆರೋಗ್ಯಕ್ಕೆ ಹಿತಕಾರಿ
ಕೊಳ್ಳಿರಿ ತಾಜಾ ತರಕಾರಿ.

ನಾಲಿಗೆಗೂ ಇದು ರುಚಿಕಾರಿ
ಅಪ್ಪನ ಜೇಬಿಗೂ ಸಹಕಾರಿ
ನಾವಾಗೋಣ ಸಸ್ಯಾಹಾರಿ
ಕೊಳ್ಳಿರಿ ತಾಜಾ ತರಕಾರಿ.

ಎಣ್ಣೆಗಾಯಿಗೆ ಬದನೇಕಾಯಿ
ಗೊಜ್ಜಿಗೆ ಬೇಕು ಬೆಂಡೇಕಾಯಿ
ಬಜ್ಜಿಗೆ ಬೇಡವೆ ಹೀರೇಕಾಯಿ
ಮಜ್ಜಿಗೆ ಹುಳಿಗೆ ಕುಂಬಳಕಾಯಿ
ಕೊಳ್ಳಿರಿ ತಾಜಾ ತರಕಾರಿ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಅಶ್ವಿನಿ ಬಣಗಾರ್

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 12, 2018

ಗಾದೆಗಳು

ಗಾದೆಗಳು ಎಂದರೇನು?
ಜನ ಸಾಮಾನ್ಯರ ಅನುಭವದ ಸಾರವೇ ಗಾದೆಗಳು.

ಗಾದೆಗಳು:
 1. ವೇದ ಸುಳ್ಳಾದರೂ ಗಾದೆ ಸುಳ್ಳಾಗದು
 2. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ
 3. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
 4. ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆ ಎಳೆಯಿತು
 5. ಎತ್ತಿಗೆ ಜ್ವರ ಬಂದರೆ, ಎಮ್ಮಗೆ ಬರೆ ಹಾಕಿದಂತೆ
 6. ಕೈಕೆಸರಾದರೆ ಬಾಯಿ ಮೊಸರು
 7. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ?
 8. ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು
 9. ಮಾತು ಬೆಳ್ಳಿ, ಮೌನ ಬಂಗಾರ
 10. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು
 11. ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತೆ
 12. ಮನೆಗೆ ಮಾರಿ ಊರಿಗೆ ಉಪಕಾರಿ
 13. ಆಳಾಗಬಲ್ಲವನು ಅರಸನಾಗಬಲ್ಲ
 14. ಊರಿಗೆ ದೊರೆ ಆದರೂ ತಾಯಿಗೆ ಮಗನೇ
 15. ಹೆತ್ತವರಿಗೆ ಹೆಗ್ಗಣ ಮುದ್ದು
 16. ಊರೆಲ್ಲ ದೋಚಿಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
 17. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?
 18. ಮಾಡೋದೆಲ್ಲಾ ಅನಾಚಾರ ಮನೆಯ ಮುಂದೆ ಬೃಂದಾವನ
 19. ಮನಸ್ಸಿದ್ದರೆ ಮಾರ್ಗ
 20. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ
 21. ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ
 22. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ
 23. ಅಕ್ಕಿ ಮೇಲೂ ಆಸೆ, ನೆಂಟರ ಮೇಲೂ ಪ್ರೀತಿ
 24. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ
 25. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ ಹಾಸಿನಿಕೆ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 11, 2018

ಸಿಂಹ ಮತ್ತು ಇಲಿ

ಚಿತ್ರ ಕೃಪೆ : ಗೂಗಲ್

ಸಿಂಹವೊಂದು ಮರದ ಕೆಳಗೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಆಗ ಒಂದು ಇಲಿಮರಿ ತನ್ನ ಬಿಲದಿಂದ ಹೊರಬಂದು ಸಿಂಹದ ಮೈಮೇಲೆ ಓಡಾಡಲಾರಂಭಿಸಿತು. ಗಾಢ ನಿದ್ರೆಯಲ್ಲಿದ್ದ ಸಿಂಹಕ್ಕೆ ಕಿರಿಕಿರಿಯಾಯಿತು. ಸಿಂಹ ಎಚ್ಚೆತ್ತು ಇಲಿಯನ್ನು ಹಿಡಿಯಿತು. ಗಾಬರಿಯಾದ ಇಲಿ, ತನಗೇನೂ ಮಾಡಬಾರದೆಂದು ಸಿಂಹವನ್ನು ಪ್ರಾರ್ಥಿಸಿತು. ತನ್ನನ್ನು ಬಿಟ್ಟುಬಿಟ್ಟರೆ ಆಪತ್ಕಾಲದಲ್ಲಿ ಸಹಾಯ ಮಾಡುವೆನೆಂದು ಸಿಂಹಕ್ಕೆ ಇಲಿಯು ಭರವಸೆ ಕೊಟ್ಟಿತು. ನನ್ನಂತ ಬಲಿಷ್ಠನಿಗೆ ನಿನ್ನಿಂದ ಏನು ಸಹಾಯವಾಗುವುದು? ಎಂದು ನಿರ್ಲಕ್ಷ್ಯದಿಂದ ಸಿಂಹ ಇಲಿಯನ್ನು ಬಿಟ್ಟುಬಿಟ್ಟಿತು.

ಕೆಲ ದಿನಗಳ ಬಳಿಕ ಬೇಟೆಗಾರನೊಬ್ಬ ಹಾಕಿದ್ದ ಬಲೆಗೆ ಸಿಂಹ ಸಿಲುಕಿಹಾಕಿಕೊಂಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಅಲ್ಲಿಗೆ ಬಂದ ಇಲಿಯು ಸಿಂಹವನ್ನು ಕಂಡು ಬಲೆಯನ್ನೆಲ್ಲಾ ತನ್ನ ಹರಿತವಾದ ಹಲ್ಲುಗಳಿಂದ ಕತ್ತರಿಸಿ ಸಿಂಹವನ್ನು ಬಲೆಯಿಂದ ಬಿಡಿಸಿತು.

ಚಿಕ್ಕ ಪ್ರಾಣಿಯಾಗಿದ್ದರೂ ತನ್ನನ್ನು ಕಾಪಾಡಿದ ಇಲಿಗೆ ಸಿಂಹವು ಕೃತಜ್ಞತೆ ಸಲ್ಲಿಸಿತು. ಅಂದಿನಿಂದ ಸಿಂಹ ಮತ್ತು ಇಲಿ ಸ್ನೇಹಿತರಾದರು.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್ ವರುಣ್

4ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 10, 2018

ಮುದ್ದು ಕಂದ

ಚಿತ್ರ ಕೃಪೆ : ಗೂಗಲ್

ಹಾವಿನ ಹೆಡಿ ಚೆಂದ, ಮಾವಿನ ಮಿಡಿ ಚೆಂದ
ಹಾರ್ಯಾಡಿ ಬರುವ ಗಿಳಿ ಚೆಂದ, ನನ ಕಂದ
ನೀ ಇದ್ದರ ನನ್ನ ಮನಿ ಚೆಂದ.

ನನ್ನ ಕಂದ ಮುದ್ದು, ಹೊನ್ನ ತಾವರೆ ಮುದ್ದು
ಹಣ್ಣುಳ್ಳ ಗಿಡದಿ ಗಿಳಿ ಮುದ್ದು ಕಂದವ್ವ
ನೀ ಮುದ್ದು ನನ್ನ ಬಳಗಾಕ.

ಹಸಿರಂಗಿ ತೊಡಸೀನ, ಕಾಲ್ಗಡಗ ಇಡಸೀನ
ಹಳ್ಳಕ್ಕೆ ನೀನು ಬರಬ್ಯಾಡ ನನಕಂದ
ಬೆಳ್ಳಕ್ಕಿ ಹಿಂಡು ಬೆದರ್ಯಾವ.

ಗುಜ್ಜೆ ನನ ಕಂದಯ್ಯನ ಗೆಜ್ಜೆ ಸಪ್ಪಳ ಕೇಳಿ
ನಿಬ್ಬಣದೆತ್ತು ಬೆದರ್ಯಾವ, ಮುದ್ಯಾಣದ
ಹುಲ್ಲು ತಿನ್ನೋದ ಮರೆತಾವ.

ತವರೂರಿಗ್ಹೋದಾಗ ನವಿಲು ಬಣ್ಣದ ಪಕ್ಷಿ
ತಲಿಬ್ಯಾನಿಯೆದ್ದು ಅಳುತಿತ್ತು, ಕಂದನ
ಚಲುವೀನ ನೋಡಿ ನಗುತಿತ್ತು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ರಂಜಿತ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 9, 2018

ಕಾಗೆ ಮತ್ತು ಹಾವು

ಚಿತ್ರ ಕೃಪೆ : ಗೂಗಲ್

ಒಂದಾನೊಂದು ಕಾಲದಲ್ಲಿ ಒಂದು ಆಲದ ಮರದ ಮೇಲೆ ಜೋಡಿ ಕಾಗೆಗಳು ಇದ್ದವು. ಆಶ್ರಯಕ್ಕಾಗಿ ಹುಡುಕುತ್ತಿದ್ದ ದೊಡ್ಡ ಹಾವು ಅದೇ ಮರದ ಕೆಳಗೆ ಬಂದು ಅಲ್ಲಿನ ಬಿಲದಲ್ಲಿ ಸೇರಿಕೊಂಡಿತ್ತು. ತಮ್ಮ ನೆರೆಯವನಾಗಿ ಈ ಹಾವು ಬಂದು ಸೇರಿಕೊಂಡಿದ್ದಕ್ಕೆ ಕಾಗೆಗಳಿಗೆ ತುಂಬಾ ಆತಂಕವಾಯಿತು. ಈ ವಿಷಯವನ್ನು ಕಾಗೆಗಳು ಸ್ನೇಹಿತರ ಜೊತೆ ಚರ್ಚಿಸಿದವು. ಎಲ್ಲರ ಮಕ್ಕಳನ್ನು ಈ ದುಷ್ಟ ಹಾವು ತಿನ್ನಬಹುದು, ಆದ್ದರಿಂದ ಹುಷಾರಾಗಿ ಇರಬೇಕು ಎಂದು ಎಚ್ಚರಿಸಿದವು. ನನ್ನ ಎಲ್ಲಾ ಮಕ್ಕಳನ್ನು ಈ ಹಾವು ತಿಂದುಹಾಕಿದರೆ, ನಾನು ಹೇಗೆ ತಾನೆ ಮೊಟ್ಟೆ ಇಟ್ಟು ಮರಿ ಮಾಡುವುದು? ನಾವು ಬೇರೊಂದು ಜಾಗದಲ್ಲಿ ಗೂಡು ಮಾಡೋಣ ಎಂದು ಹೆಣ್ಣು ಕಾಗೆ ದುಃಖದಿಂದ ಹೇಳಿತು. ಅದಕ್ಕೆ ಗಂಡು ಕಾಗೆ ಸಂತೈಸಿ, ನಾವು ಜಾಗವನ್ನು ಬಿಡೋದು ಬೇಡ, ಹೇಗಾದರೂ ಮಾಡಿ ಹಾವನ್ನು ಆಚೆಗೆ ಹಾಕೋಣ ಎಂದು ಹೇಳಿತು.

ಸ್ವಲ್ಪ ದಿನಗಳ ನಂತರ ಹೆಣ್ಣು ಕಾಗೆ ಮೂರು ಮೊಟ್ಟೆಗಳನ್ನು ಇಟ್ಟಿತು. ನಂತರ ಮೂರು ಪುಟ್ಟ ಪುಟ್ಟ ಮರಿಗಳು ಆಚೆಗೆ ಬಂದವು. ಆ ಮರಿ ಕಾಗೆಗಳ ಸದ್ದನ್ನು ಕೇಳಿದ ಹಾವಿಗೆ ತುಂಬಾ ಸಂತೋಷವಾಯಿತು. ಒಂದು ದಿನ ದೊಡ್ಡ ಕಾಗೆಗಳು ಆಚೆ ಹೋಗಿದ್ದಾಗ, ದುರಾಸೆಯಿಂದ ಹಾವು ನಿಧಾನವಾಗಿ ಕಾಗೆಗಳ ಗೂಡಿಗೆ ಬಂದು ಮೂರು ಮರಿಗಳನ್ನು ತಿಂದುಹಾಕಿತು. ದೊಡ್ಡ ಕಾಗೆಗಳು ವಾಪಸ್ಸು ಬಂದಾಗ ಗೂಡು ಖಾಲಿಯಾಗಿರೋದು ನೋಡಿ ಹೆಣ್ಣು ಕಾಗೆ ಜೋರಾಗಿ ಅಳಲಾರಂಭಿಸಿತು. ಆ ಹಾವಿಗೆ ನಾನು ಪಾಠ ಕಲಿಸುತ್ತೇನೆ ಎಂದು ಗಂಡು ಕಾಗೆ ಹೇಳಿತು.

ಕೆಲವು ದಿನಗಳ ನಂತರ ಮತ್ತೆ ಹೆಣ್ಣು ಕಾಗೆ ಮೊಟ್ಟೆಗಳನ್ನು ಇಟ್ಟಿತು. ಮರಿ ಕಾಗೆಗಳನ್ನು ರಕ್ಷಿಸಲು ಗಂಡು ಕಾಗೆಯು ನರಿಯ ಸಲಹೆಯನ್ನು ಕೇಳಿತು. ಕಾಗೆ ಹೇಳಿದ ಕಥೆಯನ್ನು ಕೇಳಿದ ನರಿಯು ಉಪಾಯವನ್ನು ಸೂಚಿಸಿತು. ನದಿಯ ಬಂಡೆಯ ಬಳಿ ಹಾರಿ ಹೋಗು, ಅಲ್ಲಿ ಒಬ್ಬಳು ರಾಣಿ ಸ್ನಾನ ಮಾಡುತ್ತಿರುತ್ತಾಳೆ. ಅವಳ ವಜ್ರದ ಹಾರವನ್ನು ಎತ್ತಿಕೊಂಡು ಬಂದು ಹಾವಿನ ಬಿಲದಲ್ಲಿ ಹಾಕು. ಇದರಿಂದ ಹಾವಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ಉಪಾಯ ಹೇಳಿಕೊಟ್ಟಿತು.

ಕಾಗೆ ಹಾಗೇ ಮಾಡಿತು. ಅದನ್ನು ನೋಡಿದ ಸೈನಿಕರು ಹಾರವನ್ನು ಹೊರಕ್ಕೆ ತೆಗೆಯಲು ಹೋದರು. ಆಗ ಬಿಲದಲ್ಲಿದ್ದ ಹಾವು ಬುಸ್ ಬುಸ್ ಎಂದು ಹೊರಕ್ಕೆ ಬಂದಿತು. ಸೈನಿಕರು ತಂದಿದ್ದ ಆಯುಧಗಳನ್ನು ನೋಡಿದ ಹಾವು ಹೆದರಿಕೊಂಡು ಆ ಜಾಗ ಬಿಟ್ಟು ಮತ್ತೆ ಎಂದೂ ಬರುವುದಿಲ್ಲ ಎಂದು ಓಡಿಹೋಯಿತು. ದುಷ್ಟ ಹಾವನ್ನು ಹೊರಕ್ಕೆ ಹಾಕಿದ್ದಕ್ಕೆ ಕಾಗೆಗಳು ತುಂಬಾ ಸಂತೋಷಪಟ್ಟವು.

ಸೂಕ್ಷ್ಮ ಆಲೋಚನೆ ಮತ್ತು ಚತುರ ಯೋಜನೆ ಅಪಾಯದ ಸಮಯದಲ್ಲಿ ನಮ್ಮನ್ನು ರಕ್ಷಿಸುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಪ್ರೀತಿ

4ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 8, 2018

ಸ್ನೇಹಲೋಕ

ಚಿತ್ರ ಕೃಪೆ : ಗೂಗಲ್

ಗಿಳಿ ಪಂಜರದಲ್ಲಿರುತ್ತದೆ
ನನ್ನ ನಿನ್ನ ಸ್ನೇಹ ಮನಸ್ಸಿನಲ್ಲಿ ಹಸಿರಾಗಿರುತ್ತದೆ.

ನಾನು ಯಾವುದನ್ನು ಮರೆತರೂ
ನಮ್ಮ ಸ್ನೇಹವನ್ನು ಎಂದೂ ಮರೆಯಲಾಗದು.

ಈ ಲೋಕದಲ್ಲಿ ಏನೆಲ್ಲಾ ಮರೆಯಬಹುದು
ಆದರೆ ನನ್ನ ಸ್ನೇಹಿತರನ್ನು ಮರೆಯುವುದಿಲ್ಲ.

ದೇವತೆಗಳು ಬಯಸಿದ್ದು ದೇವಲೋಕ
ಅಸುರರು ಬಯಸಿದ್ದು ಅಸುರಲೋಕ
ಆದರೆ ನಾವು ಬಯಸಿದ್ದು ಸ್ನೇಹಲೋಕ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ದಿವ್ಯ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 7, 2018

ನಾನು ಯಾರು ಗೊತ್ತೆ?


1.
ಹಸಿರು ಪುಕ್ಕ, ಕೆಂಪು ಕೊಕ್ಕು
ನೆಟ್ಟ ಕಣ್ಣು, ಊಟ ಹಣ್ಣು.
ನಾನು ಯಾರು ಗೊತ್ತೆ?

2.
ಸೋಗೆ ಗರಿ, ಸೊಗಸು ನಾಟ್ಯ
ನೂರು ನೂರು ಕಣ್ಣು.
ನಾನು ಯಾರು ಗೊತ್ತೆ?

3.
ದೊಡ್ಡ ದೇಹ, ಮೋಟು ಬಾಲ
ಕಣ್ಣು ಸಣ್ಣ, ಸಂಘಜೀವಿ.
ನಾನು ಯಾರು ಗೊತ್ತೆ?

4.
ಬಾಲ ಬಹಳ ಚಿಕ್ಕದು, ವಾಸ ನೀರಿನಲ್ಲಿ
ನನ್ನನ್ನು ಎಲ್ಲರೂ ತಿನ್ನುತಾರೆ.
ನಾನು ಯಾರು ಗೊತ್ತೆ?

5.
ಅಂಗಣ್ಣ ಮಂಗಣ್ಣ
ಅಂಗಿ ಬಿಚ್ಕೊಂಡು ನುಂಗಣ್ಣ.
ನಾನು ಯಾರು ಗೊತ್ತೆ?

6.
ಹಸಿರು ಗಿಡದಲ್ಲಿ
ಮೊಸರು ಚೆಲ್ಲಿದೆ.
ನಾನು ಯಾರು ಗೊತ್ತೆ?

7.
ಒಂದೇ ಮನೆ
ನೂರಾರು ಬಾಗಿಲು.
ನಾನು ಯಾರು ಗೊತ್ತೆ?
ಉತ್ತರಗಳು
4. ಮೀನು
7. ಹುತ್ತ
1. ಗಿಳಿ
5. ಬಾಳೆಹಣ್ಣು
3. ಆನೆ
6. ಮಲ್ಲಿಗೆ ಹೂವು
2. ನವಿಲು


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಭೂಮಿಕ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 6, 2018

ಮಂಗನ ನ್ಯಾಯ

ಚಿತ್ರ ಕೃಪೆ : ಗೂಗಲ್

ಒಮ್ಮೆ ಎರಡು ಬೆಕ್ಕುಗಳು ಕೂಡಿ ಬೆಣ್ಣೆಯನ್ನು ಕದ್ದವು. ಕದ್ದ ಬೆಣ್ಣೆಯನ್ನು ಹಂಚಿಕೊಳ್ಳತೊಡಗಿದವು. ಹಂಚುವಾಗ ಸ್ವಲ್ಪ ಹೆಚ್ಚು ಕಡಿಮೆ ಆಯಿತು. ಅಷ್ಟಕ್ಕೇ ಎರಡೂ ಬೆಕ್ಕುಗಳು ದೊಡ್ಡ ಜಗಳ ಮಾಡತೊಡಗಿದವು.

ಇದನ್ನು ನೊಡುತ್ತಾ ಹತ್ತಿರದ ಮರದಲ್ಲಿ ಕೂತಿದ್ದ ಮಂಗವು ತಕ್ಷಣ ಅಲ್ಲಿಗೆ ಬಂದು, ‘ನಾನು ನಿಮಗೆ ಸರಿಯಾಗಿ ಹಂಚಿ ನ್ಯಾಯ ಕೊಡಿಸುತ್ತೇನೆ' ಎಂದು ಹೇಳಿತು. ಬೆಕ್ಕುಗಳು ಒಪ್ಪಿಕೊಂಡವು. ಮಂಗವು ಎಲ್ಲಾ ಬೆಣ್ಣೆಯನ್ನು ಬೆಕ್ಕುಗಳಿಂದ ಪಡೆದುಕೊಂಡಿತು. ಒಂದು ತಕ್ಕಡಿಯನ್ನು ತಂದು ಇದ್ದ ಎಲ್ಲಾ ಬೆಣ್ಣೆಯನ್ನು ತಕ್ಕಡಿಯ ಎರಡೂ ಬಟ್ಟಲುಗಳಿಗೆ ಹಾಕಿತು. ಒಂದು ಒಟ್ಟಲು ಮೇಲೆ ಮತ್ತು ಇನ್ನೊಂದು ಬಟ್ಟಲು ಕೆಳಗೆ ಬಂದಿತು. ಕೆಳಗೆ ಬಂದ ಬಟ್ಟಲಿನಲ್ಲಿ ಬೆಣ್ಣೆ ಹೆಚ್ಚಾಗಿದೆ ಎಂದು ಅದರಲ್ಲಿ ಒಂದಿಷ್ಟು ಬೆಣ್ಣೆಯನ್ನು ಮಂಗ ತಿಂದಿತು. ಆಗ ಮೇಲೆ ಏರಿದ್ದ ಇನ್ನೊಂದು ಬಟ್ಟಲು ಕೆಳಕ್ಕೆ ಬಂತು. ಈಗ ಇದು ಹೆಚ್ಚಾಗಿದೆ ಎಂದು ಮಂಗ ಅದರಲ್ಲಿದ್ದ ಸ್ವಲ್ಪ ಬೆಣ್ಣೆಯನ್ನು ತಿಂದಿತು.

ಹೀಗೆ ಮಂಗವು ಆ ಬಟ್ಟಲಿನಲ್ಲೊಮ್ಮೆ, ಈ ಬಟ್ಟಲಿನಲ್ಲೊಮ್ಮೆ ತಿನ್ನುತ್ತಾ ಹೋಯಿತು. ಬೆಣ್ಣೆ ಖಾಲಿಯಾಗುತ್ತಾ ಬಂದಿತು. ನ್ಯಾಯ ಸಿಗುವುದೆಂದು ಕುಳಿತ ಬೆಕ್ಕುಗಳು ಕಣ್ಣು ಕಣ್ಣು ಬಿಡುತ್ತಿದ್ದವು. ಮಂಗವು ತಕ್ಕಡಿಯಲ್ಲಿದ್ದ ಎಲ್ಲಾ ಬೆಣ್ಣೆಯನ್ನು ತಿಂದು ಖಾಲಿಮಾಡಿತು. ಬೆಣ್ಣೆಯನ್ನು ಕಳೆದುಕೊಂಡ ಬೆಕ್ಕುಗಳು ತಮ್ಮಲ್ಲಿ ಜಗಳವಾಡಿಕೊಂಡು ಒಂದಿಷ್ಟೂ ಬೆಣ್ಣೆ ಸಿಗದೇ ನಿರಾಶೆಯಾದವು. ಮಂಗ ಖುಷಿಯಿಂದ ತನ್ನ ಕೈಗಳಿಗೆ ಮೆತ್ತಿದ್ದ ಬೆಣ್ಣೆಯನ್ನು ಸವಿಯುತ್ತಾ ಮರ ಏರಿತು.

ಇಬ್ಬರ ಜಗಳ ಮೂರನೆಯವನಿಗೆ ಲಾಭ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಪವಿತ್ರ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 5, 2018

ಕಿತ್ತೂರು ಚೆನ್ನಮ್ಮ

ಚಿತ್ರ ಕೃಪೆ : ಗೂಗಲ್


ಕೇಳಿ ಮಕ್ಕಳೆ, ನಾಳಿನ ಪ್ರಜೆಗಳೆ
ಕೇಳಿರಿ ಹೇಳುವೆ ಮಾತೊಂದ
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ
ಕಿತ್ತೂರು ರಾಣಿಯ ಕಥೆಯನ್ನ.


ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ
ವೀರ ಪುತ್ರಿಯು ಜನಿಸಿಹಳು
ದೊಳಪ್ಪ ದೇಸಾಯಿ ಪದ್ಮಾವತಿಯ
ಕುಲಪುತ್ರಿಯೇ ಚೆನ್ನಮ್ಮ.


ತಂದೆಯೊಡನೆ ಪುರುಷ ವೇಷದಿ
ಬೇಟೆಗೆ ಕಾಡಿಗೆ ಹೋಗಿಹಳು
ಕತ್ತಿ ವರಸೆ, ಬಿಲ್ಲು ಬಾಣ
ಕುದುರೆ ಸವಾರಿಯ ಕಲಿತಿಹಳು.


ಕಿತ್ತೂರು ದೊರೆ ಮಲ್ಲಸರ್ಜನ
ಪ್ರೀತಿಯ ಮಡದಿ ಎನಿಸಿಹಳು
ಮಲ್ಲಸರ್ಜನ ಮರಣದ ನಂತರ
ಕಿತ್ತೂರು ರಾಣಿಯೇ ಆಗಿಹಳು.


ನಾಡಿನ ಮೇಲೆ ಬ್ರಿಟಿಷರ ದಬ್ಬಾಳಿಕೆಯ
ಧೈರ್ಯದಿ ಎದುರಿಸಿ ಹೋರಾಡಿಹಳು
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ
ವೀರ ವನಿತೆಯಾಗಿ ಅಮರಳಾಗಿಹಳು.


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಗೌತಮಿ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 4, 2018

ಮುಗ್ಧ ಹುಡುಗನ ಕಥೆ

ಒಂದು ಊರಿನಲ್ಲಿ ಒಬ್ಬ ಹುಡುಗ ಇದ್ದ. ಆ ಹುಡುಗನಿಗೆ ತಂದೆ, ತಾಯಿ, ತಂಗಿ ಯಾರೂ ಇರಲಿಲ್ಲ. ಪಕ್ಕದ ಮನೆಯಲ್ಲಿ ಒಬ್ಬರು ಅಜ್ಜಿ ವಾಸವಿದ್ದರು. ಆ ಅಜ್ಜಿಯೇ ಈ ಹುಡುಗನನ್ನು ನೋಡಿಕೊಳ್ಳುತ್ತಿದ್ದರು.

ಒಂದು ದಿನ ಆ ಹುಡುಗನು ರಾತ್ರಿ ಆಕಾಶ ನೋಡುತ್ತಾ ಕುಳಿತಿದ್ದ. ಅಜ್ಜಿಯನ್ನು "ಅಜ್ಜಿ, ನಕ್ಷತ್ರಗಳು, ತಾರೆಗಳು ಅಂದ್ರೆ ಏನು?" ಅಂತ ಕೇಳಿದ ಹುಡುಗ. ಆಗ ಅಜ್ಜಿ ಹೇಳಿದರು "ನೋಡು ಮಗೂ, ಈಗ ಯಾರಾದರೂ ಸತ್ತರೆ ಅವರು ಮೇಲೆ ಆಕಾಶಕ್ಕೆ ಹೋಗಿ ನಕ್ಷತ್ರ ಆಗ್ತಾರೆ". ಹುಡುಗ ತುಂಬಾ ಕುತೂಹಲದಿಂದ "ಅಜ್ಜಿ, ಹಾಗಾದ್ರೆ ನನ್ನ ಅಪ್ಪ, ಅಮ್ಮ, ಆಮೇಲೆ ತಂಗಿ ಎಲ್ಲರೂ ನಕ್ಷತ್ರ ಆಗಿದಾರಾ?" ಅಂತ ಕೇಳಿದ. ಆಗ ಅಜ್ಜಿಗೆ ತುಂಬಾ ದುಃಖ ಆಯಿತು. ಆದ್ರೂ ಅದನ್ನು ತೋರಿಸಿಕೊಳ್ಳದೆ ಹೇಳಿದರು "ಹೌದು ಮಗೂ, ಎಲ್ಲಾರೂ ನಕ್ಷತ್ರ ಆಗಿದಾರೆ".

ಹುಡುಗ ಮೇಲೆ ಆಕಾಶ ನೋಡುತಿದ್ದ, ಆಕಾಶದ ಒಂದು ಮೂಲೆಯಲ್ಲಿ ಪ್ರಕಾಶಮಾನವಾಗಿದ್ದ ಒಂದು ನಕ್ಷತ್ರ ಕಂಡಿತು. ಆಗ ಹುಡುಗ "ಅಜ್ಜಿ, ನೋಡು ಅಲ್ಲಿ, ನನ್ನ ಅಪ್ಪ ಹೇಗೆ ಹೊಳೀತಿದ್ದಾರೆ" ಅಂತ ಹೇಳಿದ. "ಅಲ್ಲೇ ಪಕ್ಕದಲ್ಲಿ ನನ್ನ ಅಮ್ಮ ಇದ್ದಾರೆ. ನೋಡು, ಅಲ್ಲಿ ಸ್ವಲ್ಪ ದೂರದಲ್ಲಿ ತಂಗಿ ಇದ್ದಾಳೆ" ಅಂತ ನಕ್ಷತ್ರಗಳನ್ನು ತೋರಿಸಿ ಅಜ್ಜಿಗೆ ಹೇಳಿದ ಹುಡುಗ. ಇಬ್ಬರೂ ಆಕಾಶ ನೋಡುತ್ತಾ ಇದ್ದರು.

ಹುಡುಗ ಮತ್ತೆ ಅಜ್ಜಿನ ಕೇಳಿದ "ಅಜ್ಜಿ, ನಾನೂ ಅವರ ಹತ್ತಿರ ಹೋಗಬೇಕು. ಹೋಗಕ್ಕಾಗಲ್ವಾ?". ಆಗ ಅಜ್ಜಿ "ಯಾರು ಬೇಕಾದರೂ ಅಲ್ಲಿಗೆ ಹೋಗಕ್ಕಾಗಲ್ಲ ಮಗು. ಈ ಭೂಮಿಯ ಋಣ ಮುಗಿದವರು ಮಾತ್ರ ಅಲ್ಲಿಗೆ ಹೋಗೋದು" ಅಂತ ಹೇಳಿದರು. ಹುಡುಗನಿಗೆ ಉಪಾಯ ಹೊಳೆಯಿತು, ಅವನು ಹೇಳಿದ "ಆಕಾಶಕ್ಕೆ ವಿಮಾನಗಳು ಹೋಗ್ತಾವಲ್ಲ, ನಾನು ವಿಮಾನದಲ್ಲಿ ಅವರ ಹತ್ತಿರ ಹೋಗ್ತೀನಿ ಅಜ್ಜಿ". ಅದಕ್ಕೆ ಅಜ್ಜಿ ಸಮಾಧಾನದಿಂದ ನಗುತ್ತಿದ್ದರು.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಸಾಧ್ವಿಕ್

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 3, 2018

ಸಂತಸದ ಸಂತೆ

ಚಿತ್ರ ಕೃಪೆ : ಗೂಗಲ್

ಒಂದಿನ ನಾನು ಪೇಟೆಗೆ ಹೋದೆನು
ಸಂತೆಯು ನಡೆದಿತ್ತು
ಹೂವಿನ ಅಂಗಡಿ ಎದುರಿಗೆ ನಿಲ್ಲಲು
ವಾಸನೆ ಬಡಿದಿತ್ತು
ಘಮಘಮ ವಾಸನೆ ಬರುತ್ತಿತ್ತು.


ಬಣ್ಣವು ತಿರುಗಿದ ಮಾವಿನ ಹಣ್ಣಿನ
ರಾಶಿಯು ಬಿದ್ದಿತ್ತು
ಚಣ್ಣದ ಜೇಬಿಗೆ ಕೈಯನು ತುರುಕಿದೆ
ಝಣಝಣ ಎನುತ್ತಿತ್ತು
ಬಾಯೊಳು ತನನನ ಹಾಡಿತ್ತು.


ನೋಡುತ ಮುಂದಕೆ ಹೋದೆನು ನಾನು
ಜಿಲೇಬಿ ನಗುತಿತ್ತು
ದಳೇದ ಉಂಡಿ ಗಡಾದ ಅಂಟು
ಮನವನು ಸೆಳೆದಿತ್ತು
ನನ್ನನು ನಿಲ್ಲಿಸಿ ಬಿಟ್ಟಿತ್ತು.


ಕರಿದವಲಕ್ಕಿ ಹುರಿದಾ ಕಡಲೆ
ಎಲ್ಲಾ ನರೆದಿತ್ತು
ಉಬ್ಬಿದ ಪೂರಿ ಬಿಸಿಬಿಸಿ ಬಾಜಿ
ಬಾ ಬಾ ಎನುತಿತ್ತು
ಬಾಯೊಳು ನೀರೇ ಸುರಿದಿತ್ತು..


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ವರ್ಷ

5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 2, 2018

ಸೋಮಾರಿ ಸೋಮಣ್ಣ

ಸೋಮಣ್ಣ ಒಬ್ಬ ಸೋಮಾರಿ. ತನ್ನದೇ ಹೊಲ ಇದ್ದರೂ ಒಂದು ದಿನವೂ ಹೊಲದಲ್ಲಿ ಹೋಗಿ ಕೆಲಸ ಮಾಡಿದವನಲ್ಲ. ಅವರಿವರು ಕೊಟ್ಟಿದ್ದನ್ನಷ್ಟೆ ಪಡೆದು ಬದುಕುತ್ತಿದ್ದ ಅವನಿಗೆ ಶೇಂಗಾ ಎಂದರೆ ಪಂಚಪ್ರಾಣ. ಅದರಲ್ಲೂ ಹುರಿದ ಶೇಂಗಾ ಎಂದರೆ ಅತೀ ಪ್ರೀತಿ.

ಒಮ್ಮೆ ಹೀಗೆಯೇ ಹುರಿದ ಶೇಂಗಾ ಬೀಜ ತಿನ್ನುವಾಗ ಸೋಮಣ್ಣನಿಗೆ ಒಂದು ಆಲೋಚನೆ ಹೊಳೆಯಿತು. ತನ್ನ ಖಾಲಿ ಹೊಲದಲ್ಲಿ ಶೇಂಗಾ ಬೀಜ ಬಿತ್ತಿದರೆ ಸಾಕಷ್ಟು ಶೇಂಗಾ ಬೀಜ ದೊರೆಯುತ್ತದೆ, ಬೇರೆಯವರನ್ನು ಕೇಳುವ ಅವಶ್ಯಕತೆ ಇರುವುದಿಲ್ಲ ಎಂದು ತೀರ್ಮಾನಿಸಿದ. ಆದರೆ ಹಸಿ ಶೇಂಗಾ ಬೀಜಕ್ಕಿಂತ ಹುರಿದ ಶೇಂಗಾ ಬೀಜ ತಿನ್ನಲು ಚೆಂದ, ಏನು ಮಾಡುವುದು ಎಂದು ಯೋಚಿಸಿ ಒಂದು ತೀರ್ಮಾನಕ್ಕೆ ಬಂದ. ಹಸಿ ಶೇಂಗಾ ಬೀಜಗಳನ್ನು ತನ್ನ ಹೊಲದಲ್ಲಿ ಬಿತ್ತುವುದಕ್ಕಿಂತ, ಹುರಿದ ಶೇಂಗಾ ಬೀಜ ಬಿತ್ತಿದರೆ, ಹುರಿದ ಶೇಂಗಾ ಬೀಜಗಳೇ ಬೆಳೆಯುತ್ತವೆ. ಮತ್ತೆ ಶೇಂಗಾ ಬೀಜಗಳನ್ನು ಹುರಿಯುವ ತೊಂದರೆ ಇರುವುದಿಲ್ಲ ಎಂದು ಯೋಚಿಸಿದ.

ಬೆಳೆ ಬೆಳೆಯಲು ಎಂತಹ ಬೀಜ ಬಿತ್ತಬೇಕು ಎಂದು ತಿಳಿಯದ ಸೋಮಣ್ಣ ಮರುದಿನ ಹೊಲದಲ್ಲಿ ಒಲೆ ಮಾಡಿ ಶೇಂಗಾ ಬೀಜಗಳನ್ನು ಹುರಿಯತೊಡಗಿದ. ಇದನ್ನು ನೋಡಿದ ಅಕ್ಕ-ಪಕ್ಕದ ಹೊಲದವರು ಕೊನೆಗೂ ಸೋಮಣ್ಣ ಸೋಮಾರಿತನ ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಖುಷಿಪಟ್ಟರು.

ದಿನಗಳು ಕಳೆದವು. ಎಲ್ಲರ ಹೊಲದಲ್ಲಿ ಹಸಿರು ಸಸಿಗಳು ಚೆನ್ನಾಗಿ ಬೆಳೆದವು. ಆದರೆ ಸೋಮಾರಿ ಸೋಮಣ್ಣನ ಹೊಲದಲ್ಲಿ ಒಂದು ಸಸಿಯೂ ಹುಟ್ಟಲಿಲ್ಲ. ಸೋಮಾರಿ ಸೋಮಣ್ಣ ಕೊನೆಗೂ ಪಾಠ ಕಲಿಯಲಿಲ್ಲ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಅಂಜಲಿ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 1, 2018

ಅಮ್ಮ

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ನಾಡಹಬ್ಬದ ಶುಭಾಶಯಗಳು.

ನವಂಬರ್ 2018ರ ಕಹಳೆಯ ಎಂಟನೇ ಆವೃತ್ತಿ ಕಾರ್ಯಕ್ರಮವನ್ನು ಸಮಸ್ತ ಕನ್ನಡಿಗರ ಪರವಾಗಿ ಮಾತೃಸ್ವರೂಪಿಯಾದ ಕನ್ನಡಾಂಬೆಗೆ ಶ್ರದ್ಧಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.

ಚಿತ್ರ ಕೃಪೆ: ಗೂಗಲ್

ಹುಟ್ಟುವಾಗ ಅಮ್ಮ
ಅಳುವಾಗ ಅಮ್ಮ
ನಗುವಾಗ ಅಮ್ಮ
ಬಿದ್ದಾಗ ಅಮ್ಮ
ತಿನ್ನುವಾಗ ಅಮ್ಮ
ಮಲಗುವಾಗ ಅಮ್ಮ..

ನಾವು ಎಲ್ಲಿದ್ದರೂ
ಯಾವಾಗಲೂ
ಜೊತೆ ಇರುತಾರೆ ಅಮ್ಮ
ಕಾರಣ ಅವರಿಂದಲೇ
ಸಿಕ್ಕಿದೆ ನಮಗೆ
ಈ ಜನ್ಮ..


ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಆಯಿಷ, ಎ.

3ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter